Beti Bachao Beti Padhao Scheme: ಹೆಣ್ಣು ಮಕ್ಕಳ ರಕ್ಷಣೆ; ಈ ಸರ್ಕಾರಿ ಯೋಜನೆ ಬಗ್ಗೆ ನೀವು ತಿಳಿಯಲೇ ಬೇಕು!
ದೆಹಲಿ, ಸೆಪ್ಟೆಂಬರ್ 01: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ 'ಬೇಟಿ ಬಚಾವೋ ಬೇಟಿ ಪಢಾವೋ' ಯೋಜನೆಯನ್ನು 2015ರ ಜನವರಿ 22ರಂದು ಹರಿಯಾಣದ ಪಾಣಿಪತ್‌ನಲ್ಲಿ ಪ್ರಾರಂಭಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ. ಹೆಣ್ಣು ಮಕ್ಕಳ ಮೇಲಿನ ತಾರತಮ್ಯವನ್ನು ತೊಡೆದುಹಾಕುವುದು ಮತ್ತು ಅವರ ಬಗ್ಗೆ ಜನರಲ್ಲಿ ನಕಾರಾತ್ಮಕ ಮನೋಭಾವವನ್ನು ಬದಲಾಯಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಪಿಸಿ ಮತ್ತು ಪಿಎನ್ಡಿಟಿ ಕಾಯ್ದೆಯ ಅನುಷ್ಠಾನ ಮತ್ತು ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮೊದಲ ಹಂತದಲ್ಲಿ ದೇಶದ 100 ಜಿಲ್ಲೆಗಳಲ್ಲಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ತರಬೇತಿ, ವಿಚಾರದ ಅರಿವು, ಜಾಗೃತಿ ಕಾರ್ಯಕ್ರಮಗಳು ಮತ್ತು ತಳಮಟ್ಟದಲ್ಲಿ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಜನರ ಮನಸ್ಸಿನಲ್ಲಿಯೇ ಬದಲಾವಣೆ ತರುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 2015ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ, ಈಗಾಗಲೇ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 9 ಹಂತದ ತರಬೇತಿಗಳನ್ನು ನಡೆಸಿದೆ.ಇನ್ನೂ ಹೆಣ್ಣು ಮಕ್ಕಳ ಜನನವನ್ನು ನಾವು ಖುಷಿಯಿಂದ ಸಂಭ್ರಮಿಸಬೇಕು. ನಾವು ನಮ್ಮ ಹೆಣ್ಣು ಮಕ್ಕಳ ಬಗ್ಗೆ ಒಂದೇ ರೀತಿಯ ಅಭಿಮಾನ ಹೊಂದಿರಬೇಕು. ನಿಮ್ಮ ಪುತ್ರಿಯ ಜನನವಾದಾಗ ಕನಿಷ್ಟ 5 ಗಿಡಗಳನ್ನು ನೆಟ್ಟು ಸಂಭ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮನವಿ ಮಾಡಿದ್ದರು.
ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಭಾಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿ ಮಾಡಲಾಗಿದ್ದು, ಈ ಯೋಜನೆಯಡಿ, ಹೆಣ್ಣು ಮಕ್ಕಳ ಹೆಸರಲ್ಲಿ ಪ್ರತಿ ತಿಂಗಳು 1000 ರೂಪಾಯಿಗಳನ್ನು ಖಾತೆಗೆ ಜಮಾ ಮಾಡಿದರೆ, ಈ ಮೊತ್ತವು ಒಂದು ವರ್ಷದಲ್ಲಿ 12 ಸಾವಿರ ಆಗುತ್ತದೆ. 14 ವರ್ಷಗಳಲ್ಲಿ ಒಟ್ಟು ಮೊತ್ತ 1,68,000 ಆಗಲಿದೆ. ನಂತರ 21 ವರ್ಷಗಳ ನಂತರ ನಿಮ್ಮ ಮಗಳು 6 ಲಕ್ಷಕ್ಕೂ ಹೆಚ್ಚು ಹಣ ಪಡೆಯುತ್ತಾರೆ.
ಇನ್ನೂ ಈ ಯೋಜನೆಯನ್ನು ಎರಡು ಘಟಕಗಳಾಗಿ ವಿಂಗಡಿಸಲಾಗಿದ್ದು, ಮೊದಲನೆಯದು- ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುವ ಮೂಲಕ ಸಿಎಸ್ಆರ್ (ಮಕ್ಕಳ ಲಿಂಗ ಅನುಪಾತ) ಕುಸಿತವನ್ನು ಕಡಿಮೆ ಮಾಡುವುದು. ಎರಡನೆಯದು- 2011 ರ ಜನಗಣತಿಯ ಪ್ರಕಾರ, ಕಡಿಮೆ ಲಿಂಗಾನುಪಾತ ಇರುವ 100 ಜಿಲ್ಲೆಗಳಲ್ಲಿ ಕೆಲಸ ಮಾಡುವುದು. ಇದರಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿವೆ. ಆದರೆ, ಈಗ ಸರ್ಕಾರ ದೇಶದ ಇತರೆ ಜಿಲ್ಲೆಗಳಲ್ಲೂ ಈ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ.
ಈ ಯೋಜನೆಯ ಉದ್ದೇಶವೇನು?
ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ ಯೋಜನೆಯನ್ನ ಜಾರಿಗೊಳಿಸಲಾಗಿದ್ದು, ಲಿಂಗಾನುಪಾತದ ಅಂತರವನ್ನು ಕಡಿಮೆ ಮಾಡುವುದು, ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು ಮತ್ತು ಲಿಂಗ ಅಸಮಾನತೆಯನ್ನು ತೆಗೆದುಹಾಕುವುದು ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯಡಿ, ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಲು ಮತ್ತು ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಹೆಣ್ಣು ಮಕ್ಕಳ ಹೆಸರಲ್ಲಿ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಅವರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಕ್ಷೀಣಿಸುತ್ತಿರುವ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಸುಧಾರಿಸಲು ಮತ್ತು ಈ ಕುರಿತು ಜಾಗೃತಿ ಮೂಡಿಸಲು ಚರ್ಚೆಗಳನ್ನು ಆಯೋಜಿಸುವುದು.ಹೆಣ್ಣುಮಕ್ಕಳ ಜನನ ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಸಮುದಾಯಗಳನ್ನು ಪ್ರೇರೇಪಿಸುವುದು, ಇದರಿಂದ ಅವರು ತಮ್ಮ ಸ್ವಂತ ಅಭಿವೃದ್ಧಿಗೆ ಕೆಲಸ ಮಾಡಬಹುದು.
ಈ ಯೋಜನೆಗೆ ಅರ್ಹತೆ ಏನು?
- ಭಾರತೀಯ ಪೌರತ್ವವನ್ನು ಹೊಂದಿರಬೇಕು.
- ಮಗಳು ಯಾವುದೇ ಬ್ಯಾಂಕಿನಲ್ಲಿ ತನ್ನದೇ ಆದ ಸುಕನ್ಯಾ ಸಮೃದ್ಧಿ ಖಾತೆ (SSA) ಹೊಂದಿರಬೇಕು.
- ವಯಸ್ಸು 10 ವರ್ಷಕ್ಕಿಂತ ಕಡಿಮೆಯಿರಬೇಕು.
ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಯಾವುದೇ ವಾಣಿಜ್ಯ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ.
- ಪೋಸ್ಟ್ ಪೇಮೆಂಟ್ ಬ್ಯಾಂಕ್ (PPB) ಅಥವಾ ಸುಕನ್ಯಾ ಸಮೃದ್ಧಿ ಖಾತೆ (SSA) ತೆರೆಯಲು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅದರಲ್ಲಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ದಾಖಲೆಗಳನ್ನು ಸಲ್ಲಿಸಿ ನಿಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆಯಿರಿ.












Click it and Unblock the Notifications