ಉತ್ತರಪ್ರದೇಶ LIVE : ಮೋದಿಗೆ ಜೈ, ರಾಹುಲ್ ಗಾಂಧಿಗೆ ಗುಡ್ ಬೈ
ಉತ್ತರಪ್ರದೇಶದಲ್ಲಿ ಮೋದಿಯವರ ಅಭಿವೃದ್ಧಿ ಮಂತ್ರ ಮೇಲಾಗುವುದೋ, ಅಖಿಲೇಶ್ ಮತ್ತಿತರರ ಜಾತಿ ಲೆಕ್ಕಾಚಾರ ಮೇಲಾಗುವುದೋ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಕ್ಷಣಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.
ಲಕ್ನೋ, ಮಾರ್ಚ್ 11 : ಅಖಿಲೇಶ್ ಯಾದವ್ ಮತ್ತೆ ಮುಕುಟ ಧರಿಸುವರೆ? ರಾಹುಲ್ ಗೆಲುವಿನ ನಗೆ ಬೀರುವರೆ? ಎಸ್ಪಿ ಮತ್ತು ಕಾಂಗ್ರೆಸ್ ಕನಸನ್ನು ಬಿಜೆಪಿ ನುಚ್ಚುನೂರು ಮಾಡುವುದೆ? ಅಥವಾ ಮಾಯಾವತಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡವರೆ?
ಭಾರತದ ಭವಿಷ್ಯದ ರಾಜಕೀಯದ ದಿಕ್ಸೂಚಿಯಾಗಲಿರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ಪಕ್ಷಗಳು ತಿನ್ನಲು ಸಿಹಿಯನ್ನು, ಹಾರಿಸಲು ಪಟಾಕಿಯನ್ನು ರೆಡಿ ಮಾಡಿಕೊಂಡು ಕುಳಿತಿವೆ.[ಮಣಿಪುರ | ಪಂಜಾಬ್ | ಗೋವಾ | ಉತ್ತರಾಖಂಡ್]
ಆದರೆ, ಆ ಮ್ಯಾಜಿಕಲ್ ನಂಬರ್ ಯಾರ ಪಾಲಾಗಲಿದೆ? 403 ಸ್ಥಾನಗಳಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲು 202 ಸ್ಥಾನಗಳ ಅಗತ್ಯವಿದೆ. ಮೋದಿಯವರ ಅಭಿವೃದ್ಧಿ ಮಂತ್ರ ಮೇಲಾಗುವುದೋ, ಅಖಿಲೇಶ್ ಮತ್ತಿತರರ ಜಾತಿ ಲೆಕ್ಕಾಚಾರ ಮೇಲಾಗುವುದೋ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. [ಚುನಾವಣೋತ್ತರ ಸಮೀಕ್ಷೆ : ಉತ್ತರಪ್ರದೇಶದಲ್ಲಿ ಬಿಜೆಪಿ ಹೋಳಿಯ ರಂಗು]
75 ಜಿಲ್ಲೆಗಳಲ್ಲಿ 78 ಮತಕೇಂದ್ರಗಳಲ್ಲಿ ಸರಿಯಾಗಿ 8 ಗಂಟೆಗೆ ಎಣಿಕೆ ಆರಂಭವಾಗಲಿದೆ. ಮುಖ್ಯ ಚುನಾವಣಾಧಿಕಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮತಎಣಿಕೆ ಪ್ರಕ್ರಿಯೆಯನ್ನು ವೀಕ್ಷಿಸಲಿದ್ದಾರೆ. ಯಾವುದೇ ಅವಘಡ ನಡೆಯದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕ್ಷಣಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.

9.50 : ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ನಿಜವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಬಿಜೆಪಿ 285 ಕ್ಷೇತ್ರಗಳಲ್ಲಿ ಗೆಲ್ಲುತ್ತದೆಂದು ಚಾಣಕ್ಯ ಹೇಳಿತ್ತು. ಇದೀಗ ಬಿಜೆಪಿ 274 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, ಕ್ಲೀನ್ ಸ್ವೀಪ್ ಮಾಡುವುದು ನಿಚ್ಚಳವಾಗಿದೆ.[ಗ್ಯಾಲರಿ :ಉತ್ತರಪ್ರದೇಶದಲ್ಲಿ ಕೇಸರಿ ರಂಗು, ಜಯದತ್ತ ಬಿಜೆಪಿ]
9.15 : ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಭಾರೀ ಮುಖಭಂಗ ಅನುಭವಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. 261ರಲ್ಲಿ 162 ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿದ್ದು, ಎಸ್ಪಿ ಕಾಂಗ್ರೆಸ್ 58, ಬಿಎಸ್ಪಿ 38 ಕ್ಷೇತ್ರಗಳಲ್ಲಿ ಮಾತ್ರ ಮುಂದಿವೆ.
9.00 : ಅತ್ಯಾಚಾರ ಆರೋಪ ಎದುರಿಸಿ ತಲೆಮರೆಸಿಕೊಂಡಿರುವ ಎಸ್ಪಿಯ ಗಾಯತ್ರಿ ಪ್ರಜಾಪತಿ ಅಮೇಥಿ ಕ್ಷೇತ್ರದಲ್ಲಿ ಮುನ್ನಡೆ.
8.56 : ಮುಲಾಯಂ ಸಿಂಗ್ ಅವರ ಸೊಸೆ ಅಪರ್ಣಾ ಯಾದವ್ ಅವರು ಲಕ್ನೋ ಕ್ಯಾಂಟೊನ್ಮೆಂಟ್ ನಲ್ಲಿ ಹಿಂದೆ ಬಿದ್ದಿದ್ದಾರೆ.
8.55 : ಮೋದಿಯ ಸುನಾಮಿಯ ಹೊಡೆತಕ್ಕೆ ಸೈಕಲ್ ವೇಗ ತಗ್ಗುತ್ತಿದೆ. ಆನೆ ಕೂಡ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ.
8.45 : 60 ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಶೇ.50ರಷ್ಟು ಹಿಂದಿದೆ.
8.30 : ಬಿಜೆಪಿ 22, ಎಸ್ಪಿ ಕಾಂಗ್ರೆಸ್ 16, ಬಿಎಸ್ಪಿ 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
8.22 : ಕುಂಡಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ರಾಜಾ ಭೈಯಾ, ಮವೂ ಕ್ಷೇತ್ರದಲ್ಲಿ ಬಿಎಸ್ಪಿಯ ಮುಕ್ತಾರ್ ಅನ್ಸಾರಿ ಮುನ್ನಡೆ ಸಾಧಿಸಿದ್ದಾರೆ.
8.15 : ಮುಬಾರಕ್ ಪುರದಲ್ಲಿ ಅಖಿಲೇಶ್ ಯಾದವ್ ಮನ್ನಡೆ. ಬಿಜೆಪಿ 4, ಎಸ್ಪಿ ಕಾಂಗ್ರೆಸ್ 3, ಬಿಎಸ್ಪಿ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಬೆಳಿಗ್ಗೆ 8 : ಸರಿಯಾಗಿ 8 ಗಂಟೆಗೆ ಮತಎಣಿಕೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ಆರಂಭವಾಗಲಿದೆ.
ಸಿವೋಟರ್, ನ್ಯೂಸ್ 18 ಮತ್ತು ಎಂಆರ್‌ಸಿ, ಟೈಮ್ಸ್ ನೌ ವಿಎಂಆರ್, ಎಬಿಪಿ ಸಿಎಸ್‌ಡಿಎಸ್, ಇಂಡಿಯಾ ಟುಡೇ-ಮೈ ಆಕ್ಸಿಸ್ ಮತ್ತು ಚಾಣಕ್ಯ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಿಂದ ಬಿಜೆಗೆ ಹೆಚ್ಚು ಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.
ಆದರೆ, ಈ ವರದಿಗಳನ್ನು ರಾಹುಲ್ ಗಾಂಧಿ ಅವರು ಹರಿದುಹಾಕಿ ಕಸದಬುಟ್ಟಿಗೆ ಎಸೆದಿದ್ದಾರೆ. ಬಿಹಾರದಲ್ಲಿ ಏನಾಯ್ತು ಅಂತ ನಿಮಗೆ ನೆನಪಿಲ್ಲವೆ? ಎಂದು ಮರುಪ್ರಶ್ನೆ ಎಸೆದಿದ್ದಾರೆ. ಕಾದುನೋಡಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟ ಬಹುಮತ ಗಳಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಬಿಹಾರದಲ್ಲಿ ಕೂಡ ಸಮೀಕ್ಷೆ ಸುಳ್ಳಾಗಿತ್ತು : ರಾಹುಲ್ ಗಾಂಧಿ]












Click it and Unblock the Notifications