ಗುಜರಾತ್ ನಲ್ಲಿ ಬಿಜೆಪಿ ಸೇರಿದ ಮತ್ತಿಬ್ಬರು ಕಾಂಗ್ರೆಸ್ ಶಾಸಕರು
ಗಾಂಧಿನಗರ, ಜುಲೈ 28: ರಾಜ್ಯಸಭೆ ಹಾಗೂ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಇರುವಾಗಲೇ ಗುಜರಾತ್ ನಲ್ಲಿ ಕಾಂಗ್ರೆಸ್ ಗೆ ಒಂದಾದ ಮೇಲೆ ಒಂದು ಆಘಾತವಾಗುತ್ತಿದೆ. ಪಕ್ಷದ ಮತ್ತಿಬ್ಬರು ಶಾಸಕರಾದ ಮನ್ ಸಿನ್ಹ್ ಚೌಹಾಣ್ ಹಾಗೂ ಛನಭಾಯ್ ಚೌಧರಿ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರಿಬ್ಬರು ಬಿಜೆಪಿ ಸೇರಲಿದ್ದು, ಇದು ಅಹ್ಮದ್ ಪಟೇಲ್ ಗೆ ಭಾರೀ ಹೊಡೆತವಾಗಿದೆ. ಗುರುವಾರ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಆ ಪೈಕಿ ಬಲ್ ವಂತ್ ಸಿನ್ಹಾ ರಜಪೂತ್ ಅವರನ್ನು ಬಿಜೆಪಿ ರಾಜ್ಯಸಭಾ ಸ್ಥಾನಕ್ಕೆ ಅಹ್ಮದ್ ಪಟೇಲ್ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ.

ಇನ್ನೂ ಕಾಂಗ್ರೆಸ್ ನ ಕೆಲ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೇಲ್ಮನೆಯ ಮೂರೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಬಲ್ ವಂತ್ ಸಿನ್ಹಾ ರಜಪೂತ್ ಗೆಲುವಿಗೆ ಅಗತ್ಯ ಇರುವ ಸಂಖ್ಯಾಬಲ ನಮಗಿದೆ ಎಂದು ವಘೇಲಾರ ಆಪ್ತ ಮಾಹಿತಿ ನೀಡಿದ್ದಾರೆ.
ಶಾಸಕರ ಪಕ್ಷಾಂತರದಿಂದ ನೆಹರೂ-ಗಾಂಧಿ ಕುಟುಂಬದ ಆಪ್ತ ಅಹ್ಮದ್ ಪಟೇಲ್ ರ ರಾಜ್ಯಸಭಾ ಆಯ್ಕೆ ತೀರಾ ಕಷ್ಟ ಆಗುವಂತೆ ಗೋಚರಿಸುತ್ತಿದೆ. ಐವರ ರಾಜೀನಾಮೆಯೊಂದಿಗೆ ಕಾಂಗ್ರೆಸ್ ನ ಸಂಖ್ಯಾ ಬಲ ಐವತ್ತೇಳರಿಂದ ಐವತ್ತೆರಡಕ್ಕೆ ಕುಸಿದಿದೆ.












Click it and Unblock the Notifications