ತಡರಾತ್ರಿವರೆಗೂ ಚಂದ್ರಬಾಬು ನಾಯ್ಡು ಜೊತೆ ಹೆಚ್.ಡಿ.ಕುಮಾರಸ್ವಾಮಿ ಚರ್ಚೆ
ಬೆಂಗಳೂರು,ಅಕ್ಟೋಬರ್ 09: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಕಾರ್ಖಾನೆ - RNIL (ವೈಜಾಗ್ ಸ್ಟೀಲ್) ಯನ್ನು ಪುನರುದ್ಧಾರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ತಡರಾತ್ರಿ ಮಹತ್ವದ ಸಭೆ ನಡೆಸಿದರು.
ಸಚಿವ ಕುಮಾರಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದ್ದು, ಈ ಸಭೆಯು ನವದೆಹಲಿಯ ನಾರ್ಥ್ ಬ್ಲಾಕ್ ನಲ್ಲಿರುವ ವಿತ್ತ ಸಚಿವಾಲಯದ ಕಚೇರಿಯಲ್ಲಿ ನಿನ್ನೆ ತಡರಾತ್ರಿ 11.30ಗೆ ನಡೆಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಆರ್'ಐಎನ್'ಎಲ್ ಅನ್ನು ಉಳಿಸುವ ನಿಟ್ಟಿನಲ್ಲಿ ಕಂಡುಕೊಳ್ಳಬೇಕಾದ ಪರಿಹಾರೋಪಾಯಗಳು, ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ತಾವು ಖುದ್ದು ಕಾರ್ಖಾನೆಗೆ ಭೇಟಿ ನೀಡಿ ಸಂಗ್ರಹಿಸಿದ್ದ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡ ಕೇಂದ್ರ ಉಕ್ಕು ಸಚಿವರು; ಅದರಲ್ಲಿಯೂ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖಂಡರು, ಆಡಳಿತ ಮಂಡಳಿ, ಸ್ಥಳೀಯ ಜನಪ್ರತಿನಿಧಿಗಳು ನೀಡಿದ್ದ ಮಾಹಿತಿಯ ಬಗ್ಗೆ ವಿವರಿಸಿದರು.
ಸಭೆಯ ಬಗ್ಗೆ ಮಾಹಿತಿ ನೀಡಿರುವ ಸಚಿವ ಕುಮಾರಸ್ವಾಮಿ ಅವರು; "ವೈಜಾಗ್ ಸ್ಟೀಲ್ ಉಳಿಸುವ ನಿಟ್ಟಿನಲ್ಲಿ ಹಣಕಾಸು ಸಚಿವರು ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಫಲಪ್ರದ ಮಾತುಕತೆ ನಡೆಯಿತು. ಈಗಾಗಲೇ ನಾನು ಕಾರ್ಖಾನೆಗೂ ಭೇಟಿ ನೀಡಿದ್ದೆ ಹಾಗೂ ವಿತ್ತ ಸಚಿವರ ಜತೆಯೂ ಚರ್ಚೆ ನಡೆಸಿದ್ದೆ. ಅಲ್ಲದೆ; ಸಚಿವಾಲಯದ ಮಟ್ಟದಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿತ್ತು" ಎಂದು ತಿಳಿಸಿದ್ದಾರೆ. ಈ ಸಭೆಗೆ ಮುನ್ನ ಮಂಗಳವಾರ ಮಧ್ಯಾಹ್ನವೇ ನವದೆಹಲಿಯಲ್ಲಿ ಕೇಂದ್ರ ಸಚಿವರು ಈ ಬಗ್ಗೆ ಚಂದ್ರಬಾಬು ನಾಯ್ಡು ಅವರೊಂದಿಗೆ ಚರ್ಚೆ ನಡೆಸಿದ್ದರು.
ವಾಹನ ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ PM E-DRIVE ಯೋಜನೆಯು ಹೆಚ್ಚು ಪರಿಣಾಮಕಾರಿ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು. ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವುದರ ಜತೆಗೆ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಪ್ರೋತ್ಸಾಹಿಸಲು ₹10,900 ಕೋಟಿಗಳ ಯೋಜನೆ ರೂಪಿಸಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಈ ಯೋಜನೆಯ ಮೂಲಕ ವಾಹನ ಮಾಲಿನ್ಯವನ್ನು ಶೂನ್ಯ ಮಟ್ಟಕ್ಕೆ ತರಲು ಸಾಮೂಹಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುವುದು. ಹಾಗೂ ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಪ್ರಯತ್ನ ನಡೆಸಲಾಗಿದೆ. ಪ್ರಧಾನಿ ಮೋದಿ ಅವರು ಈ ಯೋಜನೆಗೆ ಆದ್ಯತೆಯ ಮೇರೆಗೆ ಉತ್ತೇಜನ ಕೊಡುತ್ತಿದ್ದಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಮುಂದಿನ ಐದು ವರ್ಷಗಳಲ್ಲಿ ಇವಿ ವಾಹನಗಳ ಮೂಲಸೌಕರ್ಯಕ್ಕೆ ದೊಡ್ಡ ಮಟ್ಟದ ಹಣಕಾಸಿನ ಬೆಂಬಲ ಕೊಡಲಾಗುತ್ತಿದೆ. ಮೂಲಸೌಕರ್ಯ ಸೃಷ್ಟಿ ಮತ್ತು ಸುಧಾರಣೆಗಾಗಿ ಈ ವರ್ಷದ ಬಜೆಟ್‌ನಲ್ಲಿ ಜಿಡಿಪಿಯ ಶೇ.3.4ರಷ್ಟು, ಅಂದರೆ ₹11,11,111 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಉಕ್ಕಿನ ಕ್ಷೇತ್ರದಲ್ಲಿಯೂ ವಾಯು ಮಾಲಿನ್ಯವನ್ನು ಗಣನೀಯ ಮಟ್ಟಕ್ಕೆ ತಗ್ಗಿಸುವ ನಿಟ್ಟಿನಲ್ಲಿ ಉಕ್ಕು ಸಚಿವಾಲಯದ ವತಿಯಿಂದ ಸಮರೋಪಾದಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂಗಾಲದ ಹೊರಸೂಸುವಿಕೆಯಲ್ಲಿ ಉಕ್ಕು ಉದ್ಯಮದ ಪಾಲು 10-12%ರಷ್ಟಿದ್ದು,ಅದನ್ನು ಬಹುತೇಕ ತಡೆಯುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗುದ್ದೇವೆ. ಹೀಗಾಗಿ ಇಂಗಾಲೀಕರಣ ರಹಿತ ಉಕ್ಕಿನ ಸ್ಥಾವರಗಳ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications