ಪುಟ್ಟ ಕಂದನ ಎದುರೇ ತಾಯಿಯನ್ನ ಮರಕ್ಕೆ ಕಟ್ಟಿ ಥಳಿತ, ಸಿಎಂ ಕ್ಷೇತ್ರದಲ್ಲೇ ಅಮಾನವೀಯ ಘಟನೆ
ಪ್ರಜಾರಾಜ್ಯ ಎಂದು ಭಾಷಣ ಬಿಗಿಯುವ ಮುಖ್ಯಮಂತ್ರಿಯ ಸ್ವಕ್ಷೇತ್ರದಲ್ಲೇ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. 80,000 ರೂಪಾಯಿ ಸಾಲ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ತನ್ನ ಪುಟ್ಟ ಕಂದಮ್ಮನ ಎದುರೇ ಮರಕ್ಕೆ ಕಟ್ಟಿಹಾಕಿ ಬಳಿಕ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದೆಡೆ ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿದೆಯಲ್ಲ ಎಂದು ಎಲ್ಲರೂ ಆಕ್ರೋಶ ಹೊರಹಾಕುತ್ತಿದ್ದಾರೆ. ಮಹಿಳೆಯನ್ನು ಕಟ್ಟಿ ಥಳಿಸಿರುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸ್ವಂತ ಕ್ಷೇತ್ರ ಕುಪ್ಪಂನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸಾಲ ಮರುಪಾವತಿಸಲು ವಿಫಲವಾದ ಕಾರಣ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಆಘಾತಕಾರಿ ಘಟನೆಗೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸ್ಥಳೀಯರು ಮತ್ತು ಪೊಲೀಸರ ಪ್ರಕಾರ, ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಹಿಳೆಯ ಪತಿ ತಿಮ್ಮರಾಯಪ್ಪ ಸುಮಾರು ಮೂರು ವರ್ಷಗಳ ಹಿಂದೆ ಅದೇ ಗ್ರಾಮದ ಮುನಿಕಣ್ಣಪ್ಪ ಎಂಬ ವ್ಯಕ್ತಿಯಿಂದ 80,000 ರೂಪಾಯಿ ಸಾಲ ಪಡೆದಿದ್ದರು. ಅದನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಸ್ತುತ ದಂಪತಿ ಇಬ್ಬರೂ ತಮ್ಮ ಮಕ್ಕಳೊಂದಿಗೆ ವಾಸಿಸಲು ಗ್ರಾಮವನ್ನು ತೊರೆದಿದ್ದರು. ಆ ಮಹಿಳೆಯು ತನ್ನ ಮಗನ ಅಧ್ಯಯನ ಪ್ರಮಾಣಪತ್ರಕ್ಕಾಗಿ ಗ್ರಾಮಕ್ಕೆ ಬಂದಿದ್ದರು. ವಿಷಯ ತಿಳಿದ ಮುನಿಕಣ್ಣಪ್ಪ ಮತ್ತು ಅವರ ಕುಟುಂಬ ಸದಸ್ಯರು ಆ ಮಹಿಳೆಯನ್ನ ಅವಮಾನಿಸಿ, ಅವರ ಮಗುವಿನ ಮುಂದೆಯೇ ಹಗ್ಗದಿಂದ ಮರಕ್ಕೆ ಕಟ್ಟಿ ಸಾಲ ಮರುಪಾವತಿಸುವಂತೆ ಪೀಡಿಸಿದ್ದಾರೆ.
ಕಠಿಣ ಕ್ರಮಕ್ಕೆ ಸಿಎಂ ನಾಯ್ಡು ಆದೇಶ
ಈ ಮಾಹಿತಿ ತಿಳಿದ ನಂತರ ಕುಪ್ಪಂ ನಗರ ಪೊಲೀಸರು ನಾರಾಯಣಪುರಂ ತಲುಪಿ ಆ ಮಹಿಳೆಯನ್ನು ಅಲ್ಲಿಂದ ಬಿಡಿಸಿದ್ದಾರೆ. ಬಳಿಕ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆ ಗ್ರಾಮದ ಮುನಿಕೃಷ್ಣಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕುಪ್ಪಂನಲ್ಲಿ ನಡೆದ ಘಟನೆ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ.
ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅಮಾನವೀಯ ಹಲ್ಲೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳವಾರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಚಿತ್ತೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆರೋಪಿಯನ್ನು ಬಂಧಿಸಿರುವುದಾಗಿ ಎಸ್‌ಪಿ ತಿಳಿಸಿದ್ದಾರೆ. ಪೊಲೀಸರ ಪ್ರಕಾರ ತೆಲುಗು ದೇಶಂ ಪಕ್ಷದ (ಟಿಡಿಪಿ) ಸದಸ್ಯ ಎಂದು ಹೇಳಲಾಗುವ ಮಣಿಕಪ್ಪ, ಅವರ ಪತ್ನಿ ಮತ್ತು ಇತರರನ್ನು ಬಂಧಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿ ನಾಯ್ಡು ಪೊಲೀಸ್ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.












Click it and Unblock the Notifications