IAS ಅಧಿಕಾರಿ ಆಗುವ ಕನಸಿಗೆ ಮತ್ತೊಂದು ಹೆಜ್ಜೆ: UPSC ಮುಖ್ಯ ಪರೀಕ್ಷೆ DAF ಲಿಂಕ್ ಓಪನ್, ಅರ್ಜಿ ಸಲ್ಲಿಸಲು ಕೊನೆಯ ದಿನ ಇಲ್ಲಿದೆ
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2026ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ವಿಂಡೋವನ್ನು ಇಂದಿನಿಂದ ಓಪನ್ ಆಗಿದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ತಮ್ಮ ವಿವರವಾದ ಅರ್ಜಿ ನಮೂನೆ (ಡಿಎಎಫ್) ಪ್ರಕ್ರಿಯೆಯನ್ನು ಅಧಿಕೃತ ವೆಬ್‌ಸೈಟ್ ಮೂಲಕ ಪೂರ್ಣಗೊಳಿಸಬೇಕಾಗಿದೆ. ಈ ಪ್ರಮುಖ ಪ್ರಕ್ರಿಯೆಗೆ ಜೂನ್ 19 ರಿಂದ ಜೂನ್ 28, 2026 ರವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ.
ಶುಲ್ಕ ವಿನಾಯಿತಿ
ಈ ವಿಶೇಷ ವಿಂಡೋದಲ್ಲಿ ಅರ್ಜಿ ಸಲ್ಲಿಕೆ, ಪರೀಕ್ಷಾ ಶುಲ್ಕ ಪಾವತಿ, ಸಹಾಯಕರು ಮತ್ತು ಬೃಹತ್ ಅಕ್ಷರಗಳ ಪ್ರಶ್ನೆಪತ್ರಿಕೆ ಅಗತ್ಯತೆಗಳ ನವೀಕರಣ ಹಾಗೂ ಕೇಡರ್ ಆದ್ಯತೆಗಳನ್ನು ಸಲ್ಲಿಸಲು ಅವಕಾಶವಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 200 ರೂ. ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ನಾಗರಿಕ ಸೇವೆಗಳ ಪರೀಕ್ಷಾ ನಿಯಮಗಳು 2026 ರ ಪ್ರಕಾರ, ಈ ಬಹುನಿರೀಕ್ಷಿತ ಯುಪಿಎಸ್‌ಸಿ ಸಿವಿಲ್ ಸರ್ವಿಸಸ್ ಮುಖ್ಯ ಲಿಖಿತ ಪರೀಕ್ಷೆಯು ಆಗಸ್ಟ್ 21, 2026 ರಿಂದ ಪ್ರಾರಂಭವಾಗಲಿದೆ. ಈ ಮುಖ್ಯ ಪರೀಕ್ಷೆಯು ಒಟ್ಟು ಒಂಬತ್ತು ಪೇಪರ್‌ಗಳನ್ನು ಒಳಗೊಂಡಿರುತ್ತದೆ ಮತ್ತು ಇದು ಸಂಪೂರ್ಣವಾಗಿ ವಿವರಣಾತ್ಮಕ ಶೈಲಿಯಲ್ಲಿ ಇರಲಿದೆ.
ಒಟ್ಟು ಒಂಬತ್ತು ಪೇಪರ್‌ಗಳಲ್ಲಿ ಎರಡು ಪೇಪರ್‌ಗಳು ಅರ್ಹತಾ ಪತ್ರಿಕೆಗಳಾಗಿರುತ್ತವೆ. ಅವುಗಳೆಂದರೆ ಭಾರತೀಯ ಭಾಷೆ ಮತ್ತು ಇಂಗ್ಲಿಷ್ ಪತ್ರಿಕೆ. ಇವು ತಲಾ 300 ಅಂಕಗಳನ್ನು ಹೊಂದಿದ್ದು, ಅಭ್ಯರ್ಥಿಗಳು ಇದರಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ಇನ್ನುಳಿದ ಏಳು ಪೇಪರ್‌ಗಳ ಆಧಾರದ ಮೇಲೆ ಮೆರಿಟ್ ರ‍್ಯಾಂಕಿಂಗ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಮೆರಿಟ್ ಪತ್ರಿಕೆಗಳು ಒಟ್ಟು 1,750 ಅಂಕಗಳನ್ನು ಒಳಗೊಂಡಿರುತ್ತವೆ.
ಇದರಲ್ಲಿ 250 ಅಂಕಗಳ ಒಂದು ಪ್ರಬಂಧ ಪತ್ರಿಕೆ, ತಲಾ 250 ಅಂಕಗಳ ನಾಲ್ಕು ಸಾಮಾನ್ಯ ಅಧ್ಯಯನ ಪತ್ರಿಕೆಗಳು (GS I, GS II, GS III ಮತ್ತು GS IV) ಮತ್ತು ಅಭ್ಯರ್ಥಿ ಆಯ್ದುಕೊಂಡ ಐಚ್ಛಿಕ ವಿಷಯದ ಎರಡು ಪತ್ರಿಕೆಗಳು ತಲಾ 250 ಅಂಕಗಳಿಗೆ ಇರಲಿವೆ. ಈ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳನ್ನು ಮುಂದಿನ ಹಂತವಾದ ಇಂಟರ್‌ವ್ಯೂವ್ ಅಥವಾ ವ್ಯಕ್ತಿತ್ವ ಪರೀಕ್ಷೆಗೆ ಕರೆಯಲಾಗುವುದು, ಇದು 275 ಅಂಕಗಳನ್ನು ಹೊಂದಿರುತ್ತದೆ. ಅರ್ಹ ಅಭ್ಯರ್ಥಿಗಳು ತಕ್ಷಣವೇ upsc.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:
1. ಮೊದಲಿಗೆ, ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ ಆದ upsc.gov.in ಗೆ ಭೇಟಿ ನೀಡಿ.
2. ನಿಮ್ಮ ರಿಜಿಸ್ಟ್ರೇಷನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಆಗಿ.
3. ಅಲ್ಲಿರುವ ನಿಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳು ಸರಿಯಾಗಿವೆಯೇ ಎಂಬುದನ್ನು ನೋಡಿಕೊಳ್ಳಿ.
4. ಅನ್ವಯವಾದರೆ, ನಿಮ್ಮ ಜಾತಿ/ವರ್ ಮತ್ತು ಮೀಸಲಾತಿ ಮಾಹಿತಿಯನ್ನು ನವೀಕರಿಸಿ.
5. ನಿಮ್ಮ ಕೇಡರ್ ಆದ್ಯತೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಭರ್ತಿ ಮಾಡಿ.
6. ನೀವು ವಿಕಲಚೇತನರಾಗಿದ್ದು, ಪರೀಕ್ಷೆ ಬರೆಯಲು ಸಹಾಯಕರ ಅಥವಾ ಸಹಾಯಕ ಸಾಧನಗಳ ಅಗತ್ಯವಿದ್ದರೆ, ಆ ವಿವರಗಳನ್ನು ನಮೂದಿಸಿ.
7. ಶುಲ್ಕ ವಿನಾಯಿತಿ ಪಡೆದ ವರ್ಗಗಳನ್ನು (ಮಹಿಳೆಯರು, SC/ST, ವಿಕಲಚೇತನರು) ಹೊರತುಪಡಿಸಿ, ಉಳಿದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ₹200 ಪರೀಕ್ಷಾ ಶುಲ್ಕವನ್ನು ಪಾವತಿಸಿ.
8. ನೀವು ನಮೂದಿಸಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ನಂತರ ಅರ್ಜಿಯನ್ನು 'Submit' ಮಾಡಿ.
9. ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಕನ್ಫರ್ಮೇಷನ್ ಪುಟವನ್ನು ಡೌನ್‌ಲೋಡ್ ಮಾಡಿ ಮತ್ತು ಸೇವ್ ಮಾಡಿಕೊಳ್ಳಿ.
10. ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ, ಪರೀಕ್ಷೆಗೂ ಮುನ್ನ ಬಿಡುಗಡೆಯಾಗುವ ಇ-ಅಡ್ಮಿಟ್ ಕಾರ್ಡ್‌ಗಾಗಿ ವೆಬ್‌ಸೈಟ್ ಪರಿಶೀಲಿಸುತ್ತಿರಿ.
ಜೂನ್ 28 ರೊಳಗೆ ಈ ಮೇಲಿನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ.












Click it and Unblock the Notifications