ಗುಜರಾತ್ ವಿವಿಯಲ್ಲಿ ನಮಾಜ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ: ಇಬ್ಬರ ಬಂಧನ
ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ರಾತ್ರಿಯ ನಮಾಜ್ ಮಾಡುವಾಗ ಹಲವಾರು ವಿದೇಶಿ ವಿದ್ಯಾರ್ಥಿಗಳನ್ನು ಥಳಿಸಿ ಹಲ್ಲೆ ನಡೆಸಿದ ಆರೋಪಿಗಳನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಹಮದಾಬಾದ್ ಪೊಲೀಸರು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ ಮತ್ತು ಹಾಸ್ಟೆಲ್ ಕೊಠಡಿಗಳನ್ನು ಧ್ವಂಸ ಮಾಡಿದ ಆರೋಪದ ಮೇಲೆ ಅಪರಾಧ ವಿಭಾಗವು ಇಬ್ಬರನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದ್ದಾರೆ.

"ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್ ಗುಜರಾತ್ ವಿಶ್ವವಿದ್ಯಾಲಯದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಗುಜರಾತ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 16/03/2024 ರಂದು ನಡೆದ ಘಟನೆಯ ಆರೋಪಿಗಳನ್ನು ಬಂಧಿಸಿದೆ" ಎಂದು ಆರೋಪಿಯ ಫೋಟೋಗಳನ್ನು ಹಂಚಿಕೊಂಡಿದೆ.
ಏನಿದು ಹಲ್ಲೆ ಪ್ರಕರಣ?
ಶನಿವಾರ ತಡರಾತ್ರಿ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಐವರು ವಿದೇಶಿ ವಿದ್ಯಾರ್ಥಿಗಳು ತಾವು ತಂಗಿದ್ದ ಕೊಠಡಿಯಲ್ಲಿ ನಮಾಜ್ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿತ್ತು. 20ಕ್ಕಿಂತ ಹೆಚ್ಚಿನ ಜನರ ಗುಂಪು ಆವರಣಕ್ಕೆ ನುಗ್ಗಿ ಧಾರ್ಮಿಕ ಘೋಷಣೆಗಳನ್ನು ಕೂಗಿದ್ದರಿಂದ ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಐವರು ವಿದ್ಯಾರ್ಥಿಗಳು ಉಜ್ಬೇಕಿಸ್ತಾನ್, ಅಫ್ಘಾನಿಸ್ತಾನ್, ತಜಕಿಸ್ತಾನ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಿಂದ ಬಂದವರು. ಎ-ಬ್ಲಾಕ್ ಹಾಸ್ಟೆಲ್‌ನಲ್ಲಿ ನಡೆದ ಘಟನೆಯ ನಂತರ ಶ್ರೀಲಂಕಾದಿಂದ ಮತ್ತು ಇನ್ನೊಬ್ಬ ತಜಕಿಸ್ತಾನ್‌ನಿಂದ ಬಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಿಷಯವನ್ನು ತಿಳಿಯುತ್ತಿದ್ದಂತೆ ಪೊಲೀಸರು 20-25 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಘಟನೆಯ ತನಿಖೆಗಾಗಿ ಒಂಬತ್ತು ತಂಡಗಳನ್ನು ರಚಿಸಿದ್ದಾರೆ.
"ಸುಮಾರು 20-25 ಜನರು ಹಾಸ್ಟೆಲ್ ಆವರಣಕ್ಕೆ ಪ್ರವೇಶಿಸಿದರು ಮತ್ತು ಅಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮಸೀದಿಯಲ್ಲಿ ನಮಾಜ್ ಮಾಡುತ್ತಿರುವುದನ್ನು ವಿರೋಧಿಸಿದರು. ಅವರು ಈ ವಿಚಾರದ ಬಗ್ಗೆ ಜಗಳವಾಡಿದರು, ಅವರ ಮೇಲೆ ಹಲ್ಲೆ ನಡೆಸಿದರು ಮತ್ತು ಕಲ್ಲು ತೂರಿದರು. ಅವರು ಅವರ ಕೊಠಡಿಗಳನ್ನೂ ಧ್ವಂಸಗೊಳಿಸಿದರು," ಎಂದು ಪೊಲೀಸ್ ಆಯುಕ್ತರು ಜಿಎಸ್ ಮಲಿಕ್ ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ವಿಷಯವನ್ನು ಕೈಗೆತ್ತಿಕೊಂಡಿದೆ ಮತ್ತು ಗುಜರಾತ್ ಸರ್ಕಾರವು ಹಿಂಸಾಚಾರದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವಕ್ತಾರ ರಣಧೀರ್ ಜೈಸ್ವಾಲ್ ಘಟನೆಯ ಕುರಿತು ಹೇಳಿಕೆ ನೀಡಿದ್ದಾರೆ.
"ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಹಿಂಸಾಚಾರದ ಘಟನೆ ನಡೆದಿದೆ. ದುಷ್ಕರ್ಮಿಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಘರ್ಷಣೆಯಲ್ಲಿ ಇಬ್ಬರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರನ್ನು ವೈದ್ಯಕೀಯ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಎಂಇಎ ಗುಜರಾತ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ." ಎಂದು ಹೇಳಿದ್ದಾರೆ.











Click it and Unblock the Notifications