Holiday: ಪಶ್ಚಿಮ ಬಂಗಾಳದಲ್ಲಿ ಬಕ್ರೀದ್ ರಜೆ ದಿಢೀರ್ ರದ್ದು; ಎಂದಿನಂತೆ ಕಚೇರಿ, ಶಾಲೆಗಳು ಓಪನ್
ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರವು ಬಕ್ರೀದ್ ಹಬ್ಬದ ಸಾರ್ವಜನಿಕ ರಜೆ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಹಿಂದೆ ಘೋಷಿಸಲಾಗಿದ್ದ ಸತತ ಎರಡು ದಿನಗಳ ಸಾರ್ವಜನಿಕ ರಜೆಯನ್ನು ರದ್ದುಗೊಳಿಸಿದೆ. ಹೊಸ ಆದೇಶದ ಪ್ರಕಾರ ಮೇ 28ರಂದು ಮಾತ್ರ ಅಧಿಕೃತ ಸರ್ಕಾರಿ ರಜೆ ಇರಲಿದ್ದು, ಮೇ 26 ಮತ್ತು ಮೇ 27ರಂದು ಎಂದಿನಂತೆ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ರಾಜ್ಯ ಮುಖ್ಯ ಆಡಳಿತ ಮಂಡಳಿ ಶನಿವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ರಜೆ ಬದಲಾವಣೆಗೆ ಅಸಲಿ ಕಾರಣವೇನು?
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಚಂದ್ರನ ದರ್ಶನದ ಆಧಾರದ ಮೇಲೆ ಹಬ್ಬದ ದಿನಾಂಕಗಳು ನಿಶ್ಚಯವಾಗುವುದರಿಂದ, ಈ ಬಾರಿ ಬಕ್ರೀದ್ ಹಬ್ಬವನ್ನು ಮೇ 28ರ ಗುರುವಾರದಂದು ಆಚರಿಸಲಾಗುತ್ತಿದೆ ಎಂಬ ನಿಖರ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹಳೆಯ ರಜೆ ಪಟ್ಟಿಯನ್ನು ಪರಿಷ್ಕರಿಸಿ ರಾಜ್ಯಪಾಲರ ಒಪ್ಪಿಗೆಯೊಂದಿಗೆ ಹೊಸ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಹೊಸ ಪ್ರಕಟಣೆಯಲ್ಲಿ ಏನಿದೆ?
"ನವೆಂಬರ್ 27ರಂದು ಹೊರಡಿಸಲಾಗಿದ್ದ ಅಧಿಸೂಚನೆ ಪ್ರಕಾರ, ಬಕ್ರೀದ್ ಹಬ್ಬ ಹಾಗೂ ಹಬ್ಬದ ಹಿಂದಿನ ದಿನದ ನಿಮಿತ್ತ ಮೇ 26 (ಮಂಗಳವಾರ) ಮತ್ತು ಮೇ 27ರಂದು ಸಾರ್ವಜನಿಕ ರಜೆ ಎಂದು ಘೋಷಿಸಲಾಗಿತ್ತು. ಆದರೆ ಪ್ರಸ್ತುತ ಲಭ್ಯವಾಗಿರುವ ಮಾಹಿತಿಯಂತೆ ಬಕ್ರೀದ್ ಹಬ್ಬವನ್ನು ಮೇ 28ರಂದು ಆಚರಿಸಲಾಗುತ್ತಿದೆ. ಹಾಗಾಗಿ ಹಳೆಯ ಆದೇಶವನ್ನು ಭಾಗಶಃ ಮಾರ್ಪಡಿಸಿ, ಮೇ 28ರಂದು ಸಾರ್ವಜನಿಕ ರಜೆ ಎಂದು ಘೋಷಿಸಲು ಗೌರವಾನ್ವಿತ ರಾಜ್ಯಪಾಲರು ಹರ್ಷ ವ್ಯಕ್ತಪಡಿಸಿದ್ದಾರೆ" ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಹೊಸ ಆದೇಶದ ಹಿನ್ನೆಲೆಯಲ್ಲಿ, ಈ ಹಿಂದೆ ಮೇ 26 ಮತ್ತು 27ಕ್ಕೆ ಘೋಷಿಸಲಾಗಿದ್ದ ರಜೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಸರ್ಕಾರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕುಗಳು ಹಾಗೂ ಇತರೆ ಎಸ್ಟಾಬ್ಲಿಷ್‌ಮೆಂಟ್‌ಗಳಿಗೆ ಈ ನಿಯಮ ಅನ್ವಯವಾಗಲಿದ್ದು, ಈ ಎರಡೂ ದಿನಗಳು ಎಂದಿನಂತೆ ಸಾಮಾನ್ಯ ಕೆಲಸದ ದಿನಗಳಾಗಿರಲಿವೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತನ್ನ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಸ್ಪಷ್ಟನೆ ನೀಡಿದೆ.
ಬಕ್ರೀದ್ ಹಬ್ಬದ ಧಾರ್ಮಿಕ ಮಹತ್ವ
ಈದ್ ಅಲ್-ಅಧಾ ಅಥವಾ ತ್ಯಾಗದ ಹಬ್ಬವು, ಪ್ರವಾದಿ ಇಬ್ರಾಹಿಂ ಅವರು ದೇವರ ಮೇಲಿನ ಅಪಾರ ಭಕ್ತಿ ಮತ್ತು ಆಜ್ಞಾ ಪಾಲನೆಗಾಗಿ ತಮ್ಮ ಮಗನನ್ನೇ ಬಲಿ ನೀಡಲು ಮುಂದಾದ ಪವಿತ್ರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈ ಹಬ್ಬದ ಆಚರಣೆಯು ಸಾಂಪ್ರದಾಯಿಕವಾಗಿ ಸಾಮೂಹಿಕ ಪ್ರಾರ್ಥನೆಗಳು, ದಾನ ಧರ್ಮಗಳು ಮತ್ತು ಜಾನುವಾರುಗಳ ಕುರ್ಬಾನಿ (ಬಲಿ) ನೀಡುವುದನ್ನು ಒಳಗೊಂಡಿರುತ್ತದೆ. ಇದು ದಾನದ ಹಂಚಿಕೆ ಮತ್ತು ಸಾಮಾಜಿಕ ಸಹಾನುಭೂತಿಯ ಮೂಲ ತತ್ವಗಳನ್ನು ಎತ್ತಿ ತೋರಿಸುತ್ತದೆ.
ಈ ಹಬ್ಬವು ಸಾಮೂಹಿಕ ಪ್ರಾರ್ಥನೆಯಾದ ನಮಾಜ್ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಕುರ್ಬಾನಿ ಅಥವಾ ಪ್ರಾಣಿ ಬಲಿ ನೀಡುವ ಮುನ್ನ ಈ ನಮಾಜ್ ಮಾಡುವುದು ನಿಯಮವಾಗಿದೆ. ಬಲಿ ನೀಡಿದ ನಂತರ, ಮಾಂಸ ಮತ್ತು ವಿವಿಧ ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಬಡ ಸಮುದಾಯದವರಿಗೆ, ಕುಟುಂಬದ ಸದಸ್ಯರಿಗೆ ವಿತರಿಸಲಾಗುತ್ತದೆ. ಹಬ್ಬದ ದಿನಗಳಲ್ಲಿ ಭಕ್ತರು ಸಾಮಾನ್ಯವಾಗಿ ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿ, ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಬ್ಬದ ಉಟವನ್ನು ಒಟ್ಟಿಗೆ ಸವಿಯುತ್ತಾರೆ.













Click it and Unblock the Notifications