Vande Bharat Sleeper: 180 ಕಿಮೀ ವೇಗ ಪರೀಕ್ಷೆಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲಿನ ಅಚ್ಚರಿಯ ಸ್ಥಿರತೆ, ವಿಡಿಯೋ
ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಕ್ರಾಂತಿ ಉಂಟು ಮಾಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂದುವರಿದ ಭಾಗ ವಂದೇ ಭಾರತ್ ಸ್ಲೀಪರ್ ರೈಲು (Vande Bharat Express Sleeper Train) 2026ರಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಈ ರೈಲು ಪ್ರತಿ ಗಂಟೆಗೆ 180 ಕಿಲೋ ಮೀಟರ್‌ಗೂ ಅಧಿಕ ವೇಗದಲ್ಲಿ ಚಲಿಸಲಿದೆ. ಈ ರೈಲಿನ ಶಕ್ತಿ, ಸಾಮರ್ಥ್ಯ, ಸಮತೋಲನ ಮತ್ತು ಆಧುನಿಕ ತಂತ್ರಜ್ಞಾನ ವೈಶಿಷ್ಟ್ಯತೆಗೆ ಸಂಬಂಧಿಸಿದ ವಿಡಿಯೋವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ.
ವಂದೇ ಭಾರತ್ ಸ್ಲೀಪರ್ ರೈಲಿನ ಅತೀ ವೇಗದ ಸಂಚಾರದ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ದೂರದ ಪ್ರಯಾಣ ಮಾಡುವವರಿಗೆ ಈ ರೈಲು ಸೂಕ್ತ ಸಾರಿಗೆಯಾಗಿದೆ. ಅತೀ ವೇಗದ ಸಂಚಾರಕ್ಕೆ ಪೂರಕ ತಂತ್ರಜ್ಞಾನ ಹೊಂದಿದೆ. ಜನರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಅನುಭವ ನೀಡುವ ಉದ್ದೇಶ ರೈಲ್ವೆ ಇಲಾಖೆ ಹೊಂದಿದೆ. ಗಂಟೆಗೆ 180 ಕಿಮೀ ವೇಗದಲ್ಲಿ ಕಾರ್ಯಾಚರಣೆ ಮಾಡುವುದರ ವೈಶಿಷ್ಟ್ಯತೆಯನ್ನು ಅಶ್ವಿನಿ ವೈಷ್ಣವ್ ಅವರು ವಿವರಿಸಿದ್ದಾರೆ. ಇದು ಎಲ್ಲ ಗಮನ ಸೆಳೆಯುತ್ತಿದೆ.

180 ಕಿಮೀ ವೇಗದಲ್ಲಿ ಸಂಚಾರ, ಅಲ್ಲಾಡದ ನೀರಿನ ಲೋಟ
ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿನ ಒಳಗೆ ನೀರು ತುಂಬಿದ ನಾಲ್ಕು ಗಾಜಿನ ಲೋಟಗಳನ್ನು ಇಡಲಾಗಿದೆ. ರೈಲು ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸಿದರೂ ಸಹಿತ ಒಂದೇ ಒಂದು ಹನಿ ನೀರು ಗ್ಲಾಸಿನಿಂದ ಬಿದ್ದಿಲ್ಲ. ನೀರಿನ ಲೋಟ್ ಒಂಚೂರು ಅಲುಗಡಿಲ್ಲ. ಈ ಮೂಲಕ ಅತೀ ವೇಗದಲ್ಲಿ ಸಂಚರಿಸಿದರೂ ಸಹ ರೈಲು ಸಂಪೂರ್ಣವಾಗಿ ಸಮತೋಲನ ಹೊಂದಿದೆ. ಸ್ಥಿರವಾಗಿ ಚಲಿಸುತ್ತದೆ ಎಂಬುದು ಈ ವಿಡಿಯೋ ಸ್ಪಷ್ಟಪಡಿಸಿದೆ.
ಅತ್ಯಾಧುನಿಕ, ಸುಧಾರಿತ ತಂತ್ರಜ್ಞಾನ ಹೊಂದಿರುವ ಈ ಹೊಸ ಸ್ಲಿಪರ್ ವಂದೇ ಭಾರತ್ ರೈಲು ಅಪಘಾತವಾಗದಂತೆ ತಡೆಯುವ ಸಾಮರ್ಥ್ಯ ಹೊಂದಿದ್ದು, ಪ್ರಯಾಣಿಕರಿಗೆ ಸುರಕ್ಷತೆ ಒದಗಿಸಲಿದೆ. ಐಶಾರಾಮಿ ಮತ್ತು ಆರಾಮದಾಯಕ ಸೇವೆಯನ್ನು ಖಚಿತಪಡಿಸುತ್ತದೆ.
ವಿಡಿಯೋ ಹಂಚಿಕೊಂಡ ರೈಲ್ವೆ ಸಚಿವರು ಹೇಳಿದ್ದೇನು?
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಗ ಪರೀಕ್ಷೆಯ ವಿಡಿಯೋ ಹಂಚಿಕೊಂಡಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ನಡೆಸಲಾಗಿದೆ. ರೈಲು ಕೋಟಾ-ನಾಗ್ಡಾ ವಿಭಾಗದ ನಡುವೆ ಸಂಚಾರ ನಡೆಸಿತು. ವಂದೇ ಭಾರತ್ ಸ್ಲೀಪರ್ ರೈಲು ವೇಗವಾಗಿರುವುದಲ್ಲದೆ ಸುರಕ್ಷತೆ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಎಂದು ಅಶ್ವಿನಿ ವೈಷ್ಣವ್ ಅವರು ಪೋಸ್ಟ್ ಮೂಲಕ ತಿಳಿಸಿದ್ದಾರೆ.
Vande Bharat Sleeper tested today by Commissioner Railway Safety. It ran at 180 kmph between Kota Nagda section. And our own water test demonstrated the technological features of this new generation train. pic.twitter.com/w0tE0Jcp2h
— Ashwini Vaishnaw (@AshwiniVaishnaw) December 30, 2025
ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆಗಳು
ವಂದೇ ಭಾರತ್ ಸ್ಲೀಪರ್ ರೈಲಿನ ಕಾರ್ಯಾಚರಣೆ ಈಗಾಗಲೇ ಆಗಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿದೆ. ದೆಹಲಿ ಮತ್ತು ಪಾಟ್ನಾ ನಡುವೆ 2026ರ ಜನವರಿಯಲ್ಲಿ ಸೇವೆ ಆರಂಭಿಸುವ ಸಾಧ್ಯತೆ ಇದೆ. ಸುಧೀರ್ಘ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಸೂಕ್ತ ಸೇವೆ ನೀಡಲಿದೆ. ರಾತ್ರಿ ಪ್ರಯಾಣ ಗಮನದಲ್ಲಿಟ್ಟುಕೊಂಡೆ ಈ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಎಸಿ ಸಹಿತ ಆಧುನಿಕ ಸ್ಲೀಪರ್ ಬೋಗಿಗಳಿವೆ. ಆರಾಮದಾಯಕ ಬರ್ತ್‌ಗಳು, ಸುಧಾರಿತ ಬೆಳಕು ಮತ್ತು ಸ್ಮಾರ್ಟ್ ಸೌಕರ್ಯಗಳನ್ನು ಒಳಗೊಂಡಿದೆ. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತಯಾರಿಸಿದ ಈ ರೈಲಿನ ಎರಡು ಮೂಲಮಾದರಿ ರೇಕ್‌ಗಳು ಪ್ರಸ್ತುತ ಪರೀಕ್ಷಾ ಹಂತದಲ್ಲಿವೆ.
ಹೊಸ ಸ್ಲೀಪರ್ ವಂದೇ ಭಾರತ್ ರೈಲಿನ ಎಲ್ಲ ವಿಧದ ಪರೀಕ್ಷೆಗಳು ಪೂರ್ಣಗೊಂಡ ನಂತರ ಸಾಮಾನ್ಯ ಪ್ರಯಾಣಿಕರಿಗಾಗಿ ಸೇವೆ ಆರಂಭಿಸಲಾಗುವುದು. ಈ ರೈಲು ದೇಶಾದ್ಯಂತ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಭಾರತೀಯ ರೈಲ್ವೆ ನಿರಂತರ ಅಪ್‌ಗ್ರೇಡ್ ಆಗುವ ಜೊತೆಗೆ ಜನರಿಗೆ ಉತ್ತಮ ಸೇವೆ ನೀಡುತ್ತದೆ ಎಂಬುದನ್ನು ಈ ರೈಲಿನ ಮೂಲಕ ಸಾಬೀತಾಗಲಿದೆ. ಭಾರತೀಯ ರೈಲ್ವೆ ಮಟ್ಟಿಗೆ ಈ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ಮಹತ್ವದ ಹೆಜ್ಜೆಯಾಗಿದೆ.












Click it and Unblock the Notifications