ಕರ್ನಾಟಕ ಚುನಾವಣೆ ಫಲಿತಾಂಶದ ಮೇಲೆ ಚಂದ್ರಶೇಖರ್ ರಾವ್ ಕಣ್ಣು!
ಬೆಂಗಳೂರು, ಮೇ 05; ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮೇ 10ರಂದು ನಡೆಯಲಿದೆ. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ದೇಶದ ಹಲವು ರಾಜ್ಯಗಳು ಕರ್ನಾಟಕದ ಚುನಾವಣೆ ಮೇಲೆ ಕಣ್ಣಿಟ್ಟಿವೆ. ಅದರಲ್ಲೂ ಪಕ್ಕದ ರಾಜ್ಯ ತೆಲಂಗಾಣ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆ ಚುನಾವಣೆಯೂ ಈ ವರ್ಷ ನಡೆಯಲಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಎರಡನೇ ಅವಧಿಗೆ ಅಧಿಕಾರ ನಡೆಸುತ್ತಿದ್ದಾರೆ. ಅವರು 2024ರ ಲೋಕಸಭೆ ಚುನಾವಣೆ ಮೇಲೆ ಸಹ ಹೆಚ್ಚಿನ ಗಮನಹರಿಸಿದ್ದಾರೆ.

ಕೆ. ಚಂದ್ರಶೇಖರ್ ರಾವ್ ಮತ್ತು ಕರ್ನಾಟಕದ ಜೆಡಿಎಸ್ ನಾಯಕರ ಸ್ನೇಹವೇನು ಗುಟ್ಟಾಗಿ ಉಳಿದಿಲ್ಲ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೊತೆಗೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಫಲಿತಾಂಶ ಬಂದರೆ ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಕೆ. ಚಂದ್ರಶೇಖರ್ ರಾವ್ ಲೆಕ್ಕಾಚಾರವಾಗಿದೆ.
ಎರಡು ರಾಷ್ಟ್ರೀಯ ಪಕ್ಷಗಳು; ತೆಲಂಗಾಣ ಚುನಾವಣೆಯಲ್ಲಿ ಕೆ. ಚಂದ್ರಶೇಖರ್ ರಾವ್ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಜಕೀಯ ಪಕ್ಷಗಳನ್ನು ಎದುರಿಸಬೇಕಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸದಾ ಕಿಡಿ ಕಾರುವ ಅವರು ಬಿಜೆಪಿ ನಾಯಕರ ವಿರೋಧ ಕಟ್ಟಿಕೊಂಡಿದ್ದಾರೆ. ಒಂದು ವೇಳೆ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸೋಲು ಕಂಡರೆ ಬಿಆರ್‌ಎಸ್ ಪಕ್ಷದ ಬಲ ಹೆಚ್ಚಲಿದೆ. ದಕ್ಷಿಣ ಭಾರತದ ಜನ ಹೇಗೆ ಬಿಜೆಪಿ ತಿರಸ್ಕಾರ ಮಾಡಿದ್ದಾರೆ ಎಂದು ಹೇಳಲು ಮತ್ತಷ್ಟು ಬಲ ಸಿಗಲಿದೆ.

ತೆಲಂಗಾಣದಲ್ಲಿ ಕೆ. ಚಂದ್ರಶೇಖರ್ ರಾವ್ ಮೊದಲ ಎದುರಾಳಿ ಕಾಂಗ್ರೆಸ್ ಪಕ್ಷ. ಶಾಸಕರ ಖರೀದಿ ಹಗರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಸಹ ಈಗ ಎದುರಾಳಿಯಾಗಿದೆ. ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಅವರು ಕರ್ನಾಟಕದ ಚುನಾವಣೆ ಮೇಲೆ ರಾಜ್ಯದ ಚಿತ್ರಣವೂ ಬದಲಾಗುವ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದ ಕಾಂಗ್ರೆಸ್ ಪಕ್ಷ ಮೂಲ ನಿವಾಸಿಗಳು, ವಲಸಿಗರು ಎಂಬ ಬಣ ರಾಜಕೀಯದಲ್ಲಿ ಸಿಲುಕಿದೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ ನಾಯಕರೆಲ್ಲರೂ ಟಿಡಿಪಿ ಪಕ್ಷ ಬಿಟ್ಟು ಬಂದವರು. ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಸಹ 2017ರಲ್ಲಿ ಟಿಡಿಪಿ ಬಿಟ್ಟು ಕಾಂಗ್ರೆಸ್ ಸೇರಿದವರಾಗಿದ್ದಾರೆ. ಒಂದು ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಪಕ್ಕದ ತೆಲಂಗಾಣದಲ್ಲಿಯೂ ಪಕ್ಷ ಪ್ರಬಲವಾಗಲಿದೆ. ಆಗ ಈ ವರ್ಷದ ಚುನಾವಣಾ ಲೆಕ್ಕಾಚಾರಗಳು ಬದಲಾಗಲಿವೆ.
ತೆಲಂಗಾಣದ ಉಪ ಚುನಾವಣೆಗಳಲ್ಲಿ ಗೆಲವು ಸಾಧಿಸಲು ಬಿಜೆಪಿಗೆ ಸಾಧ್ಯವಾಗಿದೆ. ಆದರೆ ತಳಮಟ್ಟದಲ್ಲಿ ಪಕ್ಷ ಪ್ರಬಲವಾಗಿಲ್ಲ. ಆದರೆ ರಾಜ್ಯದಲ್ಲಿ ಪಕ್ಷದ ಬಾವುಟ ಹಾರಿಸಲು ನಾಯಕರು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಪಕ್ಷದ ಇಬ್ಬರು ಶಾಸಕರಿದ್ದಾರೆ.
ರಾಜ್ಯದಲ್ಲಿ ಪಕ್ಷದ ಪರಿಸ್ಥಿತಿ ಹೇಗಿದೆ? ಎಂದರೆ ಚುನಾವಣೆ ಘೋಷಣೆಯಾದರೆ 119 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಸಹ ಇಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣ ರಾಜ್ಯದಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಬಿಜೆಪಿಗೆ ಅವಕಾಶ ಸಿಕ್ಕಿದಂತೆ ಆಗುತ್ತದೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ರಾಜ್ಯದಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಯಾತ್ರೆ ಮಾಡುತ್ತಿದ್ದಾರೆ. ಬಿಆರ್‌ಎಸ್ ಪಕ್ಷ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿ ಪಕ್ಷದ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆ ಬಿಜೆಪಿ, ಬಿಆರ್‌ಎಸ್ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ.












Click it and Unblock the Notifications