ಇಶಾ ಫೌಂಡೇಶನ್ ಒಡೆತನದ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ; ದಂಪತಿಗಳಿಂದ ಗಂಭೀರ ಆರೋಪ
ಇಶಾ ಫೌಂಡೇಶನ್ ವಿರುದ್ಧದ ಹೇಬಿಯಸ್ ಕಾರ್ಪಸ್ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಕೊಟ್ಟ ಬೆನ್ನಲ್ಲೇ, ಇಶಾ ಫೌಂಡೇಶನ್‌ನ ಮಾಜಿ ಸ್ವಯಂಸೇವಕ ದಂಪತಿಗಳು ಗಂಭೀರ ಆರೋಪ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಅಮೆರಿಕದಿಂದ ವಾಪಸಾಗಿರುವ ಆಂಧ್ರಪ್ರದೇಶದ ರಾಜಮಂಡ್ರಿಯ ದಂಪತಿಗಳು, ಇಶಾ ಫೌಂಡೇಶನ್ ನಡೆಸುವ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇಶಾ ಫೌಂಡೇಶನ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಯಾವುದೇ ಕಾನೂನುಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಅಮೆರಿಕದಿಂದ ವಾಪಸಾದ ದಂಪತಿ ಸತ್ಯ ನರೇಂದ್ರ ರಾಗಣಿ ಮತ್ತು ಯಾಮಿನಿ ರಾಗಣಿ ಎನ್ನುವವರು ಆರೋಪ ಮಾಡಿದ್ದಾರೆ.

ಇಶಾ ಹೋಮ್ ಸ್ಕೂಲ್‌ನಲ್ಲಿ (ಐಎಸ್‌ಎಚ್) ಓದುತ್ತಿದ್ದ ತಮ್ಮ ಮಗನ ಮೇಲೆ ಮತ್ತೊಬ್ಬ ವಿದ್ಯಾರ್ಥಿ ಮೂರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ಸಮಸ್ಯೆಯನ್ನು ಶಾಲೆಯ ಆಡಳಿತದ ಗಮನಕ್ಕೆ ತಂದರೂ ಅವರು ಯಾವುದೆ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಅದೇ ಶಾಲೆಯಲ್ಲಿ ಎಂಟು ವರ್ಷದ ಬಾಲಕಿ ಮೇಲೆ ದೈಹಿಕ ಶಿಕ್ಷಕ ನೀಡಿದ ಲೈಂಗಿಕ ದೌರ್ಜನ್ಯದ ವಿವರಗಳನ್ನು ಕೂಡ ದಂಪತಿಗಳು ನೀಡಿದ್ದಾರೆ. ಆರೋಪ ಮಾಡಿರುವ ಸತ್ಯ ನರೇಂದ್ರ ಅವರಿಗೆ ಇಶಾ ಫೌಂಡೇಶನ್ ಏನು ಹೊಸದಲ್ಲ, ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದ ಇಶಾ ಫೌಂಡೇಶನ್‌ನ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಇಶಾ ಫೌಂಡೇಶನ್ ಸಂಸ್ಥೆಯಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿರುವ ದಂಪತಿಗಳು, ಇತ್ತೀಚೆಗೆ ಅಲ್ಲಿಂದ ಹೊರ ಬಂದಿರುವುದಾಗಿ ಹೇಳಿದ್ದಾರೆ. ಬಾಲ ಬ್ರಹ್ಮಚಾರಿಣಿಗಳು ಎಂದು ಕರೆಯಲ್ಪಡುವ ಇಶಾ ಸಂಸ್ಕೃತಿ ಶಾಲೆಯಲ್ಲಿ ಓದುವ ಹದಿಹರೆಯದ ಹುಡುಗಿಯರಿಗೆ ಕೆಲವು ಆಚರಣೆಗಳ ಸಂದರ್ಭದಲ್ಲಿ ಬರಿ-ಎದೆಯಲ್ಲಿ ಭಾಗವಹಿಸಲು ಒತ್ತಾಯಿಸಲಾಗುತ್ತದೆ ಎಂದು ಆಂತರಿಕ ಇಮೇಲ್ ಬಹಿರಂಗಪಡಿಸಿದೆ ಎಂದು ನರೇಂದ್ರ ಹೇಳಿದ್ದಾರೆ.
ಸಾವನ್ನು ಮುಚ್ಚಿಡಲಾಗುತ್ತಿದೆ
"ಮಕ್ಕಳು ಮೃತಪಟ್ಟರೂ ಈ ವಿಷಯಗಳನ್ನು ಮರೆಮಾಚಲಾಗಿದೆ. ಶಾಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಈ ವಿಚಾರವನ್ನು ಹೊರಗೆ ಬರದಂತೆ ನೋಡಿಕೊಳ್ಳಲಾಗಿದೆ. ಇಶಾ ಫೌಂಡೇಶನ್ ಸಂಸ್ಥಾಪಕ, ಸದ್ಗುರು ಜಗ್ಗಿ ವಾಸುದೇವ್, ತಾವು ಸಾಕ್ಷಾತ್ಕಾರಗೊಂಡ ಆತ್ಮ, ಸಹಾನುಭೂತಿಯಿಂದ ತುಂಬಿದೆ ಎಂದು ಹೇಳುತ್ತಾರೆ. ಆದರೆ ಇಶಾ ವಿದ್ಯಾ, ಇಶಾ ಸಂಕ್ಷತ್ರಿ ಮತ್ತು ಇಶಾ ಹೋಮ್ ಸ್ಕೂಲ್‌ನ ವಿದ್ಯಾರ್ಥಿಗಳ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಮೌನವಾಗಿದ್ದಾರೆ. ಜೂನ್ 21, 2024ರಂದು 12ನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ಸಾವಿನ ವಿಚಾರವನ್ನು ಕೂಡ ಮುಚ್ಚಿಡಲಾಗಿದೆ ಎಂದು ಯಾಮಿನಿ ಗಂಭೀರ ಆರೋಪ ಮಾಡಿದ್ದಾರೆ.
ಜನರನ್ನು ಉದ್ದಾರ ಮಾಡುತ್ತೇವೆ ಎಂದು ಹೇಳಿಕೊಂಡು ಇಶಾ ಫೌಂಡೇಶನ್ ನಿಯಮಗಳನ್ನು ಗಾಳಿಗೆ ತೂರಿದ್ದು, ಅಲ್ಲಿ ನಡೆಯುತ್ತಿರುವ ದೌರ್ಜನ್ಯ, ಅಕ್ರಮಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದಂಪತಿ ಒತ್ತಾಯಿಸಿದ್ದಾರೆ.
"ನಾವು ಹಲವು ವರ್ಷಗಳಿಂದ ಸದ್ಗುರುವಿನ ಅನುಯಾಯಿಗಳಾಗಿದ್ದೇವೆ. ನಮ್ಮ ಮಗನನ್ನು ಇಶಾ ಹೋಮ್ ಸ್ಕೂಲ್‌ಗೆ ಸೇರಿಸಿದ್ದೆವು. ಭಾರತೀಯ ಮೌಲ್ಯಗಳು, ಸಂಸ್ಕೃತಿಗಳನ್ನು ಆತ ತಿಳಿಯಬೇಕು ಎನ್ನುವುದು ನಮ್ಮ ಆಸೆಯಾಗಿತ್ತು. ಆದರೆ ಮೂರು ವರ್ಷಗಳಲ್ಲಿ ಆತ ಅನುಭವಿಸಿದ ಕಷ್ಟಗಳು, ದೌಜ್ಯಗಳು ಹೇಳಲು ಆಗದು. ಆತ ತುಂಬಾ ಆಘಾತಕ್ಕೆ ಒಳಗಾಗಿದ್ದಾನೆ. ಆತನ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ಸಮಸ್ಯೆಯನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದಾಗ ಅವರು ನಮ್ಮ ಮಗನನ್ನೇ ದೂಷಿಸಿದರು. ಎರಡು ವರ್ಷಗಳಿಂದ ಈ ಸಮಸ್ಯೆ ಬಗ್ಗೆ ಆಡಳಿತ ಮಂಡಳಿ ಜೊತೆ ಮಾತನಾಡಿದ್ದೇವೆ, ಕ್ರಮ ತೆಗೆದುಕೊಳ್ಳುವಂತೆ ಹೇಳಿದರೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ ಎಂದರು.
ನಮ್ಮ ಮನವಿಗೆ ಅಲ್ಲಿ ಬೆಲೆ ಕೊಡದ ಕಾರಣ ನಾವು ಸಾರ್ವಜನಿಕವಾಗಿ ಈ ವಿಚಾರವನ್ನು ಹೇಳಬೇಕಾಯಿತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುವ ಬಗ್ಗೆ ಕೂಡ ಇನ್ನೂ ನಿರ್ಧಾರ ಮಾಡಿಲ್ಲ. ಸದ್ಗುರು ಮತ್ತು ಇಶಾ ಫೌಂಡೇಶನ್ ಹೆಚ್ಚು ಪ್ರಭಾವ ಹೊಂದಿದ್ದು, ನಮಗೆ ಆತಂಕವಿದೆ ಎಂದು ದಂಪತಿ ಹೇಳಿದ್ದಾರೆ.












Click it and Unblock the Notifications