Vistara Direct Flight: ದೆಹಲಿಯಿಂದ ತಡೆರಹಿತ ವಿಮಾನ ಸೇವೆಗೆ ಚಾಲನೆ ನೀಡಿದ 'ವಿಸ್ತಾರಾ'
ನವದೆಹಲಿ, ಬೆಂಗಳೂರು, ಅಕ್ಟೋಬರ್ 30: ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿರುವ 'ವಿಸ್ತಾರಾ' (Vistara Airlines) ಅಂತಾರಾಷ್ಟ್ರೀಯ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡುತ್ತಿದೆ. ಇದರ ಭಾಗವಾಗಿಯೇ ದೆಹಲಿಯಿಂದ ತಡೆರಹಿತ ಸೇವೆ ಆರಂಭಿಸಿದೆ.
'ವಿಸ್ತಾರಾ' ಸಂಸ್ಥೆಯ ವಿಮಾನಗಳು ದೆಹಲಿ-ಹಾಂಗ್ ಕಾಂಗ್ ಮಧ್ಯೆ ತಡೆ ರಹಿತ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. ಸೋಮವಾರ ವಿಸ್ತಾರಾದ ಅತ್ಯಾಧುನಿಕ ವಿಮಾನವು (A321neo) ಹಾರಾಟ ನಡೆಸುವ ಮೂಲಕ ತಡೆರಹಿತ ಸೇವೆ ನೀಡಿತು. ಈ ಮೂಲಕ ದೆಹಲಿ ಮತ್ತು ಹಾಂಗ್ ಕಾಂಗ್ ಮಧ್ಯೆ ವಿಮಾನಯಾನ ಸಂಪರ್ಕ ಹೆಚ್ಚಿಸುವಲ್ಲಿ ವಿಸ್ತಾರಾ ಮಹತ್ವ ಹೆಜ್ಜೆ ಇಟ್ಟಿದೆ.

ಅಕ್ಟೊಬರ್ 29ರಿಂದ ದೆಹಲಿ ವಿಮಾನ ನಿಲ್ದಾಣದಿಂದ ಹೊರಟ ವಿಸ್ತಾರ ವಿಮಾನವು ಅಕ್ಟೋಬರ್ 30 ರಂದು ಬೆಳಗ್ಗೆ ಹಾಂಗ್ ಕಾಂಗ್ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಯಿತು ಎಂದು ಏರ್‌ಲೈನ್ಸ್ ಮಾಹಿತಿ ನೀಡಿದೆ.
ತಡೆ ರಹಿತ ಈ ನೇರ ಮಾರ್ಗವು ಅಂತಾರಾಷ್ಟ್ರೀಯ ನೆಟ್‌ವರ್ಕ್ ಜಾಲ ಬೆಳೆಸುವ ವಿಸ್ತಾರಾ ಕಾರ್ಯತಂತ್ರ, ದೂರದೃಷ್ಟಿಯ ಭಾಗವಾಗಿದೆ. ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಹಾಂಗ್ ಕಾಂಗ್ ಜೊತೆಗೆ ವ್ಯಾಪಾರಗಳಿಗೆ ಇದು ಮತ್ತಷ್ಟು ಪೂರಕವಾಗಿದೆ.
ದೆಹಲಿ-ಹಾಂಗ್ ಕಾಂಗ್ ವಿಮಾನ, ಸಮಯ ಮಾಹಿತಿ
ದೆಹಲಿ ಮತ್ತು ಹಾಂಗ್ ಕಾಂಗ್ ನಡುವಿನ ದೈನಂದಿನ ತಡೆರಹಿತ ವಿಮಾನಗಳು ಬಿಸಿನೆಸ್ ಕ್ಲಾಸ್‌ನಲ್ಲಿ ಆಸನ ವ್ಯವಸ್ಥೆ ಇದೆ. ಫ್ಲಾಟ್ ಬೆಡ್, ವಿಮಾನಯಾನ ವೇಳೆ ಮನರಂಜನೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ದೆಹಲಿಯಿಂದ 21:05 ಗಂಟೆಗೆ (ಭಾರತೀಯ ಕಾಲಮಾನ) ವಿಮಾನ ಹಾರಾಟ ಆರಂಭವಾಗುತ್ತಿದೆ. ಮರುದಿನ ಬೆಳಗ್ಗೆ 05:55 ಗಂಟೆಗೆ ಹಾಂಗ್ ಕಾಂಗ್ ತಲುಪುತ್ತದೆ.

ಮುಂದೆ ಮತ್ತಷ್ಟು ಮಾರ್ಗಗಳಿಗೆ ಸಂಪರ್ಕ?
ಈ ನೂತನ ಸೇವೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವಿಸ್ತಾರಾ ಸಿಇಒ ವಿನೋದ್ ಕಣ್ಣನ್ ಅವರು, ಹಾಂಗ್ ಕಾಂಗ್‌ಗೆ ನೇರ ವಿಮಾನಗಳ ಸಂಪರ್ಕವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಹೆಜ್ಜೆ ಆಗಿದೆ. ಮುಂದಿನ ತ್ರೈಮಾಸಿಕದಲ್ಲಿ ವಿಸ್ತಾರಾ ಸಂಸ್ಥೆ ಮತ್ತಷ್ಟು ನೇರ ಮಾರ್ಗಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ.
ವಿಸ್ತಾರಾ ಪೂರ್ಣ-ಸೇವಾ ಏರ್‌ಲೈನ್ ಆಗಿದ್ದು, ಟಾಟಾಸ್ ಮತ್ತು ಸಿಂಗಾಪುರ್ ಏರ್‌ಲೈನ್ಸ್ ನಡುವಿನ ಉದ್ಯಮವಾಗಿದೆ. 48 ಏರ್‌ಬಸ್ (A320neos), 10 ಏರ್‌ಬಸ್ (A321s) ಹಾಗೂ 5 ಬೋಯಿಂಗ್ (787-9) ಡ್ರೀಮ್‌ಲೈನರ್‌ಗಳು ಸೇರಿದಂತೆ 63 ವಿಮಾನ ಹೊಂದಿರುವ ಬೃಹತ್ ಸಂಸ್ಥೆ ಇದಾಗಿದೆ.












Click it and Unblock the Notifications