ಅಣ್ಣಾಮಲೈ? ಅವನು ಯಾರು? ತಮಿಳುನಾಡಿನಲ್ಲಿ ಬಿಜೆಪಿ ಅಸ್ತಿತ್ವ ಇದೆಯೇ? ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ
ಚೆನ್ನೈ, ಜುಲೈ 06: ತಮಿಳುನಾಡಿನಲ್ಲಿ ಬಿಜೆಪಿ ಎಂಬ ಪಕ್ಷ ಇದೆಯೇ? ಅಣ್ಣಾಮಲೈ? ಅವನು ಯಾರು? ಎಂದು ಬಿಜೆಪಿ ಹಿರಿಯ ಮುಖಂಡ, ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮದೇ ಪಕ್ಷದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ತೀವ್ರವಾಗಿ ಟೀಕಿಸಿದ್ದಾರೆ.
ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, 'ಅಣ್ಣಾಮಲೈ? ಆತ ಯಾರಿಗೆ ಗೊತ್ತು? ತಮಿಳುನಾಡಿನಲ್ಲಿ ಬಿಜೆಪಿ ಜೀವಂತವಾಗಿದೆಯೇ? ಉತ್ತರ ನನಗೆ ತಿಳಿದಿಲ್ಲ. ಏಕೆಂದರೆ ತಮಿಳುನಾಡಿನಲ್ಲಿ ಪಕ್ಷವು ಹೆಚ್ಚು ಸಕ್ರಿಯವಾಗಿರುವುದನ್ನು ನಾನು ನೋಡಿಯೇ ಇಲ್ಲ' ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೋಗುವುದಕ್ಕಿಂತ ಅಮೆರಿಕಕ್ಕೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಅವರ ಜನಪ್ರಿಯತೆ ಕಡಿಮೆಯಾಗಿದೆ ಎಂದು ಹೇಳಿದರು. ಅಲ್ಲದೆ, ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ 2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ತಕ್ಕಮಟ್ಟಿಗೆ ಅವಕಾಶವಿದೆ ಎಂದೂ ಅವರು ತಿಳಿಸಿದರು.
ಮಣಿಪುರದಲ್ಲಿ ಹಲವಾರು ಮಾನವ ಹಕ್ಕುಗಳ ಉಲ್ಲಂಘನೆಯ ಘಟನೆಗಳು ನಡೆದಿವೆ. ಆದರೆ, ಪರಿಸ್ಥಿತಿಯನ್ನು ಅವಲೋಕಿಸಲು ಇಂಫಾಲ್‌ಗೆ ಧಾವಿಸುವ ಬದಲು, ಮೋದಿ ಯುಎಸ್‌ಎಗೆ ಭೇಟಿ ನೀಡಲು ಹೆಚ್ಚು ಆಸಕ್ತಿ ತೋರಿಸಿದರು ಎಂದು ಆರೋಪಿಸಿದರು.

'ಪ್ರಧಾನಿ ಸಾಮಾನ್ಯ ಜನರ ಕಲ್ಯಾಣದಲ್ಲಿ ಆಸಕ್ತಿ ಹೊಂದಿಲ್ಲ ಎಂದು ತೋರುತ್ತದೆ. ಅಮೇರಿಕಾಕ್ಕೆ ಹೋಗಬೇಕಾದ ತುರ್ತು ಏನು? ಅವರ ಯುಎಸ್ಎ ಪ್ರವಾಸದಿಂದ ದೇಶದ ಜನರಿಗೆ ಏನು ಪ್ರಯೋಜನ? 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ಆದರೆ ಮೋದಿ ಅವರು ಪ್ರಧಾನಿಯಾಗಿ ಮುಂದುವರಿಯುವರೇ ಎಂಬುದು ನನಗೆ ಖಚಿತವಿಲ್ಲ' ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಪ್ರಧಾನಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಇಲ್ಲಿನ ಜನರು ಹೇಳಬಹುದು ಆದರೆ ಅದು ನಿಜವಲ್ಲ ಎಂದು ಹೇಳಿದರು.
ವಾಸ್ತವದಲ್ಲಿ ಪ್ರಧಾನಿ ಏನೂ ಮಾಡಿಲ್ಲ ಎಂದರು. ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಿದರೆ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಸ್ವಾಮಿ ಹೇಳಿದರು.

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, 'ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಜವಾಹರಲಾಲ್ ನೆಹರು ಯುಸಿಸಿ ವಿರುದ್ಧ ಇದ್ದರು. ನಮ್ಮ ದೇಶದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರು. ಹಾಗಾದರೆ ಒಬ್ಬ ವ್ಯಕ್ತಿಗೆ ಮೂವರು ಹೆಂಡತಿಯರು ಹೇಗೆ ಇರುತ್ತಾರೆ? ಅದು ಸಾಧ್ಯವಿಲ್ಲ. ಒಂದು ದೇಶದಕ್ಕೆ ವಿಭಿನ್ನ ಕಾನೂನುಗಳು ಇರಬಾರದು' ಎಂದು ಅಭಿಪ್ರಾಯ ಪಟ್ಟರು.
ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸ್ವಾಮಿ, 'ಸ್ಟಾಲಿನ್ ಆಡಳಿತವು ತಮಿಳುನಾಡಿನ ಜನರ ಅಭಿವೃದ್ಧಿಗೆ ಕೆಲಸ ಮಾಡಲು ಬಯಸುವುದಿಲ್ಲ' ಎಂದು ಆರೋಪಿಸಿದರು.
'ಡಿಎಂಕೆಗೆ ದೇವಸ್ಥಾನಗಳ ಬಗ್ಗೆಯಾಗಲೀ, ಸಿನಿಮಾಗಳ ಬಗ್ಗೆಯಾಗಲೀ ಅಥವಾ ನಮ್ಮ ಸಂಸ್ಕೃತಿಯ ಬಗ್ಗೆಯಾಗಲೀ ತಿಳಿದಿಲ್ಲ. ಡಿಎಂಕೆ ಖಂಡಿತವಾಗಿಯೂ ಸೋಲುತ್ತದೆ' ಎಂದು ಅವರು ಹೇಳಿದರು.












Click it and Unblock the Notifications