Vande Bharat Express: ವೇಗದ ಪರೀಕ್ಷೆ ಯಶಸ್ವಿ, ಯಾವಾಗ ವಂದೇ ಭಾರತ್ ಸ್ಲೀಪರ್ ಸಂಚಾರ
ಬೆಂಗಳೂರು, ಜನವರಿ 05: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಈಗಾಗಲೇ ಯಶಸ್ವಿಯಾಗಿದೆ. ದೇಶದಲ್ಲಿ 50ಕ್ಕೂ ಅಧಿಕ ಮಾರ್ಗದಲ್ಲಿ ಈ ಮಾದರಿ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ದೀರ್ಘ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಈಗಾಗಲೇ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳನ್ನು ಓಡಿಸಲು ಮುಂದಾಗಿದೆ. 10 ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ ಇದರ ಸಂಚಾರ ಯಾವಾಗ ಆರಂಭ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ವಂದೇ ಭಾರತ್ ಸ್ಲೀಪರ್ ರೈಲಿನ ಮೂಲ ಮಾದರಿಯನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ. ವಿವಿಧ ಮಾದರಿ ಪರೀಕ್ಷೆಗಳ ಬಳಿಕ ಗಂಟೆಗೆ 180 ಕಿ. ಮೀ. ವೇಗದಲ್ಲಿ ರೈಲು ಸಂಚಾರದ ಪ್ರಯೋಗವನ್ನು ನಡೆಸಲಾಗಿದೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

2025ರ ಜನವರಿಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರವನ್ನು ಆರಂಭಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಜನವರಿಯಲ್ಲಿ ರೈಲು ಓಡುವುದಿಲ್ಲ. ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಿ, ಬೋಗಿಯ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ.
ಮೇ ತಿಂಗಳಿನಲ್ಲಿ ಸಂಚಾರ ಆರಂಭ?; ರೈಲ್ವೆ ಸಚಿವಾಲಯದ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ಕೆಲವು ರಾಷ್ಟ್ರೀಯ ಮಾಧ್ಯಮಗಳು ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಮೇ ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ವರದಿ ಮಾಡಿವೆ. ಸದ್ಯ ರೈಲ್ವೆ 200 ವಂದೇ ಭಾರತ್ ಸ್ಲೀಪರ್ ಬೋಗಿ ನಿರ್ಮಾಣದ ಒಪ್ಪಂದ, ತಂತ್ರಜ್ಞಾನವನ್ನು ಟೆಂಡರ್ ಪಡೆದವರಿಗೆ ನೀಡಿದೆ.
ಸದ್ಯ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಆದರೆ ರೈಲು ಸಂಚಾರ ಆರಂಭಗೊಳ್ಳುವ ಮೊದಲು ರೈಲ್ವೆ ಸುರಕ್ಷತಾ ಆಯುಕ್ತರು ಗರಿಷ್ಠ ವೇಗದಲ್ಲಿ ರೈಲು ಓಡಾಟದ ಕುರಿತು ಪರಿಶೀಲನೆ ನಡೆಸಿ, ಅಂತಿಮ ಒಪ್ಪಿಗೆ ನೀಡಬೇಕಿದೆ. ಈ ಪ್ರಕ್ರಿಯೆ ಇನ್ನೂ ಎರಡು ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ರಾಜಧಾನಿ ಮತ್ತು ತತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಿಗೆ ಹೋಲಿಕೆ ಮಾಡಿದರೆ ವಂದೇ ಭಾರತ್ ಸ್ಲೀಪರ್ ಮಾದರಿ ರೈಲು ಪ್ರಯಾಣದ ಅವಧಿಯನ್ನು 2 ರಿಂದ 4 ಗಂಟೆಗಳ ಕಾಲ ಕಡಿಮೆ ಮಾಡುವ ನಿರೀಕ್ಷೆ ಇದೆ. ಈ ರೈಲುಗಳು ಅತ್ಯುನ್ನತ ದರ್ಜೆಯ ಬೋಗಿ ವಿನ್ಯಾಸ, ಪ್ರಯಾಣಿಕರಿಗೆ ಹಿತವಾದ ಅನುಭವ, ಉತ್ತಮವಾದ ಬ್ರೇಕ್ ಸಿಸ್ಟಮ್ ಅನ್ನು ಒಳಗೊಂಡಿವೆ.
ಸದ್ಯ ವಂದೇ ಭಾರತ್ ರೈಲಿನ ಗರಿಷ್ಠ ವೇಗ ಗಂಟೆಗೆ 90 ಕಿ. ಮೀ. ಆಗಿದೆ. ಮುಂಬೈ-ದೆಹಲಿ ನಡುವೆ ಈ ಮಾದರಿ ರೈಲು ಸಂಚಾರ ನಡೆಸುತ್ತಿದೆ. ಇದನ್ನು 140 ಕಿ. ಮೀ. ವೇಗದಲ್ಲಿಯೂ ಓಡಿಸಬಹುದಾಗಿದೆ. ತೇಜಸ್ ಮಾದರಿ ರೈಲುಗಳು ಇದಾಗಿವೆ. ಆದರೆ ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 180 ಕಿ. ಮೀ. ವೇಗದಲ್ಲಿ ಸಾಗುವಂತೆ ತಂತ್ರಜ್ಞಾನ ಅಭಿವೃದ್ಧಿಗೊಳಿಸಲಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲುಗಳ ಸಂಚಾರದಿಂದ ರೈಲ್ವೆ ಇಲಾಖೆಗೆ ಸಹ ಅಧಿಕ ಆದಾಯ ನಿರೀಕ್ಷೆ ಮಾಡಲಾಗಿದೆ. ಕಡಿಮೆ ಸೀಟುಗಳಿಗೆ ಹೆಚ್ಚಿನ ದರಗಳು ಇರುತ್ತವೆ. ವೇಗವಾಗಿ ಪ್ರಯಾಣ ಮಾಡುವುದರಿಂದ ಹೆಚ್ಚಿನ ಜನರು ಈ ಮಾದರಿ ರೈಲುಗಳನ್ನು ಪ್ರಯಾಣಿಸುವ ನಿರೀಕ್ಷೆ ಇದೆ. ಆದ್ದರಿಂದ ಸೀಟುಗಳು ಭರ್ತಿಯಾಗಲಿವೆ.
ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಾತನಾಡಿದ್ದ ಅಶ್ವಿನಿ ವೈಷ್ಣವ್, "10 ವಂದೇ ಭಾರತ್ ಸ್ಲೀಪರ್ ರೈಲುಗಳು ನಿರ್ಮಾಣ ಹಂತದಲ್ಲಿವೆ. 200 ವಂದೇ ಭಾರತ್ ಸ್ಲೀಪರ್ ರೇಕ್‌ಗಳ ತಯಾರಿಕೆ ತಂತ್ರಜ್ಞಾನ ಪಾಲುದಾರರಿಗೆ ಹಸ್ತಾಂತರಿಸಲಾಗಿದೆ" ಎಂದು ಹೇಳಿದ್ದರು.












Click it and Unblock the Notifications