ಗತಿಸಿದ ವರ್ಷದ 'ಮುತ್ತಿನಂಥ' ಮೂವತ್ತು ಸುದ್ದಿಚಿತ್ರ

ಬೆಂಗಳೂರು, ಜ.1 : ಉತ್ತರಖಂಡದಲ್ಲಿ ಜಲ ಪ್ರಳಯ, ದೆಹಲಿಯಲ್ಲಿ ರಾಜಕೀಯ ಕ್ರಾಂತಿ, ರೈಲು ಮತ್ತು ಬಸ್ ದುರಂತಗಳು, ಟೆಲಿಗ್ರಾಂ ಸೇವೆ ಸ್ಥಗಿತ, ಕ್ರಿಕೆಟ್ ಗೆ ವಿದಾಯ ಘೋಷಿಸಿದ ಸಚಿನ್ ತೆಂಡೂಲ್ಕರ್ 2013ರನ್ನು ನೋಡಿದಾಗ ಹಲವಾರು ಘಟನೆಗಳು ನೆನಪಾಗುತ್ತವೆ. ಕಳೆದ ವರ್ಷಗಳಲ್ಲಿ ನಡೆದ ಪ್ರಮುಖ ಘಟನೆಗಳ ಹಿನ್ನೋಟವನ್ನು ನಾವು ನಿಮಗೆ ನೀಡುತ್ತಿದ್ದೇವೆ.

ಹೊಸ ವರ್ಷಕ್ಕೆ ನಾವು ಕಾಲಿಟ್ಟಿದ್ದೇವೆ. 2013ರ 365 ದಿನಗಳು ಕಳೆದಿವೆ, ಒಂದು ವರ್ಷದ ಅವಧಿಯಲ್ಲಿ ದೇಶ ಮತ್ತು ಕರ್ನಾಟಕದಲ್ಲಿ ಹಲವಾರು ಘಟನೆಗಳು ಸಂತೋಷ, ಸಮಾಧಾನ, ದುಖಃ ತಂದಿವೆ. 2013 ನಮಗೆ ವಿದಾಯ ಹೇಳಿ 2014ಅನ್ನು ನಾವು ಸ್ವಾಗತಿಸಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷಗಳ ಹಿನ್ನೋಟಗಳತ್ತ ನಾವು ಒಮ್ಮೆ ಗಮನ ಹರಿಸೋಣ. [2013ರ ಕರ್ನಾಟಕ ರಾಜಕೀಯದ ಹಿನ್ನೋಟ]

ಉತ್ತರಖಂಡದಲ್ಲಿ ಜಲಪ್ರಳಯ, ದೆಹಲಿಯಲ್ಲಿ ಮೋಡಿ ಮಾಡಿದ ಅರವಿಂದ್ ಕೇಜ್ರಿವಾಲ್, ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಘೋಷಣೆ, ದೆಹಲಿ ಅತ್ಯಾಚಾರಿಗಳಿಗೆ ಗಲ್ಲು, ಕ್ರಿಕೆಟ್ ಜೀವನಕ್ಕೆ ಸಚಿನ್ ವಿದಾಯ, ಸ್ಪಾಟ್ ಫಿಕ್ಸಿಂಗ್ ವಿವಾದದಲ್ಲಿ ಶ್ರೀಶಾಂತ್, ಭಾರತೀಯ ಚಿತ್ರರಂಗಕ್ಕೆ 100ರ ಸಂಭ್ರಮ, ಜೈಲು ಸೇರಿದ ಸಂಜಯ್ ದತ್ ಮುಂತಾದ ಘಟನೆಗಳು ನೆನಪಾಗುತ್ತವೆ.

ಕರ್ನಾಟಕದಲ್ಲೂ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ, ಹಾವೇರಿ ಬಸ್ ದುರಂತ, ಬೀದರ್ ನಲ್ಲಿ ಶ್ರೀಗಳ ಆತ್ಮಾಹುತಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಾವು, ಕರ್ನಾಟಕದಲ್ಲಿ ಕಾಂಗ್ರೆಸ್ ಕಲರವ, ಹೈ-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ, ಬೆಂಗಳೂರು ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ, ಜೈಲು ಸೇರಿದ ನಾಲ್ವರು ಶಾಸಕರು, ಹೈಕೋರ್ಟ್ ಪೀಠ ಕಾಯಂ ಮುಂತಾದ ಘಟನೆಗಳು ನಡೆದಿವೆ. ದೇಶ ಮತ್ತು ರಾಜ್ಯದಲ್ಲಿ ನಡೆದ ಪ್ರಮುಖ ಘಟನೆಗಳ 2013ರ ಹಿನ್ನೋಟ ಚಿತ್ರಗಳಲ್ಲಿ.

ಉತ್ತರಖಂಡದಲ್ಲಿ ಜಲಪ್ರಳಯ

ಉತ್ತರಖಂಡದಲ್ಲಿ ಜಲಪ್ರಳಯ

ಉತ್ತರಖಂಡದಲ್ಲಿ ಜೂ.17 ಮತ್ತು 18ರಂದು ಮೇಘಸ್ಫೋಟ ಸಂಭವಿಸಿ ಭಾರೀ ಮಳೆ ಸುರಿಯಿತು. ಕೇದಾರನಾಥ, ಬದರೀನಾಥ ಸೇರಿದಂತೆ ಉತ್ತರಖಂಡದ ಹಲವು ಪ್ರದೇಶಗಳೂ ಭೂ ಕುಸಿತ, ಪ್ರವಾಹದಿಂದ ತತ್ತಿರಿಸಿ ಹೋದವು. ಈ ದುರಂತದಲ್ಲಿ 5700ಜನರು ಸಾವನ್ನಪ್ಪಿದ್ದರು ಎಂದು ಸರ್ಕಾರ ಘೋಷಣೆ ಮಾಡಿತು. ಆದರೆ, ಸತ್ತವರ ಮತ್ತು ಕಾಣೆಯಾದವರ ಬಗ್ಗೆ ನಿಖರವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರವಾಹದಿಂದ ಕೇದಾರನಾಥನಲ್ಲಿ ದೇವಾಲಯವನ್ನು ಮುಚ್ಚಲಾಗಿತ್ತು. ಸೆ.11ರಂದು ದೇವಾಲಯದಲ್ಲಿ ಪೂಜೆಯನ್ನು ಪುನಃ ಆರಂಭಿಲಾಯಿತು.

ದೆಹಲಿ ಗದ್ದುಗೆ ಏರಿದ ಅರವಿಂದ್ ಕೇಜ್ರಿವಾಲ್

ದೆಹಲಿ ಗದ್ದುಗೆ ಏರಿದ ಅರವಿಂದ್ ಕೇಜ್ರಿವಾಲ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ಜನರು ಸಿಎಂ ಪಟ್ಟಕ್ಕೆ ಏರಬಹುದು ಎಂದು 2013ರಲ್ಲಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ತೋರಿಸಿದರು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಂತರ ಪಕ್ಷಗಳಿಗೆ ಸೋಲಿನ ರುಚಿ ತೋರಿಸಿದರು. ದೆಹಲಿಯಲ್ಲಿ 15 ವರ್ಷಗಳಿಂದ ಇದ್ದ ಕಾಂಗ್ರೆಸ್ ಪಾರುಪತ್ಯಕ್ಕೆ ಅಂತ್ಯ ಹಾಡಿ, ಸಿಎಂ ಗದ್ದುಗೆ ಏರಿದರು. ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಅವರನ್ನು 20 ಸಾವಿರಕ್ಕೂ ಅಧಿಕ ಮತಗಳ ಅಂತರಿಂದ ಸೋಲಿಸಿದರು.

ಇತಿಹಾಸ ಸೇರಿದ ಟೆಲಿಗ್ರಾಂ ವ್ಯವಸ್ಥೆ

ಇತಿಹಾಸ ಸೇರಿದ ಟೆಲಿಗ್ರಾಂ ವ್ಯವಸ್ಥೆ

ಜನರಿಗೆ ಸಂತೋಷ ಮತ್ತು ದುಃಖದ ಸುದ್ದಿಗಳನ್ನು ತ್ವರಿತವಾಗಿ ತಲುಪಿಸುತ್ತಿದ್ದ ಟೆಲಿಗ್ರಾಂ ವ್ಯವಸ್ಥೆ ಕೆಲವೇ ದಿನಗಳಲ್ಲಿ ಇತಿಹಾಸ ಸೇರಿತು. ಹಳ್ಳಿಗಳಲ್ಲಿ ಟೆಲಿಗ್ರಾಂ 'ಸಾವಿನ ದೂತ' ಎಂಬ ಹೆಸರು ಪಡೆದುಕೊಂಡಿತ್ತು. ಟೆಲಿಗ್ರಾಂ ಬಂತೆದರೆ ಯಾರಿಗೆ ಏನೋ ಆಗಿದೆ ಎಂದು ಜನರು ಅರ್ಥಮಾಡಿಕೊಳ್ಳುವ ಮಟ್ಟಿಗೆ ಅದು ಪ್ರಸಿದ್ಧಿ ಪಡೆದಿತ್ತು. ಸುಮಾರು 160 ವರ್ಷಗಳ ಭವ್ಯ ಇತಿಹಾಸ ಹೊಂದಿದ್ದ ಈ ವ್ಯವಸ್ಥೆಯನ್ನು ಜು.14ರಂದು ಸ್ಥಗಿತಗೊಳಿಸಲಾಯಿತು. ಇಂದಿನ ಸ್ಮಾರ್ಟ್ ಫೋನ್, ಇ-ಮೇಲ್, ಎಸ್ಎಂಎಸ್ ಜಗತ್ತಿನಲ್ಲಿ ಟೆಲಿಗ್ರಾಂ ಬೇಡಿಕೆ ಕಳೆದುಕೊಂಡಿದ್ದರಿಂದ ಈ ಸೇವೆಯನ್ನು ಸ್ಥಗಿತಗೊಳಿಸಲಾಯಿತು.

ಅಫ್ಜಜ್ ಗುರು ನೇಣಿಗೆ

ಅಫ್ಜಜ್ ಗುರು ನೇಣಿಗೆ

ಸಂಸತ್ ಭವನದ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್ ಗುರುವನ್ನು ಫೆ.9ರಂದು ರಹಸ್ಯವಾಗಿ ನೇಣುಗಂಬಕ್ಕೆರಿಸಲಾಯಿತು. 10 ವರ್ಷಗಳ ಹಿಂದೆಯೇ ಮರಣದಂಡನೆ ಶಿಕ್ಷೆ ಜಾರಿಯಾಗಿದ್ದರೂ, ತಿಹಾರ್ ಜೈಲಿನಲ್ಲಿ ದಿನಕಳೆಯತ್ತಿದ್ದ ಗುರುವನ್ನು ಜೈಲಿನಲ್ಲಿಯೇ ಗಲ್ಲಿಗೆ ಹಾಕಿ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಯಿತು. ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ವ್ಯಕ್ತವಾಯಿತು.

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ

ಏ.17ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಬಳಿ ಬಾಂಬ್ ಸ್ಫೋಟಗೊಂಡಿತು. ರಾಜ್ಯ ವಿಧಾನಸಭೆ ಚುನಾವಣೆಗೆ 17 ದಿನ ಬಾಕಿ ಉಳಿದಾಗ ಆಡಳಿತಾರೂಢ ಪಕ್ಷದ ಕಚೇರಿಯ ಬಳಿ ಈ ಬಾಂಬ್ ಸ್ಫೋಟ ಸಂಭವಿಸಿದ್ದು, ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು ಸೇರಿದಂತೆ 16 ಜನರು ಈ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ.

ಸರಬ್ಜಿತ್ ಸಿಂಗ್ ಪಾಕಿಸ್ತಾನದಲ್ಲಿ ಸಾವು

ಸರಬ್ಜಿತ್ ಸಿಂಗ್ ಪಾಕಿಸ್ತಾನದಲ್ಲಿ ಸಾವು

ಆಕಸ್ಮಿಕವಾಗಿ ದೇಶದ ಗಡಿದಾಟಿ ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಮೇಲೆ ಪಾಕಿಸ್ತಾನದ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಮೇ 2 ರಂದು ಸಾವನ್ನಪ್ಪಿದ್ದರು. ಸಿಂಗ್ ಮೃತದೇಹವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಪಂಜಾಬ್ ನಲ್ಲಿ ಸರಬ್ಜಿತ್ ಅಂತ್ಯಕ್ರಿಯೆ ನಡೆಸಲಾಯಿತು.

ಜೈಲು ಸೇರಿದ ಮುನ್ನಾಭಾಯಿ

ಜೈಲು ಸೇರಿದ ಮುನ್ನಾಭಾಯಿ

1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಲಿವುಟ್ ನಟ ಸಂಜಯ್ ದತ್ ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಾ.22ರಂದು ನ್ಯಾಯಾಲಯ ಆದೇಶ ಹೊರಡಿಸಿತು. ಪುಣೆಯ ಯರವಾಡ ಜೈಲಿನಲ್ಲಿ ಸಂಜಯ್ ದತ್ ಶಿಕ್ಷೆ ಅನುಭವಿಸುತ್ತಿದ್ದು, ಪದೇ ಪದೇ ಪರೋಲ್ ಮೇಲೆ ಹೊರಬಂದು ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

ಹೈದರಾಬಾದ್ ಬಸ್ ದುರಂತ

ಹೈದರಾಬಾದ್ ಬಸ್ ದುರಂತ

ಅ.31ರಂದು ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಜಬ್ಬಾರ್ ಟ್ರಾವೆಲ್ಸ್ ನ ವೋಲ್ವೋ ಬಸ್ ಗೆ ಬೆಂಕಿ ಹೊತ್ತಿಕೊಂಡಿತು. ಅಗ್ನಿ ಆಕಸ್ಮಿಕದಿಂದ 45 ಜನರು ಸಜೀವವಾಗಿ ದಹನವಾದರು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಬೆಂಕಿಯ ಕೆನ್ನಾಲಿಗೆಯಿಂದ ಬಚಾವಾಗಿ ಬಂದರು. ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದ ಕಾರಣ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಜೈಲು ಸೇರಿದ ಲಾಲೂ

ಜೈಲು ಸೇರಿದ ಲಾಲೂ

ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಅ.4ರಂದು ಆದೇಶ ನೀಡಿತು. 5 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ.ಗಳ ದಂಡವನ್ನು ಅವರಿಗೆ ವಿಧಿಸಿತ್ತು. ಆದರೆ, ಕೆಲವೇ ದಿನಗಳಲ್ಲಿ ಲಾಲೂ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದು ಹೊರಬಂದಿದ್ದಾರೆ.

ವಿಷವಾದ ಬಿಸಿಯೂಟ

ವಿಷವಾದ ಬಿಸಿಯೂಟ

ಬಿಹಾರದ ಸದನ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪಾಲಿಗೆ ಬಿಸಿಯೂಟ ವಿಷವಾಯಿತು. ಜು.16ರಂದು ವಿಷಯುಕ್ತ ಬಿಸಿಯೂಟ ಸೇವಿಸಿ 23 ಮಕ್ಕಳು ಸಾವನ್ನಪ್ಪಿದರು. ಕ್ರಿಮಿನಾಶಕವಿದ್ದ ಪಾತ್ರೆಯನ್ನು ಸರಿಯಾಗಿ ಶುಚಿಗೊಳಿಸದೇ ಅಡುಗೆ ತಯಾರಿಸಿದ್ದು ಘಟನೆಗೆ ಕಾರಣವಾಗಿತ್ತು.

ಎನ್ ಡಿಎ ಮೈತ್ರಿ ಕಡಿದುಕೊಂಡ ಜೆಡಿಯು

ಎನ್ ಡಿಎ ಮೈತ್ರಿ ಕಡಿದುಕೊಂಡ ಜೆಡಿಯು

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಣೆ ಮಾಡಲಿದ್ದಾರೆ ಎಂದು ಸುಳಿವು ಅರಿತ ಬಿಹಾರ ಸಿಎಂ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟದಿಂದ ಹೊರಬರುವುದಾಗಿ ಜೂ.16ರಂದು ಘೋಷಿಸಿದರು. ಬಿಜೆಪಿಯೊಂದಿಗಿನ 17 ವರ್ಷಗಳ ಬಾಂಧವ್ಯವನ್ನು ಜೆಡಿಯು ಕಡಿದುಕೊಂಡಿತು. ನಂತರ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಘೋಷಿಸಿತು.

ಜಲಾಂತರ್ಗಾಮಿಯಲ್ಲಿ ಅಗ್ನಿ ದುರಂತ

ಜಲಾಂತರ್ಗಾಮಿಯಲ್ಲಿ ಅಗ್ನಿ ದುರಂತ

ಮುಂಬೈ ನೌಕಾನೆಲೆಯಲ್ಲಿ ಆ.19ರಂದು ಐಎನ್ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿಗೆ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಯಿತು. 6 ಸಿಬ್ಬಂದಿಗಳು ಘಟನೆಯಿಂದ ಸಾವನ್ನಪ್ಪಿದರೆ, ಜಲಾಂತರ್ಗಾಮಿ ಭಾಗಶಃ ಸುಟ್ಟು ಕರಕಲಾಯಿತು.

ಗಾಳಿಸುದ್ದಿಗೆ 115 ಮಂದಿ ಬಲಿಯಾದರು

ಗಾಳಿಸುದ್ದಿಗೆ 115 ಮಂದಿ ಬಲಿಯಾದರು

ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ರತನ್ ಗಢದ ಮಾತಾ ದೇವಾ ದೇವಾಲಯದಲ್ಲಿ ಅ.13ರಂದು ಭೀಕರ ಕಾಲ್ತುಳಿತ ಸಂಭವಿಸಿ 30 ಮಕ್ಕಳು ಸೇರಿದಂತೆ 115 ಮಂದಿ ಸಾವನ್ನಪ್ಪಿದರು. ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಇದ್ದ ಸೇತುವೆ ಕುಸಿಯುತ್ತಿದೆ ಎಂದು ಯಾರೋ ಗಾಳಿ ಸುದ್ದಿ ಹಬ್ಬಿಸಿದ್ದರಿಂದ ಭಕ್ತರು ಓಡಲಾರಂಭಿಸಿ ಕಾಲ್ತುಳಿತ ಸಂಭವಿಸಿತ್ತು. 2006ರಲ್ಲೂ ಇದೇ ದೇವಾಲಯದಲ್ಲಿ ಕಾಲ್ತುಳಿತಕ್ಕೆ 60 ಮಂದಿ ಬಲಿಯಾದರು.

ದಿಲ್ಲಿ ಕಾಮುಕರಿಗೆ ಗಲ್ಲು

ದಿಲ್ಲಿ ಕಾಮುಕರಿಗೆ ಗಲ್ಲು

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕರಿಗೆ ದೆಹಲಿ ನ್ಯಾಯಾಲಯ ಸೆ.13ರಂದು ಮರಣದಂಡನೆ ವಿಧಿಸಿತು. 2012ರ ಡಿಸೆಂಬರ್ ನಲ್ಲಿ ಕಾಮುಕರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ನ್ಯಾಯಾಲಯದ ತೀರ್ಪಿಗೆ ದೇಶದಲ್ಲಿ ಸ್ವಾಗತ ವ್ಯಕ್ತವಾಯಿತು. ಆದರೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಗೆ ನ್ಯಾಯಮಂಡಳಿ ಕೇವಲ 3 ವರ್ಷ ಶಿಕ್ಷೆ ವಿಧಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.

ಉತ್ತರ ಪ್ರದೇಶದ ಕೋಮುಗಲಭೆ 60 ಸಾವು

ಉತ್ತರ ಪ್ರದೇಶದ ಕೋಮುಗಲಭೆ 60 ಸಾವು

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಸೆ.8ರಂದು ಕೋಮುಗಲಭೆ ಸಂಭವಿಸಿತು. ಉತ್ತರ ಪ್ರದೇದಲ್ಲಿ ಭಾರೀ ಕೆಸರೆರಚಾಟಕ್ಕೆ ಘಟನೆ ಗಲಭೆ ಕಾರಣವಾಯಿತು. 60 ಮಂದಿ ಸಾವನ್ನಪ್ಪಿದ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಗಲಭೆ ನಿಯಂತ್ರಿಸಲು ವಿಫಲವಾದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು. ಗಲಭೆಯಿಂದ ನಿರಾಶ್ರಿತರಾದರು ಇಂದಿಗೂ ವಾಸಕ್ಕೆ ಮನೆಯಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ಆರುಷಿ ಕೊಲೆ ಪ್ರಕರಣದ ತೀರ್ಪು ಪ್ರಕಟ

ಆರುಷಿ ಕೊಲೆ ಪ್ರಕರಣದ ತೀರ್ಪು ಪ್ರಕಟ

ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಆರುಷಿ ತಲ್ವಾರ್ ಕೊಲೆ ಪ್ರಕರಣದ ತೀರ್ಪು ನ.25ರಂದು ಹೊರಬಂತು. ನೋಯಿಡಾದಲ್ಲಿ ಆರುಷಿ ತಂದೆ ರಾಜೇಲ್ ತಲ್ವಾರ್ ಮತ್ತು ತಾಯಿ ನೂಪುರ್ ತಲ್ವಾರ್ ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯ ಆದೇಶ ನೀಡಿತು ಮತ್ತು ಜೀವಾವಧಿ ಶಿಕ್ಷೆ ವಿಧಿಸಿತು.

ಜೈಲಿನಿಂದ ಹೊರಬಂದ ಜಗನ್

ಜೈಲಿನಿಂದ ಹೊರಬಂದ ಜಗನ್

16 ತಿಂಗಳುಗಳಿಂದ ಜೈಲಿನಲ್ಲಿದ್ದ ವೈಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಜಗನ್ ಮೋಹನ್ ರೆಡ್ಡಿ ಸೆ.23ರಂದು ಜೈಲಿನಿಂದ ಬಿಡುಗಡೆಗೊಂಡರು. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಸಿಬಿಐ ಜಗನ್ ಮೋಹನ್ ರೆಡ್ಡಿ ಅವರನ್ನು ಬಂಧಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದ್ದರಿಂದ ಅವರು ಜೈಲಿನಿಂದ ಬಿಡುಗಡೆಯಾದರು.

ಹೈದರಾಬಾದ್ ಬಾಂಬ್ ಸ್ಫೋಟ

ಹೈದರಾಬಾದ್ ಬಾಂಬ್ ಸ್ಫೋಟ

ಫೆ.21ರಂದು ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿತು. ಸ್ಫೋಟದ ತೀವ್ರತೆಗೆ 17 ಜನರು ಮೃತಪಟ್ಟಿ, 119 ಜನರು ಗಾಯಗೊಂಡರು. ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಈ ಸ್ಫೋಟವನ್ನು ನಡೆಸಿತ್ತು.

ಕ್ರಿಕೆಟ್ ತೊರೆದ ಸಚಿನ್

ಕ್ರಿಕೆಟ್ ತೊರೆದ ಸಚಿನ್

ದೇಶದ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ದೇವರಾಗಿದ್ದ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದ 200ನೇ ಟೆಸ್ಟ್ ನಂತರ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದರು. ಸಚಿನ್ ತವರು ನೆಲ ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ತಮ್ಮ ವೃತ್ತಿ ಜೀವನದ 200ನೇ ಟೆಸ್ಟ್ ಆಡಿದರು. ನ.16ರಂದು ತಮ್ಮ ಕೊನೆಯ ಪಂದ್ಯವನ್ನು ವೆಸ್ಟ್ ಇಂಡಿಸ್ ವಿರುದ್ಧ ಆಡಿದರು.

ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಘೋಷಣೆ

ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಘೋಷಣೆ

2014ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಸೆ.13ರಂದು ಘೋಷಿಸಲಾಯಿತು. ಈ ಮೂಲಕ ಬಿಜೆಪಿ ಚುನಾವಣಾ ತಯಾರಿಯನ್ನು ಆರಂಭಿಸಿತು.

ಮುಂಬೈ ಮುಡಿಗೇರಿದ ಐಪಿಎಲ್ ಕಿರೀಟ

ಮುಂಬೈ ಮುಡಿಗೇರಿದ ಐಪಿಎಲ್ ಕಿರೀಟ

ಮುಂಬೈ ಇಂಡಿಯನ್ಸ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 23 ರನ್ ಗಳಿಂದ ಸೋಲಿಸುವ ಮೂಲಕ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು. ಈಡನ್ ಗಾರ್ಡನ್ ನಲ್ಲಿ ಮಾರ್ಚ್ 26ರಂದು ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಚಿನ್ ತೆಂಡುಲ್ಕರ್ ಅವರಿಗೆ ಗೆಲುವಿನ ಉಡುಗೊರೆ ನೀಡಿತು.

ಮನ್ನಾಡೆ ನಿಧನ

ಮನ್ನಾಡೆ ನಿಧನ

ಖ್ಯಾತ ಗಾಯಕ ಮನ್ನಾಡೆ ಅವರು ಬೆಂಗಳೂರಿನಲ್ಲಿ ಅಕ್ಟೋಬರ್ 24ರಂದು ಸಾವನ್ನಪ್ಪಿದರು. ಜಯತೇ ಜಯತೆ ಸತ್ಯ ಮೇವ ಜಯತೇ'..'.ಕುಹೂ ಕುಹೂ ಎನ್ನುತ್ತಾ ಹಾಡುವ ಕೋಗಿಲೆ ಮುಂತಾದ ಹಾಡುಗಳನ್ನು ಹಾಡಿದ್ದ ಸುಶ್ರಾವ್ಯ ಕಂಠದ ಅಮರ ಗಾಯಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮನ್ನಾ ಡೇ ಅವರ ಅಗಲಿಕೆ ಅಭಿಮಾನಿಗಳಿಗೆ ತುಂಬಲಾರದ ವೇದನೆ ತಂದಿತು. ಅಮರ ಗೀತೆಗಳ ಮೂಲಕ ಮನ್ನಾಡೇ ಸದಾ ಚಿರಂಜೀವಿಯಾಗಿದ್ದಾರೆ.

ಛತ್ತೀಸ್ ಗಢದಲ್ಲಿ ನಕ್ಸಲ್ ಅಟ್ಟಹಾಸ

ಛತ್ತೀಸ್ ಗಢದಲ್ಲಿ ನಕ್ಸಲ್ ಅಟ್ಟಹಾಸ

ಶಾಂತಿದೂತನಾದ ಬುದ್ಧನ ಬೋಧಗಯಾ ಮಂದಿರದಲ್ಲಿ ಜುಲೈ 7ರಂದು 10 ಬಾಂಬ್ ಗಳು ಸ್ಫೋಟಗೊಂಡಿವು. ಇಬ್ಬರು ಬೌದ್ಧ ಭಿಕ್ಷುಗಳು ಸೇರಿದಂತೆ ಐದು ಮಂದಿ ಸ್ಫೋಟದಿಂದ ಗಾಯಗೊಂಡರು.

ಛತ್ತೀಸ್ ಗಢದಲ್ಲಿ ನಕ್ಸಲ್ ಅಟ್ಟಹಾಸ

ಛತ್ತೀಸ್ ಗಢದಲ್ಲಿ ನಕ್ಸಲ್ ಅಟ್ಟಹಾಸ

ನಕ್ಸಲರು ಛತ್ತೀಸ್ ಗಢದಲ್ಲಿ ಮೇ 25ರಂದು ನೆಲಬಾಂಬ್ ಸ್ಫೋಟಿಸಿದರು. ಬಸ್ತಾರ್ ಜಿಲ್ಲೆಯ ದರ್ಬಾ ವ್ಯಾಲಿಯಲ್ಲಿ ನಡೆದ ಈ ಸ್ಫೋಟದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಂದ ಕುಮಾರ್ ಸೇರಿದಂತೆ 27 ಜನರು ಸಾವನ್ನಪ್ಪಿದರು. ಮಾಜಿ ಕೇಂದ್ರ ಸಚಿವ ವಿದ್ಯಾ ಶರಣ್ ಶುಕ್ಲಾ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಥಾಣೆಯಲ್ಲಿ ಕಟ್ಟಡ ಕುಸಿತಕ್ಕೆ 70 ಬಲಿ

ಥಾಣೆಯಲ್ಲಿ ಕಟ್ಟಡ ಕುಸಿತಕ್ಕೆ 70 ಬಲಿ

ಮಹಾರಾಷ್ಟ್ರದ ಥಾಣೆಯಲ್ಲಿ ಏಪ್ರಿಲ್ 4ರಂದು ಸಂಭವಿಸಿದ ಕಟ್ಟಡ ಕುಸಿತದಲ್ಲಿ 18 ಮಕ್ಕಳು ಸೇರಿದಂತೆ 70 ಜನರು ಸಾವನ್ನಪ್ಪಿದರು. ಸುಮಾರು 60 ಜನರು ಘಟನೆಯಿಂದ ಗಾಯಗೊಂಡರು.

ತೇಜ್ ಪಾಲ್ ವಿರುದ್ಧ ಆರೋಪ

ತೇಜ್ ಪಾಲ್ ವಿರುದ್ಧ ಆರೋಪ

ತೆಹಲ್ಕಾ ಪತ್ರಿಕೆಯ ಸಂಪಾದಕ ತರುಣ್ ಜೇಲ್ ಪಾಲ್ ಮೇಲೆ ಸಹೋದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದರು. ನ.30ರಂದು ಅವರನ್ನು ಗೋವಾದಲ್ಲಿ ಬಂಧಿಸಾಯಿತು. ಸದ್ಯ ಅವರ ನ್ಯಾಯಾಂಗ ಬಂಧನದಲ್ಲಿದ್ದಾರೆ.

 ಒಡೆಯರ್ ವಿಧಿವಶ

ಒಡೆಯರ್ ವಿಧಿವಶ

ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಡಿ.10 ರಂದು ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಯದುವಂಶದ ಕೊನೆಯ ಕುಡಿಯಾದ ಒಡೆಯರ್ ನಂತರ ಅವರ ಉತ್ತರಾಧಿಕಾರಿ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.

ರಾಹುಲ್ ಗಾಂಧಿಗೆ ಪಟ್ಟ

ರಾಹುಲ್ ಗಾಂಧಿಗೆ ಪಟ್ಟ

ಜ.19ರಂದು ಜೈಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಮೂಲಕ ಅವರನ್ನು ಪ್ರಧಾನಿ ಪಟ್ಟಕ್ಕೆ ಕೂರಿಸುವ ಪ್ರಯತ್ನಕ್ಕೂ ಕಾಂಗ್ರೆಸ್ ಕೈ ಹಾಕಿತು.

ಮಾನವ ಕಂಪ್ಯೂಟರ್ ಇನ್ನಿಲ್ಲ

ಮಾನವ ಕಂಪ್ಯೂಟರ್ ಇನ್ನಿಲ್ಲ

ಮಾನವ ಕಂಪ್ಯೂಟರ್ ಖ್ಯಾತಿಯ ಶಕುಂತಲಾ ದೇವಿ (83) ಏಪ್ರಿಲ್ 21ರಂದು ಬೆಂಗಳೂರಿನಲ್ಲಿ ವಿಧಿವಶರಾದರು.

ಬೀದರ್ ಚೌಳಿ ಮಠ ದುರಂತ

ಬೀದರ್ ಚೌಳಿ ಮಠ ದುರಂತ

ಬೀದರ್ ಹೊರವಲಯದಲ್ಲಿರುವ ಚೌಳಿಮಠದಲ್ಲಿ 3 ಕಿರಿಯ ಸ್ವಾಮಿಜೀಗಳು ಏ.8ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅಗ್ನಿ ಪ್ರವೇಶ ಮಾಡಿ ಆತ್ಮಹತ್ಯಗೆ ಶರಣಾದರು. ಫೆ. 28ರಂದು ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತ ಸ್ವಾಮೀಜಿ ಅವರು ಜೀವಂತ ಸಮಾಧಿಯಾಗಿದ್ದರಿಂದ ಬೇಸರಗೊಂಡಿದ್ದ ಈ ಮೂವರೂ ಕಿರಿಯ ಸ್ವಾಮಿಜೀಗಳು ಮಠದ ಆವರಣದಲ್ಲಿ ಭಕ್ತಾದಿಗಳು ಯಾರೂ ಇಲ್ಲದ ವೇಳೆ, ಕಟ್ಟಿಗೆ ಮೆದೆಗೆ ಬೆಂಕಿ ಹಚ್ಚಿಕೊಂಡು ಈರಾರೆಡ್ಡಿ ಸ್ವಾಮೀಜಿ (50), ಜಗನ್ನಾಥ ಸ್ವಾಮೀಜಿ (22) ಮತ್ತು ಪ್ರಣವ್ ಸ್ವಾಮೀಜಿ (16) ಅವರು ಅಗ್ನಿಪ್ರವೇಶ ಮಾಡಿ, ಇಹಲೋಕ ತ್ಯಜಿಸಿದರು.

ಸಚಿನ್, ಸಿಎನ್ಆರ್ ಅವರಿಗೆ ಭಾರತ ರತ್ನ ಗೌರವ

ಸಚಿನ್, ಸಿಎನ್ಆರ್ ಅವರಿಗೆ ಭಾರತ ರತ್ನ ಗೌರವ

ನ.16ರಂದು ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಕನ್ನಡಿಗ ಸಿಎನ್ಆರ್ ಅವರಿಗೆ ಭಾರತ ಸರ್ಕಾರ ದೇಶದ ಅತ್ಯುನ್ನತ ಪುರಸ್ಕಾರವಾದ ಭಾರತ ರತ್ನವನ್ನು ಘೋಷಿಸಿತು. ಭಾರತ ರತ್ನ ಗೌರವ ಪಡೆದ ಮೂರನೇ ಕನ್ನಡಿಗೆ ಎಂಬ ಕೀರ್ತಿಗೆ ವಿಜ್ಞಾನಿ ಸಿಎನ್ಆರ್ ರಾವ್ ಪಾತ್ರರಾದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಕಿಲಕಿಲ

ಕರ್ನಾಟಕದಲ್ಲಿ ಕಾಂಗ್ರೆಸ್ ಕಿಲಕಿಲ

ಮೇ.5ರಂದು ನಡೆದ ವಿಧಾನಸಭೆ ಚುನಾಣೆಯಲ್ಲಿ ಸ್ಪಷ್ಟ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಪಡೆದ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಿತು. ದಕ್ಷಿಣ ಭಾರತದಲ್ಲಿ ಮೊದಲ ಸರ್ಕಾರ ರಚಿಸಿದ್ದ ಬಿಜೆಪಿ ಚುನಾವಣೆಯಲ್ಲಿ ಭಾರೀ ಸೋಲು ಕಂಡು, ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೇ.13ರಂದು ಪ್ರಮಾಣವಚನ ಸ್ವೀಕರಿಸಿದರು.

ಯಾಸಿನ್ ಭಟ್ಕಳ್ ಬಂಧನ

ಯಾಸಿನ್ ಭಟ್ಕಳ್ ಬಂಧನ

ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸಿದ ಆರೋಪ ಎದುರಿಸುತ್ತಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ಯಾಸಿನ್ ಭಟ್ಕಳ್ ನನ್ನು ಅ.28ರಂದು ನೇಪಾಳ ಗಡಿಯಲ್ಲಿ ಬಂಧಿಸಲಾಯಿತು. ಭಾರತದ ಮೋಸ್ಟ್ ವಾಂಡೆಟ್ ಪಟ್ಟಿಯಲ್ಲಿದ್ದ ಇವನನ್ನು ಹಿಡಿಯವು ಮೂಲಕ ಪೊಲೀಸರು ಮಹತ್ ಸಾಧನೆ ಮಾಡಿದರು.

ಸರ್ಕಾರದ ಮೊದಲ ವಿಕೆಟ್ ಪತನ

ಸರ್ಕಾರದ ಮೊದಲ ವಿಕೆಟ್ ಪತನ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತತ್ವಕ್ಕೆ ಬಂದ ಆರು ತಿಂಗಳಿನಲ್ಲಿಯೇ ವಾರ್ತಾ ಮತ್ತು ಮೂಲ ಸೌಕರ್ಯ ಸಚಿವ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಚಿವ ಸ್ಥಾನ ತೊರೆಯಬೇಕಾಯಿತು. ನ.22ರಂದು ಸಂತೋಷ್ ಲಾಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಹೈಕೋರ್ಟ್ ಪೀಠ ಕಾಯಂ

ಹೈಕೋರ್ಟ್ ಪೀಠ ಕಾಯಂ

ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಯನ್ನು ಕೇಂದ್ರ ಯುಪಿಎ ಸರ್ಕಾರ ಜೂ.4ರಂದು ಈಡೇರಿಸಿತು. ಗುಲ್ಬರ್ಗ ಮತ್ತು ಧಾರವಾಡ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂಗೊಳಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು. ಧಾರವಾಡ ಮತ್ತು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂಗೊಳಿಸಿ ವರ್ಷದ 365 ದಿನಗಳ ಕಾಲವು ಕಲಾಪ ನಡೆಯಲು ಕೇಂದ್ರ ಅನುಮತಿ ನೀಡಿತು.

ಕ್ರಿಕೆಟಿಗ ಶ್ರೀಶಾಂತ್ ಬಂಧನ

ಕ್ರಿಕೆಟಿಗ ಶ್ರೀಶಾಂತ್ ಬಂಧನ

ಐಪಿಎಲ್ ಸ್ಟಾಟ್ ಫಿಕ್ಸಿಂಗ್ ಪ್ರಕರಣದ ಆರೋಪದ ಮೇಲೆ ಮೇ.16ರಂದು ಕ್ರಿಕೆಟಿಗ ಶ್ರೀಶಾಂತ್, ಅಜಿತ್ ಚಾಂಡಿಲಾ, ಅಂಕಿತ್ ಚೌವಾಣ್ ಅವರನ್ನು ಪೊಲೀಸರು ಬಂಧಿಸಿದರು. ಓವರ್ ಗೆ ಇಂತಿಷ್ಟು ರನ್ ನೀಡುತ್ತೇವೆ ಎಂದು ಬುಕ್ಕಿಗಳಿಂದ ಹಣ ಪಡೆದಿದ್ದರು ಎಂಬ ಆರೋಪ ಅವರ ಮೇಲಿದೆ. ಬಿಸಿಸಿಐ ಮೂವರು ಆಟಗಾರರಿಗೆ ನಿಷೇಧ ಹೇರಿತ್ತು.

ಬೇಲೂರು ಬಸ್ ದುರಂತ

ಬೇಲೂರು ಬಸ್ ದುರಂತ

ಹಾಸನ ಜಿಲ್ಲೆಯ ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಕೆಎಸ್ಆರ್ ಟಿಸಿ ಬಸ್ ಪಲ್ಟಿ ಹೊಡೆದು ಒಟ್ಟು 8 ಮಂದಿ ಪ್ರಯಾಣಿಕರು ಮೃತಪಟ್ಟರು, 15 ಪ್ರಯಾಣಿಕರು ಗಾಯಗೊಂಡರು. ಜು.23ರಂದು ಚಿಕ್ಕಮಗಳೂರು ಕೆಎಸ್ಆರ್ ಟಿಸಿ ಘಟಕಕ್ಕೆ ಸೇರಿದ ಸುವರ್ಣ ಕರ್ನಾಟಕ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+