ದೇಶದ 4 ಪ್ರಮುಖ ಹುದ್ದೆಗಳಿಗೆ ಹೊಸ ಮುಖ್ಯಸ್ಥರ ನೇಮಕ

Written By:
Subscribe to Oneindia Kannada

ನವದೆಹಲಿ, ಡಿ 18: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಅತ್ಯಂತ ಆಯಕಟ್ಟಿನ ನಾಲ್ಕು ಹುದ್ದೆಗೆ ಹೊಸ ಮುಖ್ಯಸ್ಥರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ದೇಶದ ಸೂಕ್ಷ್ಮ ಹುದ್ದೆಗಳಾದ ಭೂಸೇನೆ, ವಾಯುಸೇನೆ, ಆಂತರಿಕ ಬೇಹುಗಾರಿಕೆ (IB), ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗಕ್ಕೆ (RAW) ಕೇಂದ್ರ ಸರಕಾರ ಶನಿವಾರ (ಡಿ 17) ಹೊಸ ಮುಖ್ಯಸ್ಥರನ್ನು ನೇಮಕ ಮಾಡಿದೆ.

ಭದ್ರತೆಯ ವಿಚಾರದಲ್ಲಿ ಅತೀ ಪ್ರಮುಖ ಈ ನಾಲ್ಕು ಹುದ್ದೆಗಳಿಗೆ ಆಯ್ಕೆಯಾಗಿರುವ ಮುಖ್ಯಸ್ಥರ ಕಿರು ಪರಿಚಯ ಇಂತಿದೆ:

ಭೂಸೇನೆ: ಭೂಸೇನೆಯ ಮುಖ್ಯಸ್ಥರಾಗಿ ಲೆ. ಜ. ಬಿಪಿನ್ ರಾವತ್ ಆಯ್ಕೆಯಾಗಿದ್ದಾರೆ. ರಾವತ್‌, ಇಬ್ಬರು ಹಿರಿಯ ಅಧಿಕಾರಿಗಳನ್ನು ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಿರುವುದು ವಿಶೇಷ.

1978ರಲ್ಲಿ ಗೋರ್ಖಾ ಬೆಟಾಲಿಯನಿಗೆ ಸೇರಿದ್ದ ರಾವತ್, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಸ್ಥಾನದಿಂದ ಸೇನಾ ಮುಖ್ಯಸ್ಥ ಸ್ಥಾನಕ್ಕೇರಿದ್ದಾರೆ. ಹಾಲೀ ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರ ಅಧಿಕಾರದ ಅವಧಿ ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದೆ.

Union government picks new Army, IAF chiefs and heads of IB and RAW

(ಚಿತ್ರದಲ್ಲಿ: ಎಡಕ್ಕೆ ಬಿಪಿನ್ ರಾವತ್, ಬಲಕ್ಕೆ ಬಿ ಎಸ್‌ ಧನೋವಾ)

ವಾಯುಸೇನೆ: ಏರ್‌ ಚೀಫ್‌ ಮಾರ್ಷಲ್‌ ಬಿ ಎಸ್‌ ಧನೋವಾ ವಾಯುಪಡೆಯ (ಐಎಎಫ್‌) ಹೊಸ ಮುಖ್ಯಸ್ಥರಾಗಲಿದ್ದಾರೆ. ಹಾಲೀ ಮುಖ್ಯಸ್ಥ ಅರೂಪ್‌ ರಾಹಾ ಡಿ. 31ರಂದು ನಿವೃತ್ತರಾಗಲಿದ್ದು, ಧನೋವಾ ಅವರು ಅದೇ ದಿನ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ವಾಯುಪಡೆಯ ವಿವಿಧ ಹುದೆಗಳನ್ನು ಅಲಂಕರಿಸಿರುವ ಧನೋವಾ, 1999ರ ಕಾರ್ಗಿಲ್ ಯುದ್ದದ ವೇಳೆ ಪ್ರಮುಖ ಪಾತ್ರ ವಹಿಸಿದ್ದರು.

ಆಂತರಿಕ ಬೇಹುಗಾರಿಕೆ (IB) : ರಾಜೀವ್ ಜೈನ್, ಆಂತರಿಕ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಹಾಲೀ ಮುಖ್ಯಸ್ಥ ದಿನೇಶ್ವರ್ ಶರ್ಮಾ ಅವರ ಅಧಿಕಾರದ ಅವಧಿ ಡಿ. 31ರಂದು ಕೊನೆಗೊಳ್ಳಲಿದೆ.

1980ರ ಜಾರ್ಖಂಡ್ ಬ್ಯಾಚಿನ ಜೈನ್, ಈ ಹಿಂದೆ ದೆಹಲಿ ಮತ್ತು ಅಹಮದಾಬಾದ್ ರಾಜ್ಯ ಬೇಹುಗಾರಿಕೆ ದಳದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW) : ಅನಿಲ್ ಧಸ್ಮಾನಾ ರಾ ಮುಖ್ಯಸ್ಥರಾಗಲಿದ್ದಾರೆ. 1980ರ ಮಧ್ಯಪ್ರದೇಶ ಬ್ಯಾಚಿನ ಅನಿಲ್, ದೇಶದ ರಕ್ಷಣಾ ವಿಚಾರದಲ್ಲಿ ಈಗಾಗಲೇ ಮಹತ್ವದ ಕೆಲಸವನ್ನು ನಿರ್ವಹಿಸಿದ್ದರು.

ಡಿಸೆಂಬರ್ 31ರಂದು ಹಾಲೀ ಮುಖ್ಯಸ್ಥ ರಾಜಿಂದರ್ ಖನ್ನಾ ಅವರ ಅವಧಿ ಕೊನೆಗೊಳ್ಳಲಿದ್ದು, ಅನಿಲ್ ಅಂದೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Union government on Saturday (Dec 17) picks new Army, IAF chiefs and heads of IB and RAW.
Please Wait while comments are loading...