Rekha Gupta: ದೆಹಲಿ ಸಿಎಂ ಆಗಿ ಆಯ್ಕೆಯಾದ ರೇಖಾ ಗುಪ್ತಾ ಯಾರು, ಅವರ ಹಿನ್ನೆಲೆ ಏನು?
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರು ಆಯ್ಕೆಯಾಗಿದ್ದು. ಈ ಮೂಲಕ ದೆಹಲಿಗೆ ಮತ್ತೊಮ್ಮೆ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸುದೀರ್ಘ ಚರ್ಚೆಯ ನಂತರ ರೇಖಾ ಗುಪ್ತಾ ಅವರನ್ನು ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ದೆಹಲಿಯಲ್ಲಿ ಬರೋಬ್ಬರಿ 27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದ್ದು. ಅತ್ಯಂತ ಜಾಣ್ಮೆಯಿಂದ ಹೆಜ್ಜೆಯನ್ನು ಇರಿಸಿದೆ. ರೇಖಾ ಗುಪ್ತಾ ಅವರ ಹಿನ್ನೆಲೆ ಏನು ಹಾಗೂ ಅವರು ಯಾರು ಎನ್ನುವ ವಿವರ ಇಲ್ಲಿದೆ.

ದೆಹಲಿಯ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದೆ. ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಲಾಗಿದ್ದು. ಅವರಿಗೆ ಈಗ 50 ವರ್ಷ ವಯಸ್ಸಾಗಿದೆ. ರೇಖಾ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದಾರೆ. ದೆಹಲಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ಆಮ್ ಆದ್ಮಿ ಭದ್ರಕೋಟೆಯನ್ನು ಬೀಳಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರೇಖಾ ಗುಪ್ತಾ ಅವರು ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದು, ಮೊದಲ ಅವಧಿಯಲ್ಲೇ ಅವರಿಗೆ ಮುಖ್ಯಮಂತ್ರಿಯಂತಹ ಜವಾಬ್ದಾರಿ ಹುದ್ದೆ ಸಿಕ್ಕಿದೆ.
ದೆಹಲಿಯ ನೂತನ ಮುಖ್ಯಮಂತ್ರಿ ಆಯ್ಕೆಯಾಗಿರುವ ರೇಖಾ ಗುಪ್ತಾ ಅವರು ಕಳೆದ 30 ವರ್ಷಗಳಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಮೂರು ಬಾರಿ ಕೌನ್ಸಿಲರ್ ಆಗಿದ್ದರು. ರೇಖಾ ಅವರು ದೆಹಲಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸಹ ಗುರುತಿಸಿಕೊಂಡಿದ್ದರು.
ರೇಖಾ ಗುಪ್ತಾ ಅವರು ಫೆಬ್ರವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಶಾಲಿಮಾರ್ ಬಾಗ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದಿದ್ದರು. ಎಎಪಿಯ ಬಂದಾನ ಕುಮಾರಿ ಅವರ ವಿರುದ್ಧ 29,595 ಮತಗಳ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದರು.
ರೇಖಾ ಗುಪ್ತಾ ಅವರ ರಾಜಕೀಯ ಪ್ರವೇಶ
ರೇಖಾ ಅವರು 1992ರಲ್ಲಿ ದೆಹಲಿ ವಿಶ್ವವಿದ್ಯಾಲಯದ ದೌಲತ್ ರಾಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಮೂಲಕ ರಾಜಕೀಯ ಪಯಣವನ್ನು ಶುರು ಮಾಡಿದರು. ಕಾಲೇಜು ದಿನಗಳಲ್ಲೇ ಅವರು ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಮುಂದುವರಿದು 1996ರಿಂದ 97ರ ಅವಧಿಯಲ್ಲಿ ಅವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದರು.
ಮೂರು ಬಾರಿ ಕೌನ್ಸಿಲರ್ ಆಗಿ ಸೇವೆ: ಇನ್ನು ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಯಾವುದೇ ಸಚಿವ ಸ್ಥಾನವನ್ನು ನಿರ್ವಹಿಸಿಲ್ಲ. ಆದರೆ, ಸ್ಥಳೀಯ ಮಟ್ಟದಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರು ದೆಹಲಿಯ ಪಾಲಿಕೆ ಸದಸ್ಯೆಯಾಗಿ ಮೂರು ಅವಧಿಗೆ ಆಯ್ಕೆಯಾಗಿದ್ದರು. ಮೊದಲ ಬಾರಿ 2007 ರಲ್ಲಿ ರೇಖಾ ಗುಪ್ತಾ ಅವರು ದೆಹಲಿಯ ಉತ್ತರ ಪಿತಂಪುರ ಪ್ರದೇಶದಿಂದ ಕೌನ್ಸಿಲರ್ ಆಗಿ ಆಯ್ಕೆಯಾದರು.
ಕೌನ್ಸಿಲ್ ಆಗಿದ್ದ ಅವಧಿಯಲ್ಲೇ ಅವರು ಜನಪರ ಕಳಾಜಿಯ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ಉನ್ನತ ಶಿಕ್ಷಣ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಆಸೆ ಇರುವ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳಾ ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದ ಅವರು ಪರಿಚಯಿಸಿದ್ದ ಸುಮೇಧಾ ಯೋಜನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಹರಿಯಾಣ ಮೂಲದವರು: ರೇಖಾ ಗುಪ್ತಾ ಅವರು ಹರಿಯಾಣ ಮೂಲದವರಾಗಿದ್ದಾರೆ. 1974ರಲ್ಲಿ ಹರಿಯಾಣದ ಜಿಂದ್ ಜಿಲ್ಲೆಯ ನಂದಗಢ ಎನ್ನುವ ಸಣ್ಣ ಗ್ರಾಮದಲ್ಲಿ ಅವರು ಜನಿಸಿದರು. ರೇಖಾ ಅವರ ತಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲಸ ಮಾಡಿದ್ದಾರೆ. ರೇಖಾ ಅವರಿಗೆ ಎರಡು ವರ್ಷವಾದಾಗ ಅವರ ಕುಟುಂಬ ದೆಹಲಿಗೆ ಸ್ಥಳಾಂತರವಾಗಿದ್ದರು. ದೆಹಲಿಯಲ್ಲಿ ಅವರು ತಮ್ಮ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಮಾಡಿದ್ದಾರೆ.












Click it and Unblock the Notifications