ರೋಚಕ ಹಂತಕ್ಕೆ ತಲುಪಿದೆ ಗುಜರಾತ್ ಚುನಾವಣಾ ಫಲಿತಾಂಶ
Recommended Video

ನವದೆಹಲಿ, ಡಿಸೆಂಬರ್ 18 : ಗುಜರಾತ್ ಚುನಾವಣಾ ನಾಟಕ ರಂಗದಲ್ಲಿ ಕ್ಷಣಕ್ಷಣಕ್ಕೂ ಬಣ್ಣಗಳು ಬದಲಾಗುತ್ತಿವೆ. ತಕ್ಕಡಿ ಒಂದು ಬಾರಿ ಬಿಜೆಪಿಯತ್ತ ತೂಗಿದರೆ, ಮತ್ತೊಂದು ಬಾರಿ ಕಾಂಗ್ರೆಸ್ಸಿನಲ್ಲಿ ತೂಗುತ್ತಿದೆ.
ಫಲಿತಾಂಶ ತಿಳಿಯಲು ವೆಬ್ ಸೈಟ್ ಮತ್ತು ಟಿವಿ ಕಣ್ಣು ನೆಟ್ಟು ಕುಳಿತಿರುವ ಜನರ ಎದೆಬಡಿತವೇ ಏರಿಳಿಯುವಂತೆ ಮುನ್ನಡೆ ಫಲಿತಾಂಶಗಳು ಬದಲಾಗುತ್ತಿವೆ.
ಮತಎಣಿಕೆ ಇದೀಗ ರೋಚಕ ಹಂತಕ್ಕೆ ತಲುಪಿದ್ದು, ಭಾರತೀಯ ಜನತಾ ಪಕ್ಷ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಂಡು ಬೀಗುತ್ತಿದ್ದರೆ, ಕೆಲವೇ ನಿಮಿಷಗಳಲ್ಲಿ ಈ ಸಂಖ್ಯೆ 90ಕ್ಕಿಳಿದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹಣೆಯ ಮೇಲೆ ಚಿಂತೆಯ ನೆರಿಗೆಗಳನ್ನು ಮೂಡಿಸಿದೆ.

ಚುನಾವಣೆಯ ಚಮತ್ಕಾರ ಅಂದ್ರೆ ಇದೇ ಅಲ್ಲವೆ? ಮತದಾರನ ಮನದಲ್ಲಿ ಏನಿದೆ ಎಂದು ಆ ಬ್ರಹ್ಮನಿಗೂ ಗೊತ್ತಾಗುವುದಿಲ್ಲ, ಇನ್ನು ಅಮಿತ್ ಶಾ, ನರೇಂದ್ರ ಮೋದಿ, ರಾಹುಲ್ ಗಾಂಧಿ ಅವರು ಹೇಗೆ ತಿಳಿಯುತ್ತಾರೆ? ಅಧಿಕಾರ ಎಂಬುದು ಯಾವ ಪಕ್ಷಕ್ಕೂ ಶಾಶ್ವತವಲ್ಲ ಎಂಬ ಪಾಠವನ್ನು ರಾಜಕೀಯ ಪಕ್ಷಗಳಿಗೆ ಕಲಿಸುವವನೇ ಮತದಾರ.
ಕೆಲವೇ ನಿಮಿಷಗಳ ಹಿಂದೆ ಮುನ್ನಡೆಯಲ್ಲಿ ಸೆಂಚುರಿ ಬಾರಿಸಿತ್ತು ಬಿಜೆಪಿ. 60 ಕ್ಷೇತ್ರಗಳಲ್ಲಿ ಮಾತ್ರ ಮುಂದಿದ್ದ ಕಾಂಗ್ರೆಸ್ಸಿನ ಮೊಗದಲ್ಲಿ ಇದೀ ಅಲ್ಪ ನಗೆ ಮೂಡಿದೆ. ಎರಡೂ ಪಕ್ಷಗಳು ಜಿದ್ದಾಜಿದ್ದಿ ಕಾಳಗಕ್ಕೆ ಇಳಿದಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಇಂಥ ಬದಲಾವಣೆಯನ್ನು ನಿರೀಕ್ಷಿಸಿರಲಿಕ್ಕಿಲ್ಲ.
182 ಕ್ಷೇತ್ರಗಳಿರುವ ಗುಜರಾತ್ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಯಾವುದೇ ಪಕ್ಷಕ್ಕೆ ಬೇಕು 93 ಕ್ಷೇತ್ರಗಳು. ಈ ಕ್ಷೇತ್ರಗಳನ್ನು ಪಡೆಯಲು ಬಿಜೆಪಿ ಏಕೋ ಏದುಸಿರು ಬಿಡುತ್ತಿದೆ. ಕಾಂಗ್ರೆಸ ಈ ಸಂಖ್ಯೆಯ ಹತ್ತಿರ ಬಂದರೂ ಒಂದು ರೀತಿಯಲ್ಲಿ ಬಿಜೆಪಿ ವಿರುದ್ಧ ಜಯ ಸಾಧಿಸಿದಂತೆಯೆ.












Click it and Unblock the Notifications