‘ಚಂದ್ರಯಾನ-2’ ಯೋಜನೆ ಸೋಲಿನಿಂದ ಇಸ್ರೋ ವಿಜ್ಞಾನಿಗಳು ಕಲಿತ ಪಾಠ ಏನು?
ಭಾರತೀಯರ ಹೆಮ್ಮೆ 'ಇಸ್ರೋ' ಅದೆಷ್ಟೋ ಯೋಜನೆಗಳನ್ನ ಕಡಿಮೆ ಖರ್ಚಿನಲ್ಲೇ ಮಾಡಿ ತೋರಿಸಿದೆ, ಜಗತ್ತಿನಾದ್ಯಂತ ಹೆಸರು ಗಳಿಸಿದೆ. ಆದರೆ ಅದೊಂದು ಯೋಜನೆಯ ಸೋಲು ಇಸ್ರೋ ವಿಜ್ಞಾನಿಗಳನ್ನು ಕಂಗೆಡಿಸಿತ್ತು. ಹಗಲು & ರಾತ್ರಿ ಲೆಕ್ಕಿಸದೆ ಹಲವು ವರ್ಷ ದುಡಿದ ಯೋಜನೆ ಚಂದ್ರನ ಮೇಲೆ ಬಿದ್ದು, ಮಣ್ಣು ಪಾಲಾಗಿ ಹೋಗಿತ್ತು. ಆದರೆ ಈಗ ಸೋಲಿಗೆ ರಿವೇಂಜ್ ತೆಗೆದುಕೊಳ್ಳುವ ಸಮಯ ಬಂದಿದ್ದು, ಇಸ್ರೋ ತೊಡೆತಟ್ಟಿ ನಿಂತಿದೆ.
ಬಾಹ್ಯಾಕಾಶ ಲೋಕದಲ್ಲಿ ಸೋಲು ಅಥವಾ ಗೆಲುವು ಮಾಮೂಲು. ಹೀಗಿದ್ದರೂ ಇಸ್ರೋ 2019ರಲ್ಲಿ ಕಂಡ ಸೋಲು ಇದೆಯಲ್ಲ, ಅದು ಭಾರಿ ನೋವು ಕೊಟ್ಟಿತ್ತು. ಇದಕ್ಕೆ ಕಾರಣ ತಾಂತ್ರಿಕ ಎನ್ನಬಹುದಾದರೂ ಹಲವು ವರ್ಷದ ಶ್ರಮ ಕೆಲವೇ ಕ್ಷಣಗಳಲ್ಲಿ ವ್ಯರ್ಥವಾಗಿದ್ದು ನೋವು ಹೆಚ್ಚಿಸಿತ್ತು. 'ಚಂದ್ರಯಾನ-2' ಯೋಜನೆ ಇನ್ನೇನು ಚಂದ್ರನ ಮೇಲೆ ಇಳಿಯುವ ಸಂದರ್ಭದಲ್ಲೇ, ಕೊನೇ ಕೆಲವು ಕ್ಷಣಗಳು ಎಡವಟ್ಟಾಗಿ, ಎಲ್ಲಾ ಹಾಳಾಗಿ ಹೋಗಿತ್ತು. ಈ ಸೋಲಿನಿಂದ ಇಸ್ರೋ ಕಲಿತ ಪಾಠ ಮಾತ್ರ ಬೆಟ್ಟದಷ್ಟು. ಹೀಗಾಗಿಯೇ 'ಚಂದ್ರಯಾನ-3' ಸಂಪೂರ್ಣ ಅತ್ಯಾಧುನಿಕವಾಗಿದೆ.

ಅಂದಿನ ಸೋಲು.. ಇಂದಿನ ಯಶಸ್ಸು!
ಅಷ್ಟಕ್ಕೂ 2019ರಲ್ಲಿ ಚಂದ್ರನ ಕಕ್ಷೆಗೆ ವಿಕ್ರಮ್ ಲ್ಯಾಂಡರ್ ಹಾಜರಿ ಹಾಕಿದರೂ ಸೆಪ್ಟೆಂಬರ್ 6ರಂದು ಇಳಿಯಲು ಪ್ರಯತ್ನಿಸುವಾಗ ಲ್ಯಾಂಡರ್ ಕಳೆದೋಗಿತ್ತು. ಭಾರತ 'ಚಂದ್ರಯಾನ-2' ಯೋಜನೆಯನ್ನ 2019ರ ಜುಲೈ 22ಕ್ಕೆ ಉಡಾವಣೆ ಮಾಡಿತ್ತು. LVM3 ರಾಕೆಟ್‌ನಲ್ಲಿ ಲಾಂಚ್ ಆಗಿತ್ತು ಚಂದ್ರಯಾನ-2. ಆದ್ರೆ ಈ ಯೋಜನೆಯ ಅಂತಿಮ ಕ್ಷಣ ನೋವಿನಿಂದ ಕೂಡಿತ್ತು. ಶತಕೋಟಿ ಭಾರತೀಯರು ಚಂದ್ರಯಾನ ಲ್ಯಾಂಡರ್ ಕುಸಿದು ಬಿದ್ದಾಗ ಕಣ್ಣೀರು ಹಾಕಿದ್ರು. ಇಸ್ರೋ ವಿಕ್ರಮ್ ಲ್ಯಾಂಡರ್ ಜೊತೆಗಿನ ಸಂಪರ್ಕ ಕಳೆದುಕೊಂಡಿತ್ತು. ಹೀಗೆ ಅಂದು ಆಗಿದ್ದ ಎಡವಟ್ಟನ್ನು ಇಸ್ರೋ ಈಗ ಸರಿ ಮಾಡಿಕೊಂಡಿದ್ದು, ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಏನೆಲ್ಲಾ ಬದಲಾವಣೆ ಮಾಡಿದೆ ಇಸ್ರೋ?
2019ರ 'ಚಂದ್ರಯಾನ-2' ಸೋಲಿನ ಬಳಿಕ 'ಚಂದ್ರಯಾನ-3' ಯೋಜನೆಯಲ್ಲಿ ಹಲವು ರೀತಿ ಬದಲಾವಣೆ ಮಾಡಿತ್ತು ಇಸ್ರೋ. ಅದರಲ್ಲೂ ಅಮೆರಿಕದ ನಾಸಾ ಸೇರಿ ಯುರೋಪ್ ಬಾಹ್ಯಾಕಾಶ ಸಂಸ್ಥೆ ಕೂಡ ಭಾರತಕ್ಕೆ ಸಹಾಯ ಮಾಡಿವೆ. ಇದು ಭಾರತದ ಚಂದ್ರಯಾನ ಯೋಜನೆಗೆ ಮತ್ತಷ್ಟು ಬಲ ನೀಡಿದೆ. ಈ ಮೂಲಕ ಹಿಂದೆ ಆಗಿದ್ದ ತಪನ್ನು ಬದಲಾಯಿಸಿ ಹೊಸ ಹುಮ್ಮಸ್ಸಿನ ಮೂಲಕ ಮುನ್ನುಗಿತ್ತು ಇಸ್ರೋ. ಹೀಗೆ ಇಸ್ರೋ ಮಾಡಿರುವ ಆ ಎಲ್ಲ ಬದಲಾವಣೆಗಳ ಪಟ್ಟಿಯನ್ನು ಇಲ್ಲಿ ತಿಳಿಯೋಣ ಬನ್ನಿ.

1) 'ಚಂದ್ರಯಾನ-2' ಲ್ಯಾಂಡಿಂಗ್ ಪ್ರದೇಶ ಚಿಕ್ಕದಾಗಿತ್ತು ಹೀಗಾಗಿ ಲ್ಯಾಂಡಿಂಗ್ ಸ್ಪಾಟ್ ಬಗ್ಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ವಿಕ್ರಮ್ ಲ್ಯಾಂಡರ್‌ಗೆ ಕಳೆದ ಬಾರಿ ಸಮಸ್ಯೆಯ ಆಗರವಾಗಿದ್ದ ಲ್ಯಾಂಡಿಂಗ್ ಪ್ರದೇಶವನ್ನು 2.5x4 ಕಿಲೋ ಮೀಟರ್‌ಗೆ ಹೆಚ್ಚಿಸಿದೆ ಇಸ್ರೋ. ಇದರ ಜೊತೆಗೆ ಆತ್ಯಾಧುನಿಕ ಉಪಕರಣ ಅಳವಡಿಸಲಾಗಿದೆ.
2) ಲ್ಯಾಂಡರ್ ಇಳಿಸುವಾಗ ವೇಗ ನಿಯಂತ್ರಣ ಮಾಡುವುದು ದೊಡ್ಡ ಸವಾಲಿನ ಕೆಲಸ. ಹೀಗಾಗಿ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರತಿಕ್ಷಣದ ಮಾಹಿತಿಯನ್ನೂ ಪಡೆಯಲು ಇಸ್ರೋ ಅದ್ಭುತ ಸಿದ್ಧತೆ ಮಾಡಿಕೊಂಡಿದೆ. ನಾಸಾ ಹಾಗೂ ಯುರೋಪ್ ಒಕ್ಕೂಟ ಕೂಡ ಭಾರತದ ಇಸ್ರೋ ಜೊತೆ ಕೈಜೋಡಿಸಿದೆ.
3) ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್ ಲ್ಯಾಂಡರ್‌ಗೆ ಸೂಕ್ತ ಮತ್ತು ಸಮತಟ್ಟು ಲ್ಯಾಂಡಿಂಗ್ ಸ್ಥಳ ಹುಡುಕಲು ಸಹಾಯ ಮಾಡುತ್ತದೆ. ಕ್ಯಾಮೆರಾ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಎಲ್ಲಿ ಇಳಿಯುತ್ತಿದೆ? ಹೇಗೆ ಇಳಿಯುತ್ತಿದೆ? ಅನ್ನೋದನ್ನ ವಿಜ್ಞಾನಿಗಳು ಭೂಮಿಯಿಂದ ನೋಡಬಹುದು.

4) ಲ್ಯಾಂಡರ್‌ಗೆ ಅಪಾಯ ಪತ್ತೆ, ಅಪಾಯ ತಪ್ಪಿಸುವ ಕ್ಯಾಮರಾ (LHDAC) ಸೇರಿಸಲಾಗಿದೆ. ಜೊತೆಗೆ ಲೇಸರ್ ಆಲ್ಟಿಮೀಟರ್ (LASA), ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್ ಜತೆ ಸೇರಿ ಒಟ್ಟಾಗಿ ಈ ಮಹತ್ವದ ಕೆಲಸ ಮಾಡಲಿವೆ.
5) ಗ್ರೌಂಡ್ ಸ್ಟೇಷನ್ ನೆರವಿಲ್ಲದೆ ನೌಕೆಯ ಯಾವುದೇ ಮಾಹಿತಿ ಪಡೆಯುವುದು ಅಸಾಧ್ಯ. ಈ ಪರಿಸ್ಥಿತಿಯಲ್ಲಿ ಭೂಮಿ ಮೇಲಿನ ನಿಯಂತ್ರಣ ಕೇಂದ್ರದೊಂದಿಗೆ ನೌಕೆಯು ನಿರಂತರ ಸಂಪರ್ಕ ಹೊಂದಿದರೆ ಅನಿರೀಕ್ಷಿತ ಅಪಾಯ ತಪ್ಪಿಸುವ ಅವಕಾಶ ಇರಲಿದೆ. ಹೀಗಾಗಿ ಅಮೆರಿಕದ ನಾಸಾ ಹಾಗೂ ಯುರೋಪ್‌ನ ಬಾಹ್ಯಾಕಾಶ ಸಂಸ್ಥೆ ಕೂಡ ಭಾರತಕ್ಕೆ ಸಹಾಯ ಮಾಡುತ್ತಿವೆ.
'ಚಂದ್ರಯಾನ-3' ಎಂಬ ಅದ್ಭುತ ಯೋಜನೆ
1) ಚಂದ್ರಯಾನ 2 ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಹೊಂದಿತ್ತು, ಆದರೆ ಚಂದ್ರಯಾನ 3ರಲ್ಲಿ ಆರ್ಬಿಟರ್ ಬದಲಾಗಿ ಪ್ರೊಪಲ್ಷನ್ ಮಾಡ್ಯೂಲ್ (Propulsion Module) ಅಳವಡಿಸಲಾಗಿದೆ.
2) ಚಂದ್ರಯಾನ 3ರ ಲ್ಯಾಂಡರ್ 'ಇನ್ಸ್ಟ್ರುಮೆಂಟ್ ಫಾರ್ ಲುನಾರ್ ಸೈಸ್ಮಿಕ್ ಆಕ್ಟಿವಿಟಿ' (ILSA) ಎಂಬ ಅತ್ಯಾಧುನಿಕ ಅಸ್ತ್ರ ಹೊಂದಿದೆ. ಇದು ಚಂದ್ರನ ಮೇಲೆ ಕಂಪನದ ಬಗ್ಗೆ ಅಧ್ಯಯನ ನಡೆಸಲು ಸಹಾಯ ಮಾಡಲಿದ್ದು ಪ್ಲಾಸ್ಮಾ ಸಾಂದ್ರತೆ ತಿಳಿಯಲು ಬೆನ್ನೆಲುಬು.
3) ಚಂದ್ರಯಾನ 2ರ ಒಟ್ಟು ತೂಕ 3,850 ಕೆಜಿ ಆಗಿತ್ತು, ಆದ್ರೆ ಚಂದ್ರಯಾನ 3 ಪ್ರೊಪಲ್ಷನ್ ಮಾಡ್ಯೂಲ್ (2,148 ಕೆಜಿ), ಲ್ಯಾಂಡರ್ ಮಾಡ್ಯೂಲ್ (1,752 ಕೆಜಿ) ಹಾಗೂ ರೋವರ್ ಮಾಡ್ಯೂಲ್ (26 ಕೆಜಿ) ಸೇರಿದಂತೆ 3,900 ಕೆಜಿ ತೂಗುತ್ತದೆ.
4) ಚಂದ್ರಯಾನ 2 ಬರೋಬ್ಬರಿ 7 ವರ್ಷಗಳ ಸುದೀರ್ಘ ಕಾರ್ಯಾಚರಣೆಗೆ ಅಂತ ಇಸ್ರೋ ವಿನ್ಯಾಸ ಮಾಡಿತ್ತು. ಆದರೆ ಚಂದ್ರಯಾನ 3ನ್ನ ಈಗ ಕೇವಲ 3ರಿಂದ 6 ತಿಂಗಳ ಅವಧಿಗೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ.
5) ಚಂದ್ರಯಾನ 2 ಲ್ಯಾಂಡರ್ ಒಂದು ಅಪಾಯ ಪತ್ತೆ ಕ್ಯಾಮರಾ ಹೊಂದಿತ್ತು, ಆದರೆ ಈ ಯೋಜನೆ ಸೋಲಿನ ಬಳಿಕ ಚಂದ್ರಯಾನ 3ರಲ್ಲಿ 2 ದೃಢವಾದ ಅಪಾಯ ಪತ್ತೆ ಕ್ಯಾಮರಾಗಳ ಅಳವಡಿಕೆ ಮಾಡಿದೆ ಇಸ್ರೋ.
6) ಚಂದ್ರಯಾನ 2 ಆರ್ಬಿಟರ್ ಒಟ್ಟು 9 ಉಪಕರಣ ಹೊಂದಿತ್ತು, ಈಗ ಚಂದ್ರಯಾನ 3ರ ಪ್ರೊಪಲ್ಷನ್ ಮಾಡ್ಯೂಲ್ ಕೇವಲ ಒಂದೇ ಉಪಕರಣದಿಂದ ಎಲ್ಲವನ್ನೂ ನಿಭಾಯಿಸಲಿದೆ. ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟರಿ ಅರ್ಥ್ (SHAPE) ಎಂಬ ಸಾಧನ ಎಲ್ಲಾ ಅಗತ್ಯತೆ ಪೂರೈಸಲಿದೆ.
7) ಚಂದ್ರಯಾನ 3 ತನ್ನ ಲ್ಯಾಂಡರ್ ಜೊತೆಗೆ ಲೇಸರ್ ರೆಟ್ರೋಫ್ಲೆಕ್ಟರ್ ಅರೇ (LRA) ಕೂಡ ಒಳಗೊಂಡಿದೆ. ಚಂದ್ರನ ವ್ಯವಸ್ಥೆ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡಲಿದೆ.
ಒಟ್ನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕನಸಿನ ಕೂಸು 'ಚಂದ್ರಯಾನ-3'ಗೆ ಶುಭ ಹಾರೈಸಲು ಶತಕೋಟಿ ಭಾರತೀಯರು ಸಿದ್ಧರಾಗಿದ್ದಾರೆ. ಈಗಾಗಲೇ ದೇವರ ಬಳಿ ಈ ಬಗ್ಗೆ ಪ್ರಾರ್ಥಿಸಿದ್ದಾರೆ, ಪೂಜಿಸಿದ್ದಾರೆ. ಇಂದು ಸಂಜೆ 6:04ಕ್ಕೆ ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯೂ ಇದೆ. ಇಸ್ರೋ ವಿಜ್ಞಾನಿಗಳು ಈಗಾಗಲೇ ಲ್ಯಾಂಡಿಂಗ್‌ಗೆ ಬೇಕಾದ ಸಿದ್ಧತೆ ಆರಂಭಿಸಿದ್ದು, ಆಲ್ ದಿ ಬೆಸ್ಟ್ ಇಸ್ರೋ.












Click it and Unblock the Notifications