ಗುಜರಿ ಅಂಗಡಿಗೆ ಸೇರಿದ ಮಲ್ಯ ಖಾಸಗಿ ವಿಮಾನ
ಮುಂಬೈ, ಏ 16: ಸಾಲದ ಚಕ್ರವ್ಯೂಹದಲ್ಲಿ ಸಿಲುಕಿರುವ ಮದ್ಯದೊರೆ ವಿಜಯ್ ಮಲ್ಯ ಅವರ ಪ್ರೀತಿಯ ಖಾಸಗಿ ಲೋಹದ ಹಕ್ಕಿ ರೆಕ್ಕೆ ಮುರಿದುಕೊಂಡು ಬಿದ್ದಿದೆ. ಮಲ್ಯ ಅವರ ಸಾಲದ ಹೊರೆಗೆ ಕುಸಿದು ಶೆಡ್ ಸೇರಿದ್ದ ಜೆಟ್ ಈಗ ಗುಜರಿ ಅಂಗಡಿ ಪಾಲಾಗಿದೆ.
ಹನ್ನೊಂದು ಸೀಟರಿನ ಮಲ್ಯ ಅವರ ಖಾಸಗಿ ಜೆಟ್ ವಿಮಾನನ್ನು ಮುಂಬೈ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಹರಾಜಿಗೆ ಇಡಲಾಗಿತ್ತು.
ಮುಂಬೈ ಮೂಲದ ಸೈಲೆಂಟ್ ಎಂಟರ್ಪೈಸಸ್ ಎನ್ನುವ ಸಂಸ್ಥೆ ಮಲ್ಯ ವಿಮಾನವನ್ನು 22 ಲಕ್ಷ ರೂಪಾಯಿಗೆ ಖರೀದಿಸಿದೆ ಎಂದು ಮಿಡ್ ಡೇ ಪತ್ರಿಕೆ ವರದಿ ಮಾಡಿದೆ.

ವಿಮಾನದ ಬಿಡಿಭಾಗಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ ಗುಜುರಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಜೆಟ್ ಖರೀದಿಸಿದ ಸೈಲೆಂಟ್ ಎಂಟರ್ಪೈಸಸ್ ಸಂಸ್ಥೆ ನಿರ್ಧರಿಸಿದೆ. (ಸುಸ್ತಿದಾರನಾದರೂ ಸುಸ್ತಾಗದ ಮಲ್ಯ)
ಏಪ್ರಿಲ್ ಆರನೇ ತಾರೀಕಿನಿಂದಲೇ ವಿಮಾನದ ಬಿಡಿಭಾಗಗಳನ್ನು ಬೇರೆ ಬೇರೆ ಮಾಡುವ ಕೆಲಸ ಆರಂಭವಾಗಿದ್ದು, ಮುಂದಿನ ವಾರ ಇದು ಸಂಪೂರ್ಣಗೊಳ್ಳಲಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.
ಈ ವಿಮಾನದಿಂದ ಸುಮಾರು 6.5 ಟನ್ ಗುಜುರಿ ಬರಬಹುದೆಂದು ನಿರೀಕ್ಷಿಸಿದ್ದೇವೆ. ಕೆಲಸಗಾರರು ದಿನದ ಎಂಟು ಗಂಟೆ ಕೆಲಸ ಮಾಡುತ್ತಿದ್ದಾರೆಂದು ಸೈಲೆಂಟ್ ಎಂಟರ್ಪೈಸಸ್ ಮೇಲ್ವಿಚಾರಕ ತಿಳಿಸಿದ್ದಾರೆ.
Once a sign of liquor baron Vijay Mallya's prosperity is being taken apart to be sold as scrap pic.twitter.com/81j9OF8fZa
— HeadlinesToday (@HeadlinesToday) April 15, 2015 ಓಬೆರಾಯ್ ಗ್ರೂಪ್ ಒಡೆತನದ ಹೆಸರಿನಲ್ಲಿದ್ದ ಈ ವಿಮಾನವನ್ನು ವಿಜಯ್ ಮಲ್ಯ 2005ರಲ್ಲಿ ಖರೀದಿಸಿದ್ದರು. ತೀವ್ರ ನಷ್ಟ ಮತ್ತು ಕಾರ್ಮಿಕರಿಗೆ ಸಂಬಳ ಪಾವತಿಸಲಾಗದೇ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ಲೈನ್ಸ್ ಸಂಸ್ಥೆಯ ಲೈಸೆನ್ಸ್ ರದ್ದಾಗಿತ್ತು.
ಮುಂಬೈನ ವಿಲೆಪಾರ್ಲ್ ನಲ್ಲಿರುವ ಈಗಿನ ಅಂದಾಜು ನೂರು ಕೋಟಿ ಮಾರುಕಟ್ಟೆ ಬೆಲೆ ಹೊಂದಿರುವ 'ಕಿಂಗ್ ಫಿಷರ್ ಹೌಸ್' ಅನ್ನು ಕೂಡಾ ಮಲ್ಯ ಕಳೆದುಕೊಳ್ಳುವ ಸಂಭವವಿದೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.












Click it and Unblock the Notifications