
3 ತಿಂಗಳ ಗರ್ಭಿಣಿಯರು ಕೆಲಸಕ್ಕೆ ಸೇರದಂತೆ ತಡೆ: SBIಗೆ ನೋಟಿಸ್
ನವದೆಹಲಿ, ಜನವರಿ 29: ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿಯರು ಕೆಲಸಕ್ಕೆ ಸೇರದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತಡೆದಿದ್ದಕ್ಕಾಗಿ ದೆಹಲಿ ಮಹಿಳಾ ಆಯೋಗವು ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಎನ್‌ಡಿಟಿವಿ ವರದಿ ಮಾಡಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್‌ಬಿಐ 3 ತಿಂಗಳು ಮೇಲ್ಪಟ್ಟ ಗರ್ಭಿಣಿಯನ್ನು ತಾತ್ಕಾಲಿಕವಾಗಿ ಯೋಗ್ಯರಲ್ಲ ಎಂದು ಕರೆದಿದೆ ಎಂದು ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.
ಬ್ಯಾಂಕಿನ ಈ ಕ್ರಮವು ತಾರತಮ್ಯ ಮತ್ತು ಕಾನೂನು ಬಾಹಿರವಾಗಿದೆ, ಏಕೆಂದರೆ ಇದು ಕಾನೂನಿನ ಅಡಿಯಲ್ಲಿ ಒದಗಿಸಲಾದ ಹೆರಿಗೆ ಪ್ರಯೋಜನಗಳ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.
ಇದು ತಾರತಮ್ಯ ಮತ್ತು ಕಾನೂನು ಬಾಹಿರವಾಗಿದೆ, ಇಂತಹ ಮಹಿಳಾ ವಿರೋಧಿ ನಿಯಮವನ್ನು ಹಿಂಪಡೆಯುವಂತೆ ನಾವು ಅವರಿಗೆ ನೋಟಿಸ್ ನೀಡಿದ್ದೇವೆ ಎಂದು ಮಲಿವಾಲ್ ತಿಳಿಸಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3 ತಿಂಗಳ ಮೇಲ್ಪಟ್ಟ ಗರ್ಭಿಣಿಯರನ್ನು ಸೇವೆಗೆ ಸೇರದಂತೆ ತಡೆಯುವ ಮಾರ್ಗಸೂಚಿಗಳನ್ನು ಹೊರಡಿಸಿದೆ ಹಾಗೆಯೇ ಅವರನ್ನು ತಾತ್ಕಾಲಿಕವಾಗಿ ಅನರ್ಹರು ಎಂದು ಹೇಳಿದೆ.