ಲಾಕ್ ಡೌನ್ ಮುಗಿದ ನಂತರ 'ಸಾರ್ವಜನಿಕರ ಆಯ್ಕೆ' ಯಾವುದು: ಸಮೀಕ್ಷೆ
ಮೂರನೇ ಹಂತದ ಲಾಕ್ ಡೌನ್ ಇಂದು (ಮೇ 17) ಮುಗಿಯಲಿದೆ. ನಾಲ್ಕನೇ ಹಂತದ ಲಾಕ್ ಡೌನ್ ವಿಭಿನ್ನವಾಗಿರಲಿದೆ ಎಂದು ಈಗಾಗಲೇ ಪ್ರಧಾನಿಗಳು ಹೇಳಿಯಾಗಿದೆ.
ಹಲವು ರಾಜ್ಯಗಳು ಲಾಕ್ ಡೌನ್ ಇನ್ನೂ ಮುಂದುವರಿಯಬೇಕು ಎಂದರೆ, ಕರ್ನಾಟಕ, ಕೇರಳ ಸೇರಿದಂತೆ, ಹಲವು ರಾಜ್ಯಗಳು ಲಾಕ್ ಡೌನ್ ಸಡಿಲಗೊಳಿಸಿ ಎಂದು ಪ್ರಧಾನಿಗಳನ್ನು ಒತ್ತಾಯಿಸಿವೆ.
ಲಾಕ್ ಡೌನ್ ಆರಂಭವಾಗಿ ಸುಮಾರು ಐವತ್ತು ದಿನಗಳ ಮೇಲಾಗಿದೆ. ಆದರೂ, ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಈ ಎಲ್ಲಾ ಜಂಜಾಟ ಮುಗಿದ ಮೇಲೆ, ಅಂದರೆ ಲಾಕ್ ಡೌನ್ ಮುಗಿದ ನಂತರ, ಸಾರ್ವಜನಿಕರ ದೈನಂದಿನ ಜೀವನ ಹೇಗೆ? ಮಾಲ್ ಗೆ ಹೋಗ್ತೀರೋ, ಸಾರ್ವಜನಿಕ ಸಾರಿಗೆ ಬಳಸುತ್ತೀರೋ.. ಹೀಗೆ, ಸರ್ವೇಯೊಂದನ್ನು ನಡೆಸಲಾಗಿದೆ. ಅದಕ್ಕೆ ಬಂದ ಜನಾಭಿಪ್ರಾಯ ಹೀಗಿದೆ:

ವೆಲೊಸಿಟಿ ಎಂಆರ್, ಸಿಇಒ ಜಶಾಲ್ ಶಾ
"ಕಳೆದ ಏಪ್ರಿಲ್ ತಿಂಗಳಲ್ಲಿ, ಮೂರು ಸಾವಿರ ಸ್ಯಾಂಪಲ್ ಮೂಲಕ ಈ ಸರ್ವೇಯನ್ನು ಸಿದ್ದಪಡಿಸಲಾಗಿದೆ. ಇದರ ಪ್ರಕಾರ ಮ್ಯೂಚುಯಲ್ ಫಂಡ್ ಮೇಲೆ ಶೇ. 47, ಶೇರು ಮಾರುಕಟ್ಟೆಯ ಮೇಲೆ ಶೇ.33 ಮತ್ತು ಶೇ.30ರಷ್ಟು ಜನ ಚಿನ್ನಾಭರಣದ ಮೇಲೆ ಹಣ ಹೂಡಲು ಒಲವು ತೋರಿದ್ದಾರೆ" ಎಂದು ಈ ಸರ್ವೇ ನಡೆಸಿದ ವೆಲೊಸಿಟಿ ಎಂಆರ್, ಸಿಇಒ ಜಶಾಲ್ ಶಾ ಹೇಳಿದ್ದಾರೆ.

ಆರೋಗ್ಯ ಸೇತು ಆಪ್
ಸರ್ವೇ ಪ್ರಕಾರ, ಆರೋಗ್ಯ ಸೇತು ಆಪ್ ಅನ್ನು ಶೇ. 77ರಷ್ಟು ಜನ ಬಳಸುವುದಾಗಿ ಹೇಳಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿ, ಸ್ಯಾನಿಟೈಸರ್ ಬಳಸುವುದಾಗಿ, ಲಾಕ್ ಡೌನ್ ನಂತರ ಸಾಮಾಜಿಕ ನಡುವಳಿಕೆ ತುಂಬಾ ಬದಲಾಗಿದೆ ಎಂದು ಶೇ. 57 ಜನ ಅಭಿಪ್ರಾಯ ಪಟ್ಟಿದ್ದಾರೆ.

ವರ್ಕ್ ಫ್ರಂ ಹೋಮ್ ಒಳ್ಳೆಯ ಆಯ್ಕೆ
ಇನ್ನು ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚಾಗಿ ಬಳಸುವುದಾಗಿ ಹೇಳಿರುವವರು ಶೇಕಡಾವಾರು 90. ಮದ್ಯ, ಸಿಗರೇಟ್, ಗುಟ್ಕಾ ಅಥವಾ ಯಾವುದೇ ತಂಬಾಕು ಪದಾರ್ಥಗಳು ಸಿಗದೇ ಇದ್ದಿದ್ದರಿಂದ ಒಳ್ಳೆಯದೇ ಆಯಿತು ಎಂದು ಹೇಳಿದವರ ಪ್ರಮಾಣ ಶೇ. 80. ಇನ್ನು, ವರ್ಕ್ ಫ್ರಂ ಹೋಮ್ ಒಳ್ಳೆಯ ಆಯ್ಕೆ ಎಂದು ಹೇಳಿದವರು ಶೇ. 74.

ಸಾರ್ವಜನಿಕ ಸಾರಿಗೆ
ಲಾಸ್ಟ್ ಬಟ್ ನಾಟ್ ಲೀಸ್ಟ್. ಲಾಕ್ ಡೌನ್ ಮುಗಿದ ನಂತರ ಸಾರ್ವಜನಿಕ ಸಾರಿಗೆ (ಬಸ್/ಮೆಟ್ರೋ/ಲೋಕಲ್ ಟ್ರೈನ್) ಬಳಸಲು ಇಚ್ಚಿಸದೇ ಇರುವವರ ಸಂಖ್ಯೆ ಶೇ. 70. ಓಲಾ, ಉಬರ್ ಮುಂತಾದವುಗಳನ್ನೂ ಬಳಸುವುದಿಲ್ಲ ಎನ್ನುವವರ ಸಂಖ್ಯೆ ಶೇ. 62. ಆನ್ಲೈನ್ ಶಾಪಿಂಗ್ ಪರ ಶೇ. 80 ಮತ್ತು ಮಾಲ್ ಗಳಿಗೆ ಹೋಗುವುದನ್ನು ಕಮ್ಮಿ ಮಾಡುತ್ತೇವೆ ಎಂದವರು ಶೇ. 71.












Click it and Unblock the Notifications