Union Budget 2026:ಸಾಲ ಮತ್ತು ತೆರಿಗೆಯೇ ಸರ್ಕಾರದ ಜೀವಾಳ; ಬಡ್ಡಿ ಪಾವತಿಗೇ ಹೋಗುತ್ತಿದೆ ದೊಡ್ಡ ಪಾಲು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆ 1) ಸಂಸತ್ ಅಧಿವೇಶನದಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್ ಭಾಷಣದ ನಂತರ ಕೇಂದ್ರ ಹಣಕಾಸು ಸಚಿವಾಲಯವು ಸರ್ಕಾರದ ಆದಾಯ ಮತ್ತು ವೆಚ್ಚದ ಬಗ್ಗೆ ನಿಖರ ಮಾಹಿತಿಯನ್ನು ಮಾಧ್ಯಮಗಳಿಗೆ ಒದಗಿಸಿದೆ. ಅದರಂತೆ ಸರ್ಕಾರದ ಬೊಕ್ಕಸಕ್ಕೆ ಬರುವ ಪ್ರತಿ ಒಂದು ರೂಪಾಯಿ (100 ಪೈಸೆ) ಎಲ್ಲಿಂದ ಸಂಗ್ರಹವಾಗುತ್ತದೆ ಮತ್ತು ಅದನ್ನು ಅಭಿವೃದ್ಧಿ ಹಾಗೂ ಆಡಳಿತ ನಿರ್ವಹಣೆಗೆ ಹೇಗೆ ವಿನಿಯೋಗಿಸಲಾಗುತ್ತದೆ ಎಂಬ ಕುತೂಹಲಕಾರಿ ಅಂಕಿಅಂಶಗಳು ಇಲ್ಲಿವೆ.
ಸರ್ಕಾರದ ಬೊಕ್ಕಸಕ್ಕೆ ಬರುವ ಪ್ರತಿ ಒಂದು ರೂಪಾಯಿಯ ಲೆಕ್ಕಾಚಾರ
ಸರ್ಕಾರದ ಆದಾಯದಲ್ಲಿ ಅತಿ ದೊಡ್ಡ ಪಾಲು ಸಾಲದ ಮೂಲಕವೇ ಬರುತ್ತಿದೆ ಎಂಬುದು ಗಮನಾರ್ಹ. ಒಟ್ಟು ಆದಾಯದಲ್ಲಿ ಶೇಕಡಾ 24 ರಷ್ಟು ಭಾಗವು ಸಾಲಗಳು ಮತ್ತು ಇತರೆ ಬಾಧ್ಯತೆಗಳಿಂದ ಬರುತ್ತದೆ. ತೆರಿಗೆ ಸಂಗ್ರಹದಲ್ಲಿ, ಆದಾಯ ತೆರಿಗೆ (Income Tax) ಪ್ರಮುಖ ಮೂಲವಾಗಿದ್ದು, ಇದು ಒಟ್ಟು ಆದಾಯದ ಶೇಕಡಾ 21 ರಷ್ಟಿದೆ. ಕಂಪನಿಗಳು ಪಾವತಿಸುವ ಕಾರ್ಪೊರೇಟ್ ತೆರಿಗೆ (Corporation Tax) ಮೂಲಕ ಶೇಕಡಾ 18ರಷ್ಟು ಹಣ ಸಂಗ್ರಹವಾಗುತ್ತದೆ.

ಇನ್ನುಳಿದಂತೆ, ಸರಕು ಮತ್ತು ಸೇವಾ ತೆರಿಗೆ (GST) ಮತ್ತು ಇತರೆ ತೆರಿಗೆಗಳಿಂದ ಶೇಕಡಾ 15ರಷ್ಟು ಆದಾಯ ಹರಿದು ಬಂದರೆ , ತೆರಿಗೆಯೇತರ ಮೂಲಗಳಿಂದ (Non-Tax Revenues) ಶೇಕಡಾ 10ರಷ್ಟು ಆದಾಯ ಲಭ್ಯವಾಗುತ್ತದೆ. ಕೇಂದ್ರ ಅಬಕಾರಿ ಸುಂಕವು (Union Excise Duties) ಶೇಕಡಾ 6ರಷ್ಟು ಮತ್ತು ಕಸ್ಟಮ್ಸ್ ಸುಂಕವು (Customs) ಶೇಕಡಾ 4ರಷ್ಟು ಕೊಡುಗೆ ನೀಡುತ್ತವೆ. ಸಾಲವಲ್ಲದ ಬಂಡವಾಳ ಸ್ವೀಕೃತಿಗಳು (Non-Debt Capital Receipts) ಕೇವಲ ಶೇಕಡಾ 2 ರಷ್ಟಿವೆ.
ಸರ್ಕಾರದ ಬೊಕ್ಕಸದಿಂದ ಹೋಗುವ ಪ್ರತಿ ಒಂದು ರೂಪಾಯಿಯ ಲೆಕ್ಕಾಚಾರ
ಸರ್ಕಾರದ ಆದಾಯದಲ್ಲಿ ಸಿಂಹಪಾಲು ರಾಜ್ಯಗಳಿಗೆ ಮತ್ತು ಬಡ್ಡಿ ಪಾವತಿಗೆ ಮೀಸಲಾಗಿದೆ. ಸಂಗ್ರಹವಾದ ಒಂದು ರೂಪಾಯಿಯಲ್ಲಿ ಅತಿ ಹೆಚ್ಚು, ಅಂದರೆ ಶೇಕಡಾ 22 ರಷ್ಟು ಹಣವನ್ನು ತೆರಿಗೆ ಮತ್ತು ಸುಂಕಗಳಲ್ಲಿನ ರಾಜ್ಯಗಳ ಪಾಲು (States Share of Taxes) ಆಗಿ ನೀಡಲಾಗುತ್ತದೆ. ಇದರ ಬೆನ್ನಲ್ಲೇ, ಹಳೆಯ ಸಾಲಗಳ ಮೇಲಿನ ಬಡ್ಡಿ ಪಾವತಿಗಾಗಿ (Interest Payment) ಸರ್ಕಾರವು ಬರೋಬ್ಬರಿ ಶೇಕಡಾ 20ರಷ್ಟು ಹಣವನ್ನು ಖರ್ಚು ಮಾಡಬೇಕಿದೆ.

ದೇಶದ ಅಭಿವೃದ್ಧಿಗೆ ನೇರವಾಗಿ ಪೂರಕವಾಗುವ 'ಕೇಂದ್ರ ವಲಯದ ಯೋಜನೆಗಳಿಗೆ' (Central Sector Schemes) ಶೇಕಡಾ 17ರಷ್ಟು ಹಣ ವಿನಿಯೋಗವಾಗಲಿದೆ. ರಾಜ್ಯಗಳ ಸಹಭಾಗಿತ್ವದೊಂದಿಗೆ ನಡೆಯುವ 'ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ' (Centrally Sponsored Schemes) ಶೇಕಡಾ 8ರಷ್ಟು ಹಣವನ್ನು ಎತ್ತಿಡಲಾಗಿದೆ.
ದೇಶದ ಸುರಕ್ಷತೆಯ ದೃಷ್ಟಿಯಿಂದ ರಕ್ಷಣಾ ವಲಯಕ್ಕೆ (Defence) ಶೇಕಡಾ 11ರಷ್ಟು ಹಣವನ್ನು ನೀಡಲಾಗಿದೆ. ಇದಲ್ಲದೆ, ಆಹಾರ ಮತ್ತು ರಸಗೊಬ್ಬರದಂತಹ ಪ್ರಮುಖ ಸಬ್ಸಿಡಿಗಳಿಗೆ ಶೇಕಡಾ 6ರಷ್ಟು ಮತ್ತು ಸರ್ಕಾರಿ ನೌಕರರ ಪಿಂಚಣಿಗಾಗಿ ಶೇಕಡಾ 2ರಷ್ಟು ಹಣ ಖರ್ಚಾಗಲಿದೆ. ಹಣಕಾಸು ಆಯೋಗದ ಶಿಫಾರಸು ಮತ್ತು ಇತರೆ ವರ್ಗಾವಣೆಗಳಿಗೆ ಶೇಕಡಾ 7ರಷ್ಟು ಹಣ ಬಳಕೆಯಾಗಲಿದೆ.

ಒಟ್ಟಾರೆಯಾಗಿ, ಸಾಲದ ಮೇಲಿನ ಬಡ್ಡಿ ಮತ್ತು ಆಡಳಿತಾತ್ಮಕ ವೆಚ್ಚಗಳ ನಿರ್ವಹಣೆಯೇ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ ಎಂಬುದನ್ನು ಈ ಬಜೆಟ್ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ.












Click it and Unblock the Notifications