ಪ್ರಧಾನಿ ನರೇಂದ್ರ ಮೋದಿ, ಮೈತ್ರಿ ಕೂಟದ ಬಗ್ಗೆ ಹೇಳಿದ್ದೇನು?
ಲೋಕಸಭಾ ಚುನಾವಣೆಯ ಮತ ಏಣಿಕೆ ಬಹುಶಃ ಮುಕ್ತಾಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ ಮಾಡುವ ಮೂಲಕ ಮೋದಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
18ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 292 ಸ್ಥಾನಗಳನ್ನು ಗೆದ್ದು ಸರಳ ಬಹುಮತವನ್ನು ಪಡೆದಿದೆ. ಆದರೆ INDIA ಮೈತ್ರಿ ಕೂಟ ಸಹ 233 ಸ್ಥಾನಗಳಲ್ಲಿ ಜಯಿಸಿ ಜಿದ್ದಾಜಿದ್ದಿನ ಹೋರಾಟ ನೀಡಿದೆ. ಈ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. ಎನ್‌ಡಿಎ ಮೈತ್ರಿ ಕೂಟದ ಪಕ್ಷವಾದ ಟಿಡಿಪಿ ಹಾಗೂ ಓಡಿಶಾ, ಬೀಹಾರ ಹಾಗೂ ದೇಶದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ದೇಶದ ಜನತೆ ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಕ್ಷಣ. ಈ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ನನ್ನ ಕುಟುಂಬಕ್ಕೆ ತಲೆಬಾಗುತ್ತೇನೆ. ಅವರ ಆಕಾಂಕ್ಷೆಗಳನ್ನು ಈಡೇರಿಸಲು ನಾವು ಹೊಸ ಶಕ್ತಿಯನ್ನು ತರುತ್ತೇವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಆಂಧ್ರ ಪ್ರದೇಶದ ಜನ ಎನ್‌ಡಿಎ ಮೈತ್ರಿ ಕೂಟದ ಬಗ್ಗೆ ನಂಬಿಕೆಯನ್ನು ಇಟ್ಟಿದ್ದಾರೆ. ಅವರು ನಮ್ಮ ಮೇಲೆ ಇಟ್ಟ ಪ್ರೀತಿಗೆ ತುಂಬ ಧನ್ಯವಾದಗಳು. ಇದೇ ಸಂದರ್ಭದಲ್ಲಿ ಚಂದ್ರಬಾಬು ನಾಯ್ದು ಹಾಗೂ ಪವನ್ ಕಲ್ಯಾಣ್ ಅವರಿಗೂ ಮೋದಿ ಅಭಿನಂದಿಸಿದ್ದಾರೆ.
ಇದು ಉತ್ತಮ ಆಡಳಿತಕ್ಕೆ ಮತ್ತು ಒಡಿಶಾದ ವಿಶಿಷ್ಟ ಸಂಸ್ಕೃತಿಗೆ ಸಂದ ಜಯವಾಗಿದೆ ಎಂದು ಮೋದಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಜನರ ಕನಸುಗಳನ್ನು ನನಸು ಮಾಡುವಲ್ಲಿ ಮತ್ತು ಒಡಿಶಾವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಬಿಜೆಪಿ ಶ್ರಮಿಸಲಿದೆ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications