Vande Bharat Express: ಪ್ರವಾಸಿಗರಿಗೆ ಸಿಹಿಸುದ್ದಿ, ಶ್ರೀನಗರಕ್ಕೆ ವಂದೇ ಭಾರತ್ ರೈಲು, ವೇಳಾಪಟ್ಟಿ
ಶ್ರೀನಗರ, ಜನವರಿ 01: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಪ್ರಮುಖವಾಗಿ ಪ್ರವಾಸಿಗರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ವಂದೇ ಭಾರತ್ ರೈಲು ಸಂಚಾರವನ್ನು ಶ್ರೀನಗರಕ್ಕೆ ಆರಂಭಿಸಲಾಗುತ್ತಿದೆ. ಈ ರೈಲಿನ ವೇಳಾಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ.
ಉತ್ತರ ರೈಲ್ವೆ ಶ್ರೀನಗರಕ್ಕೆ ಐತಿಹಾಸಿಕವಾಗಿ ವಂದೇ ಭಾರತ್, ಮಧ್ಯಾಹ್ನ ಮತ್ತು ಸಂಜೆಯ ಮೇಲ್ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಆರಂಭಿಸಲಿದೆ. ಸದ್ಯದ ಮಾಹಿತಿ ಪ್ರಕಾರ ಜನವರಿ 6ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲು ಸೇವೆಗಳಿಗೆ ಚಾಲನೆ ನೀಡಲಿದ್ದಾರೆ.

ಶ್ರೀನಗರಕ್ಕೆ ನೇರ ರೈಲು ಸೇವೆ ಬೇಕು ಎಂಬ ದಶಕಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ. ಜಮ್ಮಿವಿನ ಕಾತ್ರಾ ಮತ್ತು ಶ್ರೀನಗರ ನಡುವೆ ಈ ರೈಲು ಸೇವೆ ಆರಂಭವಾಗುತ್ತಿದೆ. ಇದರಿಂದಾಗಿ ಉಭಯ ನಗರಗಳ ಸಂಚಾರ ನಡೆಸುವ ಪ್ರವಾಸಿಗರು, ಜನರಿಗೆ ಅನುಕೂಲವಾಗಲಿದೆ.
ರೈಲುಗಳ ವೇಳಾಪಟ್ಟಿ: ಕಾತ್ರಾ-ಶ್ರೀನಗರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್, ಮೇಲ್ ಎಕ್ಸ್‌ಪ್ರೆಸ್ ರೈಲು ಸೇವೆಗಳು ಆರಂಭವಾಗುತ್ತಿದೆ. ಉತ್ತರ ರೈಲ್ವೆ ಮಾಹಿತಿ ಪ್ರಕಾರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾತ್ರಾದಿಂದ ಬೆಳಗ್ಗೆ 8.10ಕ್ಕೆ ಹೊರಡಲಿದೆ, 11.20ಕ್ಕೆ ಶ್ರೀನಗರವನ್ನು ತಲುಪಲಿದೆ.
ಬೆಳಗ್ಗಿನ ಮೇಲ್ ಎಕ್ಸ್‌ಪ್ರೆಸ್ ರೈಲು ಕಾತ್ರಾದಿಂದ 9.50ಕ್ಕೆ ಹೊರಟು ಮಧ್ಯಾಹ್ನ 1.10ಕ್ಕೆ ಶ್ರೀನಗರ ತಲುಪಲಿದೆ. ಮಧ್ಯಾಹ್ನದ ಮೇಲ್ ಎಕ್ಸ್‌ಪ್ರೆಸ್ ರೈಲು ಕಾತ್ರಾದಿಂದ 3 ಗಂಟೆಗೆ ಹೊರಡಲಿದ್ದು, ಸಂಜೆ 6.20ಕ್ಕೆ ಶ್ರೀನಗರ ತಲುಪಲಿದೆ.
ಸದ್ಯದ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಜನವರಿ 6ರಂದು ಈ ರೈಲು ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಆದರೆ ರೈಲುಗಳ ಸಂಚಾರ ಜನವರಿ 26ರ ಗಣರಾಜ್ಯೋತ್ಸವದ ದಿನ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ. ಈ ರೈಲುಗಳು ಕಣಿವೆ ರಾಜ್ಯ ಕಾಶ್ಮೀರದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಕಾತ್ರಾ ಮತ್ತು ಶ್ರೀನಗರ ನಡುವಿನ ವಂದೇ ಭಾರತ್ ಮತ್ತು ಮೇಲ್ ಎಕ್ಸ್‌ಪ್ರೆಸ್ ರೈಲು ಸೇವೆ ವೈಷ್ಣೋದೇವಿ ದರ್ಶನಕ್ಕೆ ತೆರಳುವ ಲಕ್ಷಾಂತರ ಭಕ್ತರಿಗೆ ಸಹ ಅನುಕೂಲವಾಗಲಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಕಾತ್ರಾ-ಶ್ರೀನಗರ ನಡುವಿನ ವಂದೇ ಭಾರತ್ ರೈಲಿನ ಬೋಗಿಯನ್ನು ತಯಾರು ಮಾಡಲಾಗಿದೆ.
100 ಕಿ. ಮೀ. ದೂರವನ್ನು ಈ ರೈಲು 2.30 ಗಂಟೆಯಲ್ಲಿ ಸಂಚಾರ ನಡೆಸಲಿದೆ. ಸದ್ಯ ಎರಡು ರಾಜಧಾನಿಗಳ ನಡುವೆ ಈ ಮಾದರಿಯ ಯಾವುದೇ ರೈಲು ಸೇವೆ ಇಲ್ಲ. ಈ ರೈಲು ಮೂಲಕ ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿಯೇ ದಾಖಲಾಗುವ ರೈಲು ಸೇವೆ ಆರಂಭವಾಗುತ್ತಿದೆ.
ಕಾತ್ರಾ ಮತ್ತು ಶ್ರೀನಗರ ನಡುವಿನ ವಂದೇ ಭಾರತ್ ರೈಲು ದರವನ್ನು ಇನ್ನೂ ನಿಗದಿ ಮಾಡಿಲ್ಲ. ಸದ್ಯದ ಮಾಹಿತಿ ಪ್ರಕಾರ 1500 ರಿಂದ 1600 ರೂ. ದರ ಇರಲಿದೆ ಎಂದು ಅಂದಾಜಿಸಲಾಗಿದೆ. 8 ಅಥವ 16 ಬೋಗಿಯ ರೈಲನ್ನು ಓಡಿಸಲು ತೀರ್ಮಾನಿಸಲಾಗಿದೆ. ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ ಮಾದರಿಯ ಎರಡು ಬಗೆಯ ಆಸನ ವ್ಯವಸ್ಥೆಯನ್ನು ರೈಲು ಹೊಂದಿರಲಿದ್ದು, ವಾರದಲ್ಲಿ ರೈಲು 6 ದಿನ ಸಂಚಾರ ನಡೆಸಲಿದೆ.
ಈ ಮಾರ್ಗದಲ್ಲಿ ಚಲಿಸುವ ರೈಲಿನ ವಿನ್ಯಾಸವನ್ನು ವಿಶೇಷವಾಗಿ ತಯಾರು ಮಾಡಲಾಗಿದೆ. ಅದರಲ್ಲೂ ಏರಿಳಿತವಾಗುವ ಶ್ರೀನಗರದ ಹವಾಮಾನ, ಉಷ್ಣಾಂಶವನ್ನು ಗಮನದಲ್ಲಿಟ್ಟುಕೊಂಡು ಬೋಗಿ ಅಭಿವೃದ್ಧಿಗೊಳಿಸಲಾಗಿದೆ.












Click it and Unblock the Notifications