ದೆಹಲಿ ಸಿಎಂ ರೇಖಾ ಗುಪ್ತಾಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಸಾರ್ವಜನಿಕವಾಗಿಯೇ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ರಾಜ್ಯವೊಂದರ (ಕೇಂದ್ರಾಡಳಿತ ಪ್ರದೇಶ) ಮುಖ್ಯಮಂತ್ರಿಯ ಮೇಲೆಯೇ ಕೈ ಮಾಡುವುದು ಎಂದರೆ ಏನು ಎನ್ನುವ ಗಂಭೀರ ಪ್ರಶ್ನೆ ಎದುರಾಗಿದೆ. ಈ ಹಿಂದೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥರಾಗಿರುವ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಶೂ ಎಸೆಯಲಾಗಿತ್ತು. ಇದೀಗ ರೇಖಾ ಗುಪ್ತಾ ಅವರ ಕಪಾಳಕ್ಕೆ ಬಾರಿಸಲಾಗಿದೆ. ದೆಹಲಿಯಲ್ಲಿ ಮುಖ್ಯಮಂತ್ರಿಗಳಿಗೇ ರಕ್ಷಣೆ ಎನ್ನುವುದು ಇಲ್ಲವೇ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ. ಏನಿದು ಘಟನೆ ಎನ್ನುವ ಸಂಪೂರ್ಣ ವಿವರ ನೋಡೋಣ.
ದೆಹಲಿಯ ನೂತನ ಹಾಗೂ ಮೊದಲ ಬಾರಿ ಶಾಸಕಿ ಮತ್ತು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಅವರು ಆಡಳಿತಕ್ಕೇರಿದ ಕೆಲವೇ ದಿನಗಳಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಜನಾಕ್ರೋಶ ಅಥವಾ ಆಡಳಿತ ವಿರೋಧಿ ಅಲೆ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ವ್ಯಕ್ತಿಯೊಬ್ಬ ರೇಖಾ ಗುಪ್ತಾ ಅವರ ಕಪಾಳಮೋಕ್ಷ ಮಾಡಿದ್ದಾನೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ಸರ್ಕಾರಿ ನಿವಾಸದಲ್ಲಿ ಆಗಸ್ಟ್ 20 ರಂದು ಬುಧವಾರ ಜನ್ ಸುನಾಯಿ (ಜನ ಸ್ಪಂದನ ಕಾರ್ಯಕ್ರಮ)ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ. ಈ ದುಷ್ಕೃತ್ಯ ಎಸಗಿದ ವ್ಯಕ್ತಿಯನ್ನು 30 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಆದರೆ ಆತನ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸಿಲ್ಲ. ಕೆಲವು ಕಾಗದಪತ್ರಗಳೊಂದಿಗೆ ಸಿಎಂ ಕಚೇರಿಗೆ ಆತ ಬಂದಿದ್ದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡುವಂತೆ ನೀಡಿ ಅದರ ಬೆನ್ನಲ್ಲೇ ಸಿಎಂಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ಹೇಳಲಾಗಿದೆ.
ದಾಖಲೆ ಪತ್ರಗಳನ್ನು ಕೊಟ್ಟ ಕೂಡಲೇ ಆತ ಕೆನ್ನೆಗೆ ಬಾರಿಸಿ, ಕಿರುಚಾಡುವುದಕ್ಕೆ ಪ್ರಾರಂಭಿಸಿದ್ದಾನೆ. ಕೂಡಲೇ ಪೊಲೀಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಬೆನ್ನಲ್ಲೇ ದೆಹಲಿಯಲ್ಲಿ ಸಂಚಲನ ಸೃಷ್ಟಿಯಾಗಿದ್ದು ದೆಹಲಿಯ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಮುಖ್ಯಮಂತ್ರಿಯವರ ನಿವಾಸಕ್ಕೆ ದೌಡಾಯಿಸಿದ್ದಾರೆ.
ರಾಜಕೀಯ ಇರುವ ಶಂಕೆ: ಇನ್ನು ದೆಹಲಿಯ ಸಿಎಂ ಮೇಲೆ ಹಲ್ಲೆ ಮಾಡಿರುವುದರ ಹಿಂದೆ ರಾಜಕೀಯ ಇರುವ ಸಾಧ್ಯತೆ ಇದೆ ಎಂದು ಬಿಜೆಪಿ ದೂರಿದೆ. ಸಿಎಂ ಮನೆಯಲ್ಲೇ ಭದ್ರತಾ ವೈಫಲ್ಯ ಆಗಿದೆಯೇ ಎನ್ನುವ ಬಗ್ಗೆ ಹೆಚ್ಚುವರಿ ತನಿಖೆ ನಡೆದಿದೆ. ಇನ್ನು ಈ ವಿಚಾರವಾಗಿ ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಅವರು ಸಹ ದಾಳಿಯನ್ನು ಖಂಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶ ಇಲ್ಲ ಎಂದಿದ್ದಾರೆ.
ಇನ್ನು ಈ ಹಿಂದೆ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೂ ಕಪಾಳಮೋಕ್ಷ ಮಾಡಲಾಗಿತ್ತು ಅಲ್ಲದೇ ಅವರ ಮೇಲೆ ಶೂ ಸಹ ಎಸೆಯಲಾಗಿತ್ತು. ದೆಹಲಿಯಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹಳೆಯ ವಿಡಿಯೋ ಸಹ ವೈರಲ್ ಆಗುತ್ತಿದೆ.












Click it and Unblock the Notifications