ಲಕ್ನೋ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಅಗ್ನಿ ದುರಂತ: ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಯುವಕ
ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಟ್ಟಡ ಧಗಧಗನೆ ಹೊತ್ತಿ ಉರಿದಿದೆ. ಕಟ್ಟಡದಲ್ಲಿದ್ದ ಕೋಚಿಂಗ್ ಸೆಂಟರ್‌ನಿಂದ ಬೆಂಕಿ ವ್ಯಾಪಿಸಿದೆ ಎಂದು ತಿಳಿದುಬಂದಿದ್ದು, ಈ ವೇಳೆ ಹಲವಾರು ಜನರು ಒಳಗೆ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ ಈ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
14 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ
ಅಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಉಷಾ ಮೆಹ್ತಾ ಮಾರ್ಗದಲ್ಲಿರುವ ಕಟ್ಟಡದಲ್ಲಿ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಈ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ವಾಹನ ಸೇರಿದಂತೆ ಒಟ್ಟು 14 ಅಗ್ನಿಶಾಮಕ ಟೆಂಡರ್‌ಗಳನ್ನು ಬಳಸಿ ಬೆಂಕಿಯನ್ನು ಹತೋಟಿಗೆ ತರಲು ಶ್ರಮಿಸಲಾಯಿತು.

ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವ್ಯಕ್ತಿ
ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿ ಅಮನ್ ಎಂಬುವವರು ಮಾಧ್ಯಮಗಳೊಂದಿಗೆ ಮಾತನಾಡಿ, "ಈ ಕಟ್ಟಡದಲ್ಲಿ ಲೈಬ್ರರಿ, ಕಂಪ್ಯೂಟರ್ ಕೋರ್ಸ್ ಸಂಸ್ಥೆ ಇತ್ತು. ನಾವು ಸ್ಥಳಕ್ಕೆ ಬಂದಾಗ ಇಡೀ ಕಟ್ಟಡದಿಂದ ದಟ್ಟವಾದ ಹೊಗೆ ಹೊರಬರುತ್ತಿತ್ತು. ನಾವು ತಕ್ಷಣ ಕಾರ್ಯಪ್ರವೃತ್ತರಾಗಿ ಐದಾರು ಜನರನ್ನು ಸುರಕ್ಷಿತವಾಗಿ ರಕ್ಷಿಸಿದೆವು. ಈ ನಡುವೆ ಬೆಂಕಿ ತೀವ್ರವಾಗಿ ವ್ಯಾಪಿಸಿದ್ದರಿಂದ ಭಯಭೀತನಾದ ವ್ಯಕ್ತಿಯೊಬ್ಬ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಧುಮುಕಿದ" ಎಂದು ವಿವರಿಸಿದ್ದಾರೆ.
A massive fire broke out at #LearningSpaceLibrary in Aliganj #Lucknow. Students trapped on 2nd floor jumped from building to save life. More than a dozen students were inside; some escaped while others remained trapped.pic.twitter.com/xUdbNcXGdN
— Dinesh Suthar (@Dineshsuthar88) June 22, 2026
ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಠಿಣ ಪರಿಶ್ರಮದ ನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಪೊಲೀಸರು ನಂತರ ತಿಳಿಸಿದ್ದಾರೆ. ಸದ್ಯ ಘಟನೆಯಲ್ಲಿ ಸಂಭವಿಸಿರುವ ಆಸ್ತಿಪಾಸ್ತಿ ನಷ್ಟದ ಅಂದಾಜು ಮಾಡಲಾಗುತ್ತಿದ್ದು, ಬೆಂಕಿ ತಗುಲಲು ನಿಖರ ಕಾರಣವೇನು ಎಂಬ ಬಗ್ಗೆ ತನಿಖೆಯೂ ಮುಂದುವರಿದಿದೆ.
ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿದ್ದ 'ಲರ್ನಿಂಗ್ ಸ್ಪೇಸ್ ಲೈಬ್ರರಿ' ಮತ್ತು ಕೋಚಿಂಗ್ ಸೆಂಟರ್‌ನಲ್ಲಿ ಈ ದಾರುಣ ಘಟನೆ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ದಟ್ಟ ಹೊಗೆ ಆವರಿಸಿದ್ದರಿಂದ, ಎರಡನೇ ಮಹಡಿಯಲ್ಲಿದ್ದ ವಿದ್ಯಾರ್ಥಿಗಳು ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಧುಮುಕಿದ್ದಾರೆ. ಘಟನೆ ಸಂಭವಿಸಿದ ಸಮಯದಲ್ಲಿ ಲೈಬ್ರರಿ ಮತ್ತು ಕೋಚಿಂಗ್ ಸೆಂಟರ್ ಒಳಗಡೆ ಹನ್ನೆರಡಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಕೆಲವರು ಹೇಗೋ ಮಾಡಿ ಹೊರಗೆ ಓಡಿ ಬಂದು ಪಾರಾಗಿದ್ದಾರೆ. ಆದರೆ, ಇನ್ನು ಕೆಲವು ವಿದ್ಯಾರ್ಥಿಗಳು ಒಳಗೆ ಸಿಲುಕಿಕೊಂಡಿದ್ದರಿಂದ ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 2ನೇ ಮಹಡಿಯ ಕಿಟಕಿಯಿಂದ ಯುವಕನೊಬ್ಬ ಕೆಳಗೆ ಜಿಗಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.













Click it and Unblock the Notifications