ಏರ್ ಕಂಡೀಷನರ್, ದೊಡ್ಡ ಕಾರು, ನಗರ ನಕ್ಸಲರು, ಕಾಂಗ್ರೆಸ್ ಬೆಂಬಲದ ಬಗ್ಗೆ ಮೋದಿ ಟೀಕೆ
"ನಗರ ನಕ್ಸಲರು ಏರ್ ಕಂಡೀಷನರ್ ಮಧ್ಯೆ ಇರುತ್ತಾರೆ. ದೊಡ್ಡ ಕಾರುಗಳಲ್ಲಿ ಸುತ್ತಾಡುತ್ತಾರೆ. ಅವರ ಮಕ್ಕಳು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಆದರೆ ಅವರು ನಮ್ಮ ಬಡ ಆದಿವಾಸಿ ಯುವಕರ ಜೀವನವನ್ನು ರಿಮೋಟ್ ಕಂಟೋಲ್ ಮೂಲಕ ಹಾಳು ಮಾಡ್ತಾರೆ. ಈ ನಗರ ಮಾವೋವಾದಿಗಳನ್ನು ಕಾಂಗ್ರೆಸ್ ಏಕೆ ಬೆಂಬಲಿಸುತ್ತಿದೆ?" ಎಂದು ನರೇಂದ್ರ ಮೋದಿ ಶುಕ್ರವಾರ ಟೀಕಾ ಪ್ರಹಾರ ನಡೆಸಿದರು.
ಛತ್ತೀಸ್ ಗಢದ ವಿಧಾನಸಭಾ ಚುನಾವಣೆ ಪ್ರಚಾರ ಸಲುವಾಗಿ ಜಗ್ದಲ್ ಪುರ್ ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿ ಹಾಗೂ ಪ್ರಗತಿ ಮಾಡುವುದಾಗಿ ಭರವಸೆ ನೀಡಿದರು. ನಮಗೆ ಮಾವೋಗಳು ಇರುವ ಪ್ರದೇಶವನ್ನೂ ಅಭಿವೃದ್ಧಿ ಮಾಡುವ ಧೈರ್ಯವಿದೆ ಎಂದರು.
ಛತ್ತೀಸ್ ಗಢ ರಾಜ್ಯ ರಚನೆಯಾಗಿ ಹದಿನೆಂಟು ವರ್ಷ ತುಂಬುತ್ತಿದೆ. ರಾಜ್ಯದ ಪ್ರಗತಿ ಹಾಗೂ ಅಭಿವೃದ್ಧಿಗಾಗಿ ಹೊಸ ಬಜೆಟ್ ಅಗತ್ಯವಿದೆ. ಛತ್ತೀಸ್ ಗಢವನ್ನು ಶ್ರೀಮಂತ ರಾಜ್ಯ ಎಂದು ಕರೆಯುವ ದಿನಗಳು ಬರಲಿವೆ. ನಮ್ಮ ಮೂಲ ಮಂತ್ರವೇ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್'. ಲಿಂಗ ಮತ್ತು ಜಾತಿ ಆಧಾರದಲ್ಲಿ ನಾವು ಯಾರನ್ನೂ ಭೇದ ಮಾಡುವುದಿಲ್ಲ ಎಂದು ಮೋದಿ ಹೇಳಿದರು.

ಬಡವರು, ದಲಿತರು, ಬುಡಕಟ್ಟು ಜನಾಂಗದವರನ್ನು ಕಾಂಗ್ರೆಸ್ ಯಾವಾಗಲೂ ಮತಬ್ಯಾಂಕ್ ನಂತೆ ನೋಡುತ್ತದೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಆ ಜನರ ಹಿತದ ಬಗ್ಗೆ ಆಲೋಚಿಸಿದರು. ಅದಕ್ಕಾಗಿ ಬುಡುಕಟ್ಟು ಜನಾಂಗದ ಕ್ಷೇಮವನ್ನು ನೋಡಿಕೊಳ್ಳಲು ಸಚಿವಾಲಯವನ್ನೇ ಸೃಷ್ಟಿಸಿದರು ಎಂದರು.












Click it and Unblock the Notifications