ಯುಪಿ: ಸೈಬರ್ ಕ್ರೈಂ ತಡೆಯಲು ಸಿಎಂ ಯೋಗಿ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ಲಕ್ನೋ ಏಪ್ರಿಲ್ 14: ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರ ಸೈಬರ್ ಕ್ರೈಮ್ ಮಟ್ಟ ಹಾಕಲು ಯೋಜನೆ ರೂಪಿಸಿದೆ. ಈ ಬಾರಿ ಸೈಬರ್ ಕ್ರೈಂ ಹತ್ತಿಕ್ಕಲು ಯೋಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಯೋಗಿ ಸರ್ಕಾರ ರಾಜ್ಯಾದ್ಯಂತ ಸೈಬರ್ ಕ್ರೈಮ್ ಅನ್ನು ತಡೆಯಲು ಕ್ರಮಗಳನ್ನು ಕೈಗೊಂಡಿದೆ. ಸೈಬರ್ ಅಪರಾಧವನ್ನು ನಿಭಾಯಿಸುವುದು ಈಗ ದೇಶಾದ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸೈಬರ್ ಕ್ರೈಮ್ ನಿಂದಾಗಿ ಹಲವಾರು ಗಲಭೆಗಳು ನಡೆದಿವೆ. ಅದಕ್ಕಾಗಿಯೇ ಯೋಗಿ ಸರ್ಕಾರ ಸೈಬರ್ ಕ್ರೈಂಗೆ ವಿಶೇಷ ಒತ್ತು ನೀಡಿದೆ.
ಇದರ ಬೆನ್ನಲ್ಲೆ ಜಿಲ್ಲಾ ಮಟ್ಟದ ಸೈಬರ್ ಸೆಲ್ ಪ್ರತಿನಿಧಿಗಳೊಂದಿಗೆ ಸಿಎಂ ಯೋಗಿ ಆದಿತ್ಯನಾಥ್ ಸಭೆ ನಡೆಸಿದರು. ಬುಧವಾರ ಲಕ್ನೋದಲ್ಲಿ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಯೋಗಿ, ಸಭೆಯಲ್ಲಿ ರಾಜ್ಯದಲ್ಲಿ ಅಪರಾಧ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಯೋಗಿ ಸರ್ಕಾರ ಮುಂದಾಗಿದೆ. ಮಾತ್ರವಲ್ಲದೆ ರಾಜ್ಯದ ಎಲ್ಲಾ ಸೈಬರ್ ಸೆಲ್ ಪೋರ್ಟಲ್‌ಗಳನ್ನು ಮೇಲ್ದರ್ಜೆಗೇರಿಸಲು ಯೋಗಿ ಆದಿತ್ಯನಾಥ್ ನಿರ್ದೇಶನ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಅಪರಾಧ ತಡೆಗೆ ವಿಶೇಷ ಪ್ರಯತ್ನ ನಡೆಯುತ್ತಿದೆ.
ಉತ್ತರ ಪ್ರದೇಶವನ್ನು ಬಹುಕಾಲದಿಂದಲೂ ಕ್ರಿಮಿನಲ್‌ಗಳು ಹೆಚ್ಚು ಇರುವ ಪ್ರದೇಶ ಎಂದು ಹೇಳಲಾಗುತ್ತಿದೆ. ಹೀಗಾಗಿ ಉತ್ತರ ಪ್ರದೇಶವನ್ನು ಅಪರಾಧಿಗಳಿಂದ ಮುಕ್ತಗೊಳಿಸುವಲ್ಲಿ ಯೋಗಿ ಸರ್ಕಾರ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಅಪರಾಧಿಗಳಿಗೆ ಯಾವುದೇ ರೀತಿಯ ರಿಯಾಯಿತಿ ನೀಡುವಂತಿಲ್ಲ ಎಂದು ಆದೇಶಿಸಿದ್ದಾರೆ.

ರಾಜ್ಯದ ಸೈಬರ್ ಕ್ರೈಂ ಪೋರ್ಟಲ್‌ಗಳ ಮೇಲೆ 24 ಗಂಟೆಗಳ ಕಾಲ ನಿಗಾ ಇಡುವಂತೆ ಸಿಎಂ ಆದೇಶಿಸಿದ್ದಾರೆ. ಸಾರ್ವಜನಿಕ ದೂರು ಬಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸರು ಉತ್ತರ ಪ್ರದೇಶದಾದ್ಯಂತ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.
'ಕಾನೂನು ಸುವ್ಯವಸ್ಥೆ ಸುಧಾರಿಸುವುದು ಮೊದಲ ಆಧ್ಯತೆ' ಯೋಗಿ ಆದಿತ್ಯನಾಥ್
2017 ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ರಾಜ್ಯದ ಆಡಳಿತವನ್ನು ವಹಿಸಿಕೊಂಡ ಬೆನ್ನಲ್ಲೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವುದು ನನ್ನ ಮೊದಲ ಆದ್ಯತೆ ಎಂದಿದ್ದರು. ಇದೀಗ ರಾಜ್ಯ ಸರ್ಕಾರದ ಅಂಕಿ ಅಂಶಗಳೇ ಈ ಸತ್ಯವನ್ನು ದೃಢಪಡಿಸುತ್ತಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2017 ರಿಂದ 10,713 ಎನ್‌ಕೌಂಟರ್ ನಡೆದಿವೆ. ಅದರಲ್ಲಿ ಗರಿಷ್ಠ 3,152 ಅನ್ನು ಮೀರತ್ ಪೊಲೀಸರು ನಡೆಸಿದ್ದು, ಇದರಲ್ಲಿ 63 ಅಪರಾಧಿಗಳು ಕೊಲ್ಲಲ್ಪಟ್ಟಿದ್ದಾರೆ ಮತ್ತು 1,708 ಮಂದಿಯನ್ನು ಬಂಧಿಸಲಾಗಿದೆ. ನಂತರ ಆಗ್ರಾ ಪೊಲೀಸರು 1,844 ಎನ್‌ಕೌಂಟರ್‌ಗಳನ್ನು ನಡೆಸಿದ್ದು, ಇದರಲ್ಲಿ 14 ಭಯಾನಕ ಕ್ರಿಮಿನಲ್‌ಗಳು ಕೊಲ್ಲಲ್ಪಟ್ಟಿದ್ದು, 4,654 ಮಂದಿಯನ್ನು ಬಂಧಿಸಲಾಗಿದೆ. ಈ ವೇಳೆ 55 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಂಕಿ ಅಂಶಗಳ ಪ್ರಕಾರ, ಮಾರ್ಚ್ 2017 ರಿಂದ ಮಾರ್ಚ್ 2023 ರವರೆಗೆ, ಯುಪಿ ಪೊಲೀಸರು 23,125 ಅಪರಾಧಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇವುಗಳಲ್ಲಿ ಅನೇಕ ಭಯಾನಕ ಅಪರಾಧಿಗಳೂ ಸೇರಿದ್ದಾರೆ.












Click it and Unblock the Notifications