ಬೆಳಗಾವಿ ಸೇರಿ ಕರ್ನಾಟಕದ 865 ಹಳ್ಳಿಗಳ ಒಂದು ಇಂಚು ಭೂಮಿಗಾಗಿಯೂ ಹೋರಾಡಲಿದ್ದೇವೆ: ಮಹಾರಾಷ್ಟ್ರ ಸಿಎಂ
ಮುಂಬೈ, ಡಿಸೆಂಬರ್ 28: ಕರ್ನಾಟಕ- ಮಹಾರಾಷ್ಟ್ರದ ನಡುವಿನ ಸಂಘರ್ಷ ದಿನೇದಿನೇ ತಾರಕಕ್ಕೆ ಏರುತ್ತಲೇ ಇದೆ. ನಿನ್ನೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಿಎಂ ಏಕನಾಥ್ ಶಿಂಧೆ ಸರ್ಕಾರವು ಕಾನೂನಾತ್ಮಕ ಹೋರಾಟಕ್ಕೆ ನಿರ್ಣಯ ಮಂಡಿಸಿತ್ತು. ಮಹಾರಾಷ್ಟ್ರ ಸರ್ಕಾರದ ಈ ನಿಲುವನ್ನು ಕರ್ನಾಟಕದ ರಾಜಕೀಯ ನಾಯಕರು ಹಾಗೂ ಕನ್ನಡ ಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿರೋಧ ಪಕ್ಷಗಳ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಹಾರಾಷ್ಟ್ರದ ವಿರುದ್ಧ ಹರಿಹಾಯ್ದಿದ್ದರು. ಕರ್ನಾಟಕದ ಒಂದು ಇಂಚು ನೆಲವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲವೆಂದು ಹೇಳಿದ್ದರು.
ಕರ್ನಾಟಕದ ನಿಲುವಿಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು, 'ಕರ್ನಾಟಕ ನಮಗೆ ಸವಾಲು ಹಾಕಬಾರದು. ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಸೇರಿದಂತೆ 865 ಹಳ್ಳಿಗಳ ಒಂದು ಇಂಚು ಭೂಮಿಯನ್ನು ನಾವು ಬಿಟ್ಟುಕೊಡುವುದಿಲ್ಲ. ಅದಕ್ಕಾಗಿ ನಾವು ಕಾನೂನು ರೀತಿಯಲ್ಲಿ ಏನು ಬೇಕಾದರೂ ಮಾಡುತ್ತೇವೆ. ಹೋರಾಟ ನಡೆಸುತ್ತೇವೆ. ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಬಳಿ ಮನವಿ ಮಾಡುತ್ತೇವೆ' ಎಂದು ಹೇಳಿದ್ದಾರೆ.

ಮರಾಠಿ ಮಾತನಾಡುವ ನಮ್ಮ ಜನರಿಗೆ ಅನ್ಯಾಯವಾಗದಂತೆ ನಾವು ಎಲ್ಲವನ್ನೂ ಮಾಡುತ್ತೇವೆ ಎಂದೂ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಬೇಕೆಂಬುದು ಮಹಾರಾಷ್ಟ್ರದ ವಿರೋಧ ಪಕ್ಷಗಳ ನಿಲುವೂ ಆಗಿದೆ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಬೇಕೆಂದು ಶಿವಸೇನಾ ನಾಯಕ, ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ.
'ಭಾರತದೊಳಗೆ ಚೀನಾ ನುಗ್ಗಿದಂತೆ ಬೆಳಗಾವಿಗೆ ನಾವು ನುಗ್ಗುತ್ತೇವೆ' ಎಂದು ಶಿವಸೇನಾ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಗುರುತಿಸಲಾಗಿರುವ ಮರಾಠಿ ಭಾಷಿಗರ ಪ್ರದೇಶಗಳನ್ನು ವಶಪಡಿಸಿಕೊಂಡೇ ತೀರುತ್ತೇವೆ ಎಂದು ಬಿಜೆಪಿ ನಾಯಕ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಇದಕ್ಕೆ ಕಿಡಿ ಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡೂ ಸರ್ಕಾರಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿವೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕರ್ನಾಟಕದ ಒಂದು ಇಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಖಂಡಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಮುಂಬೈಯಲ್ಲಿ ಎಷ್ಟು ಜನ ಮರಾಠಿ ಮಾತನಾಡುವವರು ಇದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಹಾರಾಷ್ಟ್ರ ನಾಯಕರು ತೀಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications