'ಭಾರತ ಒಂದು ಗೊಂದಲ ದೇಶ': ಚೀನಾಕ್ಕೆ ಹೋಲಿಸಿ ಇಂದ್ರಾ ನೂಯಿ ನೀಡಿದ ಹೇಳಿಕೆಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ
ಪ್ರಪಂಚದ ಕಣ್ಣಿಗೆ ಭಾರತ ಎಂದರೆ ವೈವಿಧ್ಯತೆಯ ನೆಲೆಬೀಡು. ಇಲ್ಲಿನ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಪ್ರತಿಯೊಬ್ಬರನ್ನು ಸೆಳೆಯುತ್ತವೆ. ಆದರೆ, ಇದೇ ವೈವಿಧ್ಯತೆಯ ನಡುವೆ ಇರುವ ವ್ಯವಸ್ಥೆಯ ಅನಿಶ್ಚಿತತೆ ಅಥವಾ ಗೊಂದಲವನ್ನೇ ಆಧಾರವಾಗಿಟ್ಟುಕೊಂಡು ಇದೀಗ ಭಾರಿ ಚರ್ಚೆಯೊಂದು ಹುಟ್ಟಿಕೊಂಡಿದೆ.
ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ, ಪೆಪ್ಸಿಕೋ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತವನ್ನು ಚೀನಾ ದೇಶಕ್ಕೆ ಹೋಲಿಸಿ ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ . 'ಭಾರತ ಒಂದು ಗೊಂದಲಮಯ ದೇಶ' ಎಂಬ ಅವರ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ದೇಶದ ನೈಜ ಚಿತ್ರಣದ ಕುರಿತು ಆತ್ಮಾವಲೋಕನಕ್ಕೆ ದಾರಿಮಾಡಿಕೊಟ್ಟಿದೆ.

ಚೀನಾ ಮತ್ತು ಭಾರತದ ನಡುವಿನ ಹೋಲಿಕೆ
ರಾಜಕೀಯ ವಿಜ್ಞಾನಿ ಹಾಗೂ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಅವರೊಂದಿಗಿನ ಸಂದರ್ಶನದಲ್ಲಿ 70 ವರ್ಷದ ಇಂದ್ರಾ ನೂಯಿ ಅವರು ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳಾದ ಭಾರತ ಮತ್ತು ಚೀನಾ ನಡುವಿನ ವ್ಯತ್ಯಾಸಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
"ಚೀನಾ ಏಕರೂಪತೆಯನ್ನು ಹೊಂದಿರುವ ದೇಶ. ಹೀಗಾಗಿ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಓಡಾಟ ಸುಲಭ. ಆದರೆ, ಭಾರತದ ಪ್ರಮುಖ ಲಕ್ಷಣವೇ ಅದರ ಗೊಂದಲ. ಇಲ್ಲಿನ ಸೌಂದರ್ಯವೇ ಆ ಗೊಂದಲದಲ್ಲಿ ಅಡಗಿದೆ," ಎಂದು ಅವರು ಹೇಳಿದ್ದಾರೆ.
ರಸ್ತೆ ಮೇಲಿನ ದೃಶ್ಯಗಳು ಮತ್ತು ಅನಿಶ್ಚಿತತೆ
ಭಾರತದ ಜನಜೀವನ ಹಾಗೂ ರಸ್ತೆಗಳ ಪರಿಸ್ಥಿತಿಯ ಬಗ್ಗೆಯೂ ನೂಯಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಾಹನಗಳು ಸಂಚರಿಸುವ ರಸ್ತೆಗಳಲ್ಲೇ ಹಸುಗಳು ಓಡಾಡುವ ಸಾಮಾನ್ಯ ದೃಶ್ಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ. "ಸ್ವಚ್ಛತೆ ಮತ್ತು ಶಿಸ್ತುಬದ್ಧ ಪರಿಸರವನ್ನು ಇಷ್ಟಪಡುವ ಪ್ರವಾಸಿಗ ಮೊದಲ ಬಾರಿಗೆ ಭಾರತಕ್ಕೆ ಬಂದರೆ, ಈ ದೃಶ್ಯಗಳು ಅವನಲ್ಲಿ ಗೊಂದಲ ಮೂಡಿಸಬಹುದು.
ಆದರೆ "ಭಾರತೀಯರಿಗೆ ಕಷ್ಟಗಳು ದಿನನಿತ್ಯದ ಬದುಕಿನ ಭಾಗ. 'ಇದು ಕೂಡ ಒಂದು ದಿನ ಕಳೆದುಹೋಗುತ್ತದೆ' ಎಂಬ ಮನಸ್ಥಿತಿ ಅಳವಡಿಸಿಕೊಂಡಿರುತ್ತಾರೆ. ಭಾರತದಲ್ಲಿನ ಗೊಂದಲಗಳು ಒಂದು ಮಾದಕ ವಸ್ತುವಿನಂತೆ. ಒಮ್ಮೆ ನೀವು ಅದನ್ನು ಇಷ್ಟಪಡಲು ಶುರುಮಾಡಿದರೆ, ಅದಕ್ಕೆ ದಾಸರಾಗಿ ಪದೇ ಪದೇ ಭಾರತಕ್ಕೇ ಬರಲು ಬಯಸುತ್ತೀರಿ," ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಇಂದ್ರಾ ನೂಯಿ ಅವರ ಈ ಮಾತುಗಳು ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಶುರುವಾಗಿದೆ. ನೆಟ್ಟಿಗರು ಎರಡು ಗುಂಪುಗಳಾಗಿದ್ದು, ಒಂದು ವರ್ಗದ ಜನರು ನೂಯಿ ಅವರ ಮಾತನ್ನು ಬೆಂಬಲಿಸಿದ್ದು, "ಅವರು ಹೇಳುತ್ತಿರುವುದು ಕಟುಸತ್ಯ. ಭಾರತದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಸ್ವಚ್ಛತೆಯ ಕೊರತೆ ಇದೆ. ನಾವು ಮೊದಲು ಕನ್ಸ್ಟ್ರಕ್ಟಿವ್ ಟೀಕೆಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು. ಒಮ್ಮೆ ದೇಶದ ಹೊರಗೆ ವಾಸಿಸಿದರೆ ಮಾತ್ರ ನಮ್ಮ ವ್ಯವಸ್ಥೆ ಎಷ್ಟು ಕೆಟ್ಟದಾಗಿದೆ ಎಂಬುದು ಅರ್ಥವಾಗುತ್ತದೆ," ಎಂದು ಕಮೆಂಟ್ ಮಾಡಿದ್ದಾರೆ.
ಆದರೆ, ಮತ್ತೊಂದು ವರ್ಗದ ಜನರು ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. "ಗೊಂದಲದಲ್ಲಿ ಹೆಮ್ಮೆಪಡುವಂಥದ್ದು ಏನೂ ಇಲ್ಲ. ಗೊಂದಲವನ್ನು ಸೌಂದರ್ಯ ಎಂದು ವೈಭವೀಕರಿಸುವುದು ತಪ್ಪು. ಇದು ವ್ಯವಸ್ಥೆ ಮತ್ತು ಸಮಾಜ ಅರ್ಥಪೂರ್ಣ ಬದಲಾವಣೆಗಾಗಿ ಶ್ರಮಿಸುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಚೀನಾದಲ್ಲೂ ಸ್ವಚ್ಛತೆ ಇಲ್ಲದ ಜಾಗಗಳಿವೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು, ಭಾರತದಲ್ಲಿನ ಸಿವಿಕ್ ಸೆನ್ಸ್ ಮತ್ತು ಸ್ವಚ್ಛತೆಯ ಕೊರತೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೀಗೆ ಚರ್ಚೆಯಾದರೆ ಮಾತ್ರ ಭವಿಷ್ಯದಲ್ಲಿ ಒಂದಷ್ಟು ಸುಧಾರಣೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಪ್ರಭಾವಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ಇಂದ್ರಾ ನೂಯಿ ಅವರು ಪ್ರಸ್ತುತ ಅಮೆಜಾನ್ ಆಡಳಿತ ಮಂಡಳಿಯಲ್ಲಿದ್ದಾರೆ ಹಾಗೂ 'ಮೈ ಲೈಫ್ ಇನ್ ಫುಲ್ ಎಂಬ ಆತ್ಮಚರಿತ್ರೆಯ ಲೇಖಕಿಯೂ ಹೌದು. ಒಟ್ಟಿನಲ್ಲಿ, ವ್ಯವಸ್ಥೆಯ ಗೊಂದಲವನ್ನು ರೊಮ್ಯಾಂಟಿಸೈಸ್ ಮಾಡಬಾರದು ಎಂಬ ಎಚ್ಚರಿಕೆಯ ಜೊತೆಗೆ ಅವರ ಈ ಹೇಳಿಕೆಯು ಭಾರತೀಯರ ಮೈಂಡ್ಸೆಟ್ ಬಗ್ಗೆ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.












Click it and Unblock the Notifications