Vande Bharat Express: ವಂದೇ ಭಾರತ್ ರೈಲು ಸುರಕ್ಷಿತವಲ್ಲ! ರೈಲ್ವೆ ಆಯುಕ್ತರ ವರದಿ
ಬೆಂಗಳೂರು, ಏಪ್ರಿಲ್ 22: ಭಾರತದ 'ಮೇಕ್ ಇನ್ ಇಂಡಿಯಾ' ಉಪಕ್ರಮದ ಭಾಗವಾಗಿ 2019ರ ಆರಂಭದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ನಿರ್ವಹಿಸಲ್ಪಡುತ್ತದೆ. ಹೆಚ್ಚು ದೂರದ ಸ್ಥಳಗಳಿಗೆ ಕಡಿಮೆ ಅವಧಿಯಲ್ಲಿ ತಲುಪಲು ಈ ವಂದೇ ಭಾರತ್ ರೈಲು ಹೆಚ್ಚು ಸಹಕಾರಿಯಾಗಿದೆ. ಪ್ರಯಾಣಿಕರ ಅಚ್ಚುಮೆಚ್ಚಿನ ಹಾಗೂ ವಿವಿಧ ರೈಲುಗಳ ಪೈಕಿ ಹೆಚ್ಚಿನ ಮನ್ನಣೆ ಪಡೆದ ಈ ರೈಲು ಸುರಕ್ಷಿತವಲ್ಲ. ಅಸುರಕ್ಷಿತ ಎಂದು ವರದಿಯೊಂದು ತಿಳಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕುರಿತು 'ರೈಲ್ವೆ ಸುರಕ್ಷತಾ ಆಯುಕ್ತರ' ವರದಿಯೊಂದು ಬಿಡುಗಡೆ ಆಗಿದೆ. ವಂದೇ ಭಾರತ್ ರೈಲುಗಳು ಸುರಕ್ಷತಾ ಕೊರತೆಗಳನ್ನು ಎದುರಿಸುತ್ತಿವೆ. ವೇಗದ ರೈಲಾಗಿದ್ದರೂ ಸಹಿತ ಅದರ ಮುಂದಿನ ಎಂಜಿನ್ ಭಾರ ಕಡಿಮೆ ಇದೆ. ಇದರಿಂದಾಗಿ ಹಸುಗಳು ಎದುರಾದರೂ ಸಹಿತ ಸಾಕಷ್ಟು ಸಮಸ್ಯೆ ಎದುರಾಗಬಹುದು. ಹಸುಗಳ ಗುದ್ದಿದರೆ ಎಂಜಿನ್ ಭಾಗ ನುಜ್ಜುಗುಜ್ಜಾಗಿದೆ. ಇಂತಹ ಸಣ್ಣ ಅಡೆತಡೆಗಳಿಂದ ಹಳಿ ತಪ್ಪುವುದು ಸೇರಿದಂತೆ ಭಾರೀ ಅನಾಹುತವಾಗುವ ಸಾಧ್ಯತೆ ಇರುತ್ತದೆ.

ದೊಡ್ಡ ಪ್ರಮಾಣದ ಹಾನಿ ಸಾಧ್ಯತೆ
ವಂದೇ ಭಾರತ್ ರೈಲಿನ ವೇಗ ಪ್ರತಿ ಗಂಟೆಗೆ 160 ಕಿಲೋ ಮೀಟರ್ ಇರುತ್ತದೆ. ಸದ್ಯ ಭಾರತ ರೈಲ್ವೆ ಮೂಲಸೌಕರ್ಯಕ್ಕೆ ಅನುಗುಣವಾಗಿ ಪ್ರತಿ ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಓಡಿಸಲಾಗುತ್ತದೆ. ಈ ವೇಳೆ ಮಾರ್ಗದಲ್ಲಿ ಏನಾದರೆ ಸಣ್ಣ ಪುಟ್ಟ ಅಡೆತಡೆ ಉಂಟಾದರೂ ಹಾನಿ ಪ್ರಯಾಣ ದೊಡ್ಡದಾಗಿರುತ್ತದೆ. ಆದ್ದರಿಂದ ಈ ರೈಲು ಅಸುರಕ್ಷತೆ ಸಮಸ್ಯೆ ಎದುರಿಸುತ್ತಿದೆ ಎಂದು ರೈಲ್ವೆ ಸುರಕ್ಷತಾ ಆಯುಕ್ತರ ವರದಿ ತಿಳಿಸಿದೆ.
ರೈಲ್ವೆ ಇಲಾಖೆಯಿಂದ ಮಹತ್ವದ ಸೂಚನೆ
ಹೀಗೆ ಯಾವುದೇ ಸಮಸ್ಯೆ, ಹಾನಿ ಆಗದಂತೆ ರೈಲ್ವೆ ಇಲಾಖೆಯು ಹೆಚ್ಚು ವೇಗದಲ್ಲಿ ಚಲಿಸುವ ವಂದೇ ಭಾರತ್ ರೈಲಿಗೆ ಅನುಕೂಲವಾಗುವಂತೆ ರೈಲ್ವೆ ಗೇಟ್, ಬೇಲಿ ಬದಲಾಗಿ ಬ್ರಿಡ್ಜ್‌ಗಳನ್ನು ನಿರ್ಮಿಸುವಂತೆ ತಿಳಿಸಿದೆ. ಇದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆಯು ನಿರ್ದೇಶಿಸಿದೆ. ಈ ಮೂಲಕ ಸಂಭವನೀಯ ಯಾವುದೇ ಅಪಾಯ ಎದುರಾಗದಂತೆ ರೈಲ್ವೆ ಇಲಾಖೆ ಕ್ರಮವಹಿಸಲು ಮುಂದಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುವಾಗ ಮಾರ್ಗದಲ್ಲಿ ಹಸು ಡಿಕ್ಕಿಯಾದರೂ ಹಳಿ ತಪ್ಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಿಪಿಎಂ ಮುಖಂಡ ಸಂಸದ ಸು.ವೆಂಕಟೇಶ್ವರ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ವರದಿಯ ಅಂಶ ನಿರಾಕರಿಸಿದ ದಕ್ಷಿಣ ರೈಲ್ವೆ ಹೇಳಿದ್ದೇನು?
ಭಾರತೀಯ ದಕ್ಷಿಣ ರೈಲ್ವೆಯು ಈ ರೈಲ್ವೆ ಸುರಕ್ಷತಾ ಆಯುಕ್ತರು ವಂದೇ ಭಾರತ್ ರೈಲಿನ ಕುರಿತು ನೀಡಿರುವ ವರದಿಯನ್ನು ತಳ್ಳಿ ಹಾಕಿದೆ. ಈ ಅಂಶಗಳನ್ನು ಒಪ್ಪದ ದಕ್ಷಿಣ ರೈಲ್ವೆ ವಂದೇ ಭಾರತ್ ಸುರಕ್ಷಿತವಾಗಿದೆ. ಯಾವುದೇ ಸುರಕ್ಷತೆಯ ಕೊರತೆ ಎದುರಿಸುತ್ತಿಲ್ಲ. ವಂದೇ ಭಾರತ್ ಎಲ್ಲ ರೀತಿಯ ಭದ್ರತಾ ಸುರಕ್ಷತೆಗಳನ್ನು ಒಳಗೊಂಡಿದೆ ಎಂದು ಹೇಳಿದೆ.
ರೈಲ್ವೆ ಇಂಜಿನ್‌ಗೆ ಅತ್ಯಾಧುನಿಕ ಬ್ರೇಕ್ ಸಿಸ್ಟಂ 'ಕವಚ' ತಂತ್ರಜ್ಞಾನ ಅಳವಡಿಸಲಾಗಿದೆ. ಈ 'ವಿಬಿ' ರೈಲುಗಳಿಗೆ ಯಾವುದೇ ರೀತಿಯ ಇಂಜಿನ್ ಇರುವುದಿಲ್ಲ. ಹೀಗಾಗಿ ರೈಲು ಸಂಪುರ್ಣವಾಗಿ ಒಂದೇ ಭಾರ ಇರುತ್ತದೆ. ದೇಶದಲ್ಲಿ ಮಾತ್ರವದಲ್ಲದೇ ಬೇರೆಲ್ಲ ದೇಶಗಳಲ್ಲಿ ಈ ರೈಲುಗಳು ಸಂಚರಿಸುತ್ತಿದ್ದ ಅಲ್ಲಿ ಸಹ ಇದೆ ತೆರನಾಗಿರಲಿವೆ. ಭಾರತದಲ್ಲಿ ಮೆಮು, ಡೆಮು ರೈಲುಗಳು ಹೀಗೆ ಇವೆ.
ವಂದೇ ಭಾರತ್ ರೈಲಿಗೆ ಮುಂದಿನ ಭಾಗದಲ್ಲಿ ಹಸು, ಪ್ರಾಣಿಕಗಳು ಡಿಕ್ಕಿ ಹೊಡೆದರೆ ಶಕ್ತಿ ಹೀರಿಕೊಳ್ಳುವಷ್ಟು ಸಾಮರ್ಥ್ಯ ಉತ್ತಮ ತಂತ್ರಜ್ಞಾನ ಹೊಂದಿದೆ ಎಂದು ದಕ್ಷಿಣ ರೈಲ್ವೆ ಮಾತ್ರವಲ್ಲದೇ ವಂದೇ ಭಾರತ್ ತಯಾರಿಸಿಕೊಡುವ ಚೆನ್ನೈ ಕೋಚ್ ಫ್ಯಾಕ್ಟರಿ ಮುಖ್ಯಸ್ಥರು ಸಹ ಸ್ಪಷ್ಟಪಡಿಸಿದ್ದಾರೆ.
ವಂದೇ ಭಾರತ್ ರೈಲಿನ ಕುರಿತು...
ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಮಧ್ಯಮ ವರ್ಗದ ಜನರಿಗೂ ಐಶಾರಾಮಿ ರೈಲು ಸೇವೆ ಸಿಗುವಂತೆ ಮಾಡಲು, ದೂರದ ಊರುಗಳನ್ನು ಕಡಿಮೆ ಸಮಸ್ಯದಲ್ಲಿ ತಲುಪುವಂತೆ ಮಾಡಲು 2019ರ ಫೆಬ್ರವರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಾಯಿತು. ಅಲ್ಲಿಂದ ಈವರೆಗೆ ದೇಶದಲ್ಲಿ ಒಟ್ಟು 136 ವಂದೇ ಭಾರತ್ ರೈಲುಗಳನ್ನು ಭಾರತೀಯ ರೈಲ್ವೆ ಇಲಾಖೆ ನಿರ್ವಹಿಸುತ್ತಿದೆ. ದೇಶದ ನಾನಾ ಭಾಗಗಳಲ್ಲಿ ಈ ರೈಲು ಜನಮನ್ನಣೆ ಪಡೆದಿದೆ. ಈ ವೇಳೆ ಈ ರೈಲು ಸುರಕ್ಷಿತವಲ್ಲ ಎಂಬ ವರದಿ ಅಂಶವನ್ನು ಪ್ರಯಾಣಿಕರು ಗಂಭೀರವಾಗಿ ಪರಿಗಣಿಸುವ ನಿರೀಕ್ಷೆ ಇದೆ.
800 ಕಿಲೋ ಮೀಟರ್‌ಗಿಂತಲೂ ಕಡಿಮೆ ಅಂತರವಿರುವ ಪ್ರಯಾಣವನ್ನು ಈ ರೈಲು ಕೇವಲ 120 ಗಂಟೆಗಳಲ್ಲಿ ಕ್ರಮಿಸಲಿದೆ. ಇತರ ರೈಲುಗಳಿಗಿಂತಲೂ ಈ ರೈಲುಗಳಿಗೆ ನಿಲುಗಡೆಗಳು ಕಡಿಮೆ ಇರಲಿವೆ. ಪ್ರಮುಖ ನಗರಗಳ ಹೊರತಾಗಿ ಎಲ್ಲೆಂದರಲ್ಲಿ ನಿಲ್ಲವುದಿಲ್ಲ. ಸದ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ವಂದೇ ಭಾರತ್ ರೈಲುಗಳನ್ನು ಕಾರ್ಯಾಚರಣೆಗೆ ಇಳಿಸಲು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ ಪ್ಲಾನ್ ಮಾಡಿಕೊಂಡಿದೆ.
ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಯಾವಾಗ?
ಈ ಮಧ್ಯೆ ವಂದೇ ಭಾರತ್ ಸ್ಲೀಪರ್ ರೈಲು ಸಹ ಕಾರ್ಯಾಚರಣೆಗೆ ಇಳಿಯಲಿವೆ ಎಂದು ಹೇಳಲಾಗಿತ್ತು. ಈಗಾಗಲೇ ಅವುಗಳ ಪ್ರಾಯೋಗಿಕ ತಪಾಸಣೆ, ಸುರಕ್ಷತೆ ಪರಿಶೀಲನೆ ಪೂರ್ಣಗೊಂಡಿದೆ. ಕಳೆದ ವರ್ಷ ಡಿಸೆಂಬರ್ ಹೊತ್ತಿಗೆ ಈ ಸ್ಲೀಪರ್ ರೈಲು ಸೇವೆ ಇಳಿಯಬಹುದು ಎನ್ನಲಾಗಿತ್ತು. ಆದರೆ ಆಗಲಿಲ್ಲ. ನಂತರ ಈ ವರ್ಷ ಫೆಬ್ರವರಿಯಲ್ಲಿ ಸ್ಲೀಪರ್ ರೈಲು ಕಾರ್ಯಾಚರಣೆ ಆರಂಭಿಸಬಹುದು ಎನ್ನಲಾಗಿತ್ತು. ಆದರೆ ಕೆಲವು ಕಾರಣಾಂತರಗಳಿಂದ ರೈಲ್ವೆ ಇಲಾಖೆಯ ಮಹತ್ವದ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಲಭ್ಯವಾಗಿಲ್ಲ. ಶೀಗ್ರವೇ ಈ ರೈಲು ವಾಣಿಜ್ಯ ಸೇವೆ ಆರಂಭಿಸಲಿದೆ.
ಇದೆಲ್ಲದರ ನಡುವೆ ಭಾರತೀಯ ರೈಲ್ವೆಯು ರೈಲ್ವೆ ಹಳಿ ಸುಧಾರಣೆ, ದ್ವಿಪಥ ನಿರ್ಮಾಣ, ಹೊಸ ಮಾರ್ಗಗಳ ನಿರ್ಮಾಣದ ಜೊತೆಗೆ, ರೈಲ್ವೆ ಮಾರ್ಗ ಸಂಪೂರ್ಣ ವಿದ್ಯುದೀಕರಣ ಮಾಡಲಾಗುತ್ತಿದೆ. ಕರ್ನಾಟಕದ ಮಟ್ಟಿಗೆ ವಿದ್ಯುದೀಕರಣ ಕಾರ್ಯ ಶೇಕಡಾ 85ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಹೊಸ ರೈಲ್ವೆ ಯೋಜನೆಗಳು ರಾಜ್ಯದಲ್ಲಿ ಸಕ್ರಿಯವಾಗಿವೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ..












Click it and Unblock the Notifications