ಕಾಂಗೋದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಶಾಂತಿಪಾಲನಾ ಪಡೆಯ ಇಬ್ಬರು ಯೋಧರು ಹುತಾತ್ಮ
ನವದೆಹಲಿ, ಜುಲೈ 27: ಮಧ್ಯ ಆಫ್ರಿಕಾದ ಕಾಂಗೋ ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಯೋಧರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಇನ್ನು ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ 50 ಜನರು ಗಾಯಗೊಂಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಖಚಿತಪಡಿಸಿದ್ದಾರೆ. ಯೋಧರನ್ನು ಕಳೆದುಕೊಂಡಿರುವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಜೈಶಂಕರ್, "ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಬಿಎಸ್‌ಎಫ್‌ನ ಇಬ್ಬರು ಭಾರತೀಯ ಶಾಂತಿಪಾಲಕರ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ. ಅವರು ಮೊನುಸ್ಕೋದ ಭಾಗವಾಗಿದ್ದರು. ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು" ಎಂದು ಒತ್ತಾಯಿಸಿದ್ದಾರೆ.
ಮೃತ ಬಿಎಸ್ಎಫ್ ಯೋಧರು ಹೆಡ್ ಕಾನ್‌ಸ್ಟೇಬಲ್ ಶ್ರೇಣಿಯಲ್ಲಿದ್ದರು. ರಾಜಸ್ಥಾನ ಮೂಲದವರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರು ಸೈನಿಕರು ಡಿಆರ್ ಕಾಂಗೋದಲ್ಲಿ ಯುನೈಟೆಡ್ ನೇಷನ್ಸ್ ಆರ್ಗನೈಸೇಶನ್ ಸ್ಟೆಬಿಲೈಸೇಶನ್ ಮಿಷನ್ (MONUSCO) ನ ಭಾಗವಾಗಿದ್ದರು.
ಕಾಂಗೋ ದೇಶದಲ್ಲಿ ವಿಶ್ವಸಂಸ್ಥೆಯ ಕಾರ್ಯಾಚರಣೆಯ ವಿರುದ್ಧ ಕಾಂಗೋದ ಪೂರ್ವ ನಗರವಾದ ಗೋಮಾದಲ್ಲಿ ಎರಡನೇ ದಿನದ ಪ್ರತಿಭಟನೆಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸಶಸ್ತ್ರ ಬಂಡುಕೋರರ ದೌರ್ಜನ್ಯಕ್ಕೆ ನಲುಗಿದ ಜನ
ಕಾಂಗೋದಲ್ಲಿ ನಾಗರಿಕ ಮತ್ತು ಭದ್ರತಾ ಸಮಸ್ಯೆಗಳು ಕಾಡುತ್ತಿವೆ. ಸಶಸ್ತ್ರ ಗುಂಪುಗಳು ಆಗಾಗ್ಗೆ ಸೈನಿಕರ ಮೇಲೆ ದಾಳಿ ಮಾಡುತ್ತಿರುತ್ತವೆ. ಅಮಾಯಕರನ್ನು ಕೊಲೆ ಮಾಡುವುದು, ಅತ್ಯಾಚಾರ ಮಾಡುವುದು ಸಶಸ್ತ್ರ ಬಂಡುಕೋರರ ದೌರ್ಜನ್ಯಕ್ಕೆ ಕಾಂಗೋ ಜನತೆ ನಲುಗಿದ್ದಾರೆ.
ಬಂಡುಕೋರರ ಅಟ್ಟಹಾಸ ತಡೆಯಲು ಕಾಂಗೋ ದೇಶದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳನ್ನು ನಿಯೋಜಿಸಲಾಗಿದೆ. ಬಂಡುಕೋರರು ಆಗಾಗ್ಗೆ ಸಾಮಾನ್ಯ ನಾಗರಿಕರ ಮೇಲೆ ದಾಳಿ ಮಾಡುವುದು ನಡೆಯುತ್ತದೆ. ಕೆಲವು ತಿಂಗಳಷ್ಟೇ ಮಹಿಳೆಯೊಬ್ಬರು ಕಾಂಗೋ ಬಂಡುಕೋರರು ಮನುಷ್ಯರ ಮಾಂಸ ತಿನ್ನಲು ಒತ್ತಾಯಿಸಿದ್ದರು ಎಂದು ಹೇಳಿಕೆ ನೀಡಿದ್ದರು.

ಸರ್ಕಾರದ ವಿರುದ್ಧ ಕಾಂಗೋದಲ್ಲಿ ಪ್ರತಿಭಟನೆ
ಪ್ರಜಾಸತ್ತಾತ್ಮಕ ಗಣರಾಜ್ಯವಾದ ಕಾಂಗೋದಲ್ಲಿ ಸಶಸ್ತ್ರ ಬಂಡುಕೋರ ಗುಂಪುಗಳ ದಾಳಿಗಳು ಹೆಚ್ಚಾಗುತ್ತಿವೆ. ಬಂಡುಕೋರರ ದಾಳಿಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಭಾರಿ ಪ್ರತಿಭಟನೆಗಳು ನಡೆಯುತ್ತಿವೆ.
"ಜುಲೈ 26 ರಂದು, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಬುಟೆಂಬೊದಲ್ಲಿ ನಿಯೋಜಿಸಲಾಗಿದ್ದ ಯುಎನ್ ಶಾಂತಿ ಪಾಲನಾ ಪಡೆಯ ಇಬ್ಬರು ಬಿಎಸ್‌ಎಫ್ ಸಿಬ್ಬಂದಿಗಳು ಹಿಂಸಾತ್ಮಕ ಸಶಸ್ತ್ರ ಪ್ರತಿಭಟನೆಯ ಸಮಯದಲ್ಲಿ ಮಾರಣಾಂತಿಕವಾಗಿ ಗಾಯಗೊಂಡು ಸಾವನ್ನಪ್ಪಿದರು." ಎಂದು ಗಡಿ ಪಡೆಯ ವಕ್ತಾರರು ತಿಳಿಸಿದ್ದಾರೆ.

ಏಕಾಏಕಿ ಹಿಂಸೆಗೆ ತಿರುಗಿದ ಪ್ರತಿಭಟನೆ
ಸ್ಥಳೀಯರು ಕಾಂಗೋದಾದ್ಯಂತ ಶಾಂತಿ ಪಾಲನಾ ಪಡೆಯ ವಿರುದ್ಧ ಪ್ರತಿಭಟನೆ ಮತ್ತು ಆಂದೋಲನಕ್ಕೆ ಕರೆ ನೀಡಿದ್ದಾರೆ. ಪ್ರತಿಭಟನಾಕಾರರು ಲೂಟಿ ಮತ್ತು ಆಸ್ತಿಗೆ ಬೆಂಕಿ ಹಚ್ಚುವುದರೊಂದಿಗೆ ಬೆನಿಯಿಂದ ಸುಮಾರು 350 ಕಿಮೀ ದೂರದಲ್ಲಿರುವ ಮತ್ತು ಶಾಂತಿ ಪಾಲನಾ ಪಡೆಯ ದೊಡ್ಡ ನೆಲೆಯಾಗಿರುವ ಗೋಮಾದಲ್ಲಿ ಪರಿಸ್ಥಿತಿ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ.
ಬಿಎಸ್‌ಎಫ್ ಪಡೆಗಳನ್ನು ನಿಯೋಜನೆ ಮಾಡಿರುವ ಬೆನಿ ಮತ್ತು ಬುಟೆಂಬೊ ಎರಡೂ ಪ್ರದೇಶಗಳಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಸೋಮವಾರ ಶಾಂತಿಯುತ ಪ್ರತಿಭಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಮಂಗಳವಾರ ಬುಟೆಂಬೊದಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದೆ. ಬಿಎಸ್‌ಎಫ್ ತುಕಡಿಗಳು ನೆಲೆಗೊಂಡಿರುವ ಮೊರೊಕೊ ರಾಪಿಡ್ ಡಿಪ್ಲಾಯ್‌ಮೆಂಟ್‌ನ ಶಿಬಿರವನ್ನು ಪ್ರತಿಭಟನಾಕಾರರು ಸುತ್ತುವರೆದಿದ್ದರು.

ಪ್ರತಿಭಟನಾಕಾರರ ಗುಂಪಿನಲ್ಲಿ ಶಸ್ತ್ರಸಜ್ಜಿತ ಬಂಡುಕೋರರು
ಕಾಂಗೋಲೀಸ್ ಪೋಲಿಸ್ (ಪಿಎನ್‌ಸಿ) ಮತ್ತು ಕಾಂಗೋಲೀಸ್ ಆರ್ಮಿ (ಎಫ್‌ಎಆರ್‌ಡಿಸಿ) ಪಡೆಗಳು ಆಗಮಿಸಿದವು ಆದರೆ 500 ಕ್ಕೂ ಹೆಚ್ಚು ಇದ್ದ ಪ್ರತಿಭಟನಾಕಾರರ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಿಎಸ್ಎಫ್ ಮತ್ತು ಇತರ ಭದ್ರತಾ ಪಡೆಗಳು ಗುಂಪನ್ನು ಚದುರಿಸಲು ಟಿಯರ್ ಗ್ಯಾರ್ ಮತ್ತು ಮದ್ದುಗುಂಡುಗಳನ್ನು ಹಾರಿಸಿದರು.
"ಜನಸಮೂಹವನ್ನು ಹಿಮ್ಮೆಟ್ಟಿಸಲಾಯಿತು, ಆದರೆ ಅವರು ಮತ್ತೆ ಜಮಾಯಿಸಿದರು. ಶಸ್ತ್ರಸಜ್ಜಿತ ಬಂಡುಕೋರರು ಪ್ರತಿಭಟನಾಕಾರ ಗುಂಪಿನಲ್ಲಿ ನುಸುಳಿದ್ದಾರೆ ಎಂಬ ವರದಿಗಳಿವೆ" ಎಂದು ಅಧಿಕಾರಿ ಹೇಳಿದರು.
ಶಾಂತಿ ಪಾಲನಾ ಪಡೆಯಲ್ಲಿ ಭಾರತೀಯ ಸೈನಿಕರೂ ಇದ್ದಾರೆ. ಜೊತೆಗೆ ವಿವಿಧ ದೇಶಗಳ ಸೈನಿಕರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದಸ್ಯ ರಾಷ್ಟ್ರಗಳಲ್ಲಿ ಭದ್ರತಾ ಸಮಸ್ಯೆ ಎದುರಾದಾಗ ವಿಶ್ವಸಂಸ್ಥೆಯು ಭದ್ರತೆಗಾಗಿ ಈ ಶಾಂತಿ ಪಾಲನಾ ಪಡೆಗಳನ್ನು ನಿಯೋಜಿಸುತ್ತದೆ.












Click it and Unblock the Notifications