ಉಜ್ಜಯಿನಿ ಅತ್ಯಾಚಾರ: ಅರೆಬೆತ್ತಲಾಗಿ ಮನೆಮನೆ ಅಲೆದರೂ ಬಾಲಕಿಯ ಸಹಾಯಕ್ಕೆ ಬರಲಿಲ್ಲ ಜನ- ಇದು ಮಾನವತೆಯ ಮಹಾಪತನ
ಉಜ್ಜಯಿನಿ, ಸೆಪ್ಟೆಂಬರ್ 29: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣವು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಅತ್ಯಾಚಾರ ನಡೆದ ಬಳಿಕ ಬಾಲಕಿಯು ಸಹಾಯ ಕೇಳಿಕೊಂಡು ಮನೆಮನೆಗೆ ಅಲೆದಿದ್ದಾಳೆ. ಆಕೆ ಅರೆಬೆತ್ತಲೆ ಸ್ಥಿತಿಯಲ್ಲಿದ್ದು, ದೇಹಕ್ಕೆ ರಕ್ತ ಮೆತ್ತಿಕೊಂಡಿರುವುದು ವಿಡಿಯೊದಲ್ಲಿ ಚಿತ್ರೀಕರಣವಾಗಿದೆ. ಆದರೆ, ಆಕೆಗೆ ಯಾರೂ ಸಹಾಯ ಹಸ್ತ ಚಾಚದಿರುವುದು ನಾಚಿಕೆಗೇಡಿನ ಸಂಗತಿ ಎಂದೇ ಹೇಳಬಹುದು.
ವೈರಲ್ ಆಗಿರುವ ವಿಡಿಯೊದಲ್ಲಿನ ದೃಶ್ಯಗಳು ಭಯಾನಕವಾಗಿವೆ. ಅಪ್ರಾಪ್ತ ವಯಸ್ಕ ಬಾಲಕಿಯು ಅರೆಬೆತ್ತಲೆ ಸ್ಥಿತಿಯಲ್ಲಿ ಮನೆ-ಮನೆಗೆ ಹೋಗಿ ಸಹಾಯವನ್ನು ಕೇಳುತ್ತಿರುವಾಗ ಸ್ಥಳೀಯರು ಸುಮ್ಮನೆ ನಿಂತು ನೋಡುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ವರದಿಯ ಪ್ರಕಾರ, ಬಾಲಕಿಯು ಕೊನೆಯಲ್ಲಿ ಆಶ್ರಮವೊಂದನ್ನು ತಲುಪಿದ್ದಾಳೆ. ಅಲ್ಲಿದ್ದ ಪೂಜಾರಿಯೊಬ್ಬರು ಲೈಂಗಿಕ ದೌರ್ಜನ್ಯದ ಲಕ್ಷಣಗಳನ್ನು ಗುರುತಿಸಿದ್ದಾರೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆದರೆ, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಆಕೆಯ ದೇಹದ ಖಾಸಗಿ ಭಾಗಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಅತಿಯಾದ ರಕ್ತಸ್ರಾವದಿಂದ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಸಂತ್ರಸ್ತೆ ಮಧುಮೇಹದಿಂದ ಬಳಲುತ್ತಿದ್ದಳು ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಅಪ್ರಾಪ್ತ ಬಾಲಕಿ ಸುಮಾರು ಎರಡು ಗಂಟೆಗಳ ಕಾಲ ಆ ಪ್ರದೇಶದಲ್ಲಿ ಸುತ್ತಾಡುತ್ತಿದ್ದಳು ಎಂದು ಪೊಲೀಸರಿಗೆ ತಿಳಿದುಬಂದಿದೆ.
ಐದು, ಹತ್ತು ರೂಪಾಯಿ ನೀಡಿರುವುದಾಗಿ ಹೇಳಿಕೊಂಡ ಜನರು
ಬಾಲಕಿಯು ಸಹಾಯಕ್ಕೆ ಅಂಗಲಾಚುತ್ತಿದ್ದಾಗ ಆಕೆಗೆ ಐದು, ಹತ್ತು ರೂಪಾಯಿಗಳನ್ನು ನೀಡಿದ್ದೇವೆ ಸ್ಥಳೀಯರು ಹೇಳಿದ್ದಾರೆ. ಅಪ್ರಾಪ್ತ ಬಾಲಕಿಯು ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವಾಗ ಜನರು ಹಣ ನೀಡಿ ಕೈತೊಳೆದುಕೊಂಡಿದ್ದು ಅಮಾನವೀಯವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಪುಣ್ಯ ಕ್ಷೇತ್ರದಲ್ಲಿ ಪಾಪ ಕಾರ್ಯ
ಉಜ್ಜಯನಿ ಭಾರತದ ಹೆಸರಾಂತ ಪುಣ್ಯ ಕ್ಷೇತ್ರವಾಗಿದೆ. ಅಂತಹ ಕ್ಷೇತ್ರದಲ್ಲಿ ತಲೆತಗ್ಗಿಸುವ ನೀಚ ಕೆಲಸ ನಡೆದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ದುರಂತವೆಂದರೆ, ಬಾಲಕಿಯ ಮೇಲೆ ಮೃಗೀಯ ದಾಳಿ ನಡೆದಿದ್ದರೂ, ಅಲ್ಲಿನ ಜನರು ಸಹಾಯಕ್ಕೆ ಬರದೇಹೋಗಿದ್ದು ಅಮಾವೀಯತೆಗೆ ಹಿಡಿದ ಕನ್ನಡಿಯಾಗಿದೆ. ಬಾಲಕಿಯು ಉಜ್ಜಯನಿಗೆ ಹೇಗೆ ಬಂದಳು, ಆಕೆಯ ಪೋಷಕರು ಯಾರು, ಆಕೆ ಎಲ್ಲಿಂದ ಬಂದಳು ಎಂದು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದರೆ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಇವರೇನಾ ಎಂಬ ಪ್ರಶ್ನೆಗೆ ಪೊಲೀಸರು ಇನ್ನೂ ಉತ್ತರ ನೀಡಿಲ್ಲ.
ಪೊಲೀಸರ ಪ್ರಕಾರ, ಬಾಲಕಿಯು ಮಧ್ಯಪ್ರದೇಶದ ಸತ್ನಾದಿಂದ ಉಜ್ಜಯಿನಿಗೆ ಆಗಮಿಸಿದ್ದಾಳೆ. ಜೀವನ್ ಖೇರಿಯಲ್ಲಿ ಆಟೋ ಹತ್ತಿದ್ದಾಳೆ. ಆದರೆ, ವರದಿಗಳ ಪ್ರಕಾರ, ಬಾಲಕಿಯು ಬುದ್ದಿಮಾಂದ್ಯೆಯಾಗಿದ್ದು ಆಕೆ ಉತ್ತರ ಪ್ರದೇಶದಿಂದ ಉಜ್ಜಯನಿಗೆ ಬಂದಿದ್ದಾಳೆ ಎಂದು ಹೇಳಲಾಗುತ್ತಿದೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಆದರೆ, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ, ಹೇಳುವುದಾದರೆ ಈ ಘಟನೆಯಿಂದ ಭಾರತೀಯ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕವೂ ಎದುರಾಗಿದೆ.












Click it and Unblock the Notifications