ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಮೂರು ಮಕ್ಕಳ ತಾಯಿಯ ಬರ್ಬರ ಹತ್ಯೆ!
ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಈಗ ನಡೆದಿರುವ ಘಟನೆ ಭಾರತವನ್ನೇ ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ. ಮಣಿಪುರದಲ್ಲಿ ಸಂಘರ್ಷ ಶುರುವಾಗಿ ಎರಡು ವರ್ಷಕ್ಕೂ ಹೆಚ್ಚಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಮಣಿಪುರದಲ್ಲಿ ಅಲ್ಪ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಭಾವಿಸಲಾಗಿತ್ತು. ಆದರೆ, ಈಗ ಪರಿಸ್ಥಿತಿ ತೀರ ಮೋಸವಾಗಿದ್ದು, ಮಹಿಳೆಯೊಬ್ಬರನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂಘರ್ಷ ಪೀಡಿತ ಮಣಿಪುರದ ಜಿರಿಬಾಮ್ ಎನ್ನುವ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಹಮಾರ್ ಸಮುದಾಯಕ್ಕೆ ಸೇರಿದ ಮೂರು ಮಕ್ಕಳ ತಾಯಿಯನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಲ್ಲದೇ ಆ ಮಹಿಳೆಯನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು, ನಂತರ ಶವವನ್ನು ಸುಟ್ಟು ಹಾಕಿದ್ದಾರೆ. ಈ ಕೃತ್ಯ ನಡೆದಿರುವುದು ಸ್ಥಳೀಯರ ಎದೆಯನ್ನು ನಡುಗಿಸಿದ್ದರೆ, ಮೂರು ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಮಣಿಪುರದಲ್ಲಿ ಸಂಘರ್ಷ ಮತ್ತೆ ಈ ಹಿಂದೆ ನಡೆದಷ್ಟೇ ಭೀಕರವಾಗಿ ನಡೆಯುತ್ತಿದೆ. ಅಪರಿಚಿತ ಗುಂಪುಗಳ ನಡುವೆ ಗುಂಡಿನ ದಾಳಿಗಳು ನಡೆದಿದ್ದು, ಪರಿಸ್ಥಿತಿಯ ಲಾಭ ಪಡೆದಿರುವ ದಂಡುಕೋರರು ಇಲ್ಲಿನ ಮನೆಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆಯುತ್ತಿದ್ದಾರೆ. ಇದೀಗ ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಮಹಿಳೆಯು ಇಲ್ಲಿನ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಮೃತಪಟ್ಟವರನ್ನು ಜೊಸಾಂಗ್ಕಿಮ್ ಎಂದು ಗುರುತಿಸಲಾಗಿದೆ.
ಇಲ್ಲಿ ಮೈತೇಯ್ ಮತ್ತು ಕುಕಿ ಸಮುದಾಯಗಳ ನಡುವೆ ಸಂಘರ್ಷ ಮುಂದುವರಿದಿದೆ. ಕುಕಿ-ಜೋ ಸಂಘಟನೆಯು ಶುಕ್ರವಾರ ಮಧ್ಯಾಹ್ನ ಮಹತ್ವದ ಸಂದೇಶವೊಂದನ್ನು ಬಿಡುಗಡೆ ಮಾಡಿದೆ. ಇಲ್ಲಿ ಮೈತೇಯ್ ಸಮುದಾಯಕ್ಕೆ ಸೇರಿದ ಶಸಸ್ತ್ರಸಜ್ಜಿತ ಗುಂಪು ಜಿರಿಬಾಮ್‌ನ ಜೈರವನ್ ಗ್ರಾಮಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಗುಂಡು ದಾಳಿ ನಡೆಯುವ ಸಂದರ್ಭದಲ್ಲಿ ಇಲ್ಲಿದ್ದ ಜನ ಕಾಡಿನ ಒಳಗೆ ಓಡಿ ಹೋಗಿ ಜೀವ ರಕ್ಷಿಸಿಕೊಂಡಿದ್ದಾರೆ. ಆದರೆ, 31 ವರ್ಷ ವಯಸ್ಸಿನ ಜೊಸಾಂಗ್ಕಿಮ್ ಅವರನ್ನು ಮೈತೇಯ್ ಸಮುದಾಯದ ಬಂದೂಕುಧಾರಿಗಳು ಸೆರೆಹಿಡಿದು, ಅತ್ಯಾಚಾರ ಮಾಡಿ ಮತ್ತು ಸುಟ್ಟು ಕೊಂದಿದ್ದಾರೆ ಎಂದು ಹೇಳಿದೆ.
ಪೊಲೀಸರಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ: ಇನ್ನು ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಹಾಗೂ ಮಹಿಳೆಯ ಹತ್ಯೆ ಸೇರಿದಂತೆ ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ ಮಣಿಪುರ ಪೊಲೀಸರಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ.
ಎರಡು ವರ್ಷಗಳಿಂದ ಸಂರ್ಘ: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮೈತೇಯ್ ಮತ್ತು ಕುಕಿ ಸಮುದಾಯಗಳ ನಡುವೆ ಕಳೆದ ಎರಡು ವರ್ಷಗಳಿಂದಲೂ ಸಂಘರ್ಷ ನಡೆಯುತ್ತಿದೆ. ಕಳೆದ ವರ್ಷ ಮೇ ತಿಂಗಳಿನಿಂದ ಮಣಿಪುರದ ಮೈತೇಯ್ ಮತ್ತು ಕುಕಿ ಸಮುದಾಯಗಳ ನಡುವೆ ಸಂಘರ್ಷ ಶುರುವಾಗಿತ್ತು. ಈ ಆಂತರಿಕ ಸಂಘರ್ಷದಲ್ಲಿ ಇಲ್ಲಿಯವರೆಗೆ ಅಂದಾಜು 240ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ 60,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಭಾರತೀಯ ಸೇನೆ ಸೇರಿದಂತೆ ಭಾರೀ ಭದ್ರತಾ ಪಡೆಗಳು ಮಧ್ಯಪ್ರವೇಶ ಮಾಡಿರುವುದರ ಹೊರತಾಗಿಯೂ ಹಿಂಸಾಚಾರ ಹಾಗೂ ಸಂಘರ್ಷ ನಿಂತಿಲ್ಲ.












Click it and Unblock the Notifications