ಫೆ. 25ಕ್ಕೆ ಸದನ ಸಮಿತಿ ಮುಂದೆ ಹಾಜರಾಗಲು ಟ್ವಿಟ್ಟರ್ ಸಿಇಒಗೆ ನೋಟಿಸ್
ಅಮೆರಿಕ ಮೂಲದ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನ ಸಿಇಒ ಜಾಕ್ ಡೋರ್ಸೆ ಫೆಬ್ರವರಿ 25ಕ್ಕೆ ಸಂಸದೀಯ ಸಮಿತಿ ಮುಂದೆ ಹಾಜರಾಗಬೇಕು. ಅವರ ಬದಲಿಗೆ ಬೇರೆ ಪ್ರತಿನಿಧಿಗಳ ವಾದವನ್ನು ಕೇಳಲು ಸಾಧ್ಯವಿಲ್ಲ. ಆದ್ದರಿಂದ ಸದನ ಸಮಿತಿ ಮುಂದೆ ಫೆ. 25ಕ್ಕೆ ಹಾಜರಾಗಬೇಕು ಎಂದು ಹೇಳಲಾಗಿದೆ.
ತುಂಬ ಕಡಿಮೆ ಅವಧಿಯಲ್ಲಿ ತಮಗೆ ಸೂಚನೆ ನೀಡಿದ್ದರಿಂದ ತಾವು ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಿಲ್ಲ ಎಂದು ಇದಕ್ಕೂ ಮುನ್ನ ಡೋರ್ಸೆ ಹೇಳಿದ್ದರು. ಟ್ವಿಟ್ಟರ್ ನಲ್ಲಿ ಬಲಪಂಥೀಯ ವಿಚಾರಗಳ ವಿರುದ್ಧವಾದ ಧೋರಣೆ ಇದೆ ಎಂದು ದೂರುಗಳು ಬಂದಿದ್ದವು. ಅನುರಾಗ್ ಠಾಕೂರ್ ನೇತೃತ್ವದ ಸದನ ಸಮಿತಿಯು ಜಾಕ್ ಡೋರ್ಸೆಗೆ ಈ ಬಗ್ಗೆ ಅಭಿಪ್ರಾಯ ಕೇಳಿತ್ತು.
ಯೂಥ್ ಫಾರ್ ಸೋಷಿಯಲ್ ಮೀಡಿಯಾ ಡೆಮಾಕ್ರಸಿ ಎಂಬ ಬಲಪಂಥೀಯ ಗುಂಪೊಂದು ಈಚೆಗೆ ಪ್ರತಿಭಟನೆ ನಡೆಸಿತ್ತು. ಆಡಳಿತಾರೂಢ ಬಿಜೆಪಿ ಹಾಗೂ ಸರಕಾರದ ಬಗ್ಗೆ ಅನುಕಂಪ ಇರುವವರ ಖಾತೆಯನ್ನು ಟ್ವಿಟ್ಟರ್ ಅಮಾನತು ಮಾಡುತ್ತಿದೆ ಎಂದು ಆರೋಪ ಮಾಡಿತ್ತು.

ಸೋಮವಾರದಂದು ಸಭೆ ನಡೆಸಿದ್ದು, ಸಮಿತಿಯು ಟ್ವಿಟ್ಟರ್ ಪರವಾಗಿ ಬೇರೆ ಯಾರ ಜತೆಗೂ ಮಾತನಾಡಲು ಸಿದ್ಧವಿಲ್ಲ. ಇದು ಗಂಭೀರ ವಿಚಾರವಾದ್ದರಿಂದ ಸಿಇಒ ಖುದ್ದಾಗಿ ಫೆ. 25ಕ್ಕೆ ಸಮಿತಿ ಮುಂದೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಆದರೆ ಈ ಹೊಸ ದಿನಾಂಕದಂದು ಟ್ವಿಟ್ಟರ್ ನ ಸಿಇಒ ಅಥವಾ ಮುಖ್ಯಸ್ಥರು ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಖಾತ್ರಿ ಆಗಿಲ್ಲ.
3.5 ಕೋಟಿಯಷ್ಟು ಟ್ವಿಟ್ಟರ್ ಬಳಕೆದಾರರು ಇದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಟ್ವಿಟ್ಟರ್ ಮುಖ್ಯ ವೇದಿಕೆಯಂತಾಗಿದೆ. ಚುನಾವಣೆ ಆಯೋಗ ಕೂಡ ಟ್ವಿಟ್ಟರ್ ನಲ್ಲಿನ ಪೋಸ್ಟ್ ಗಳ ಬಗ್ಗೆ ಮತ್ತು ಅದರ ಪರಿಣಾಮಗಳ ಬಗ್ಗೆ ನಿಗಾ ವಹಿಸಿದೆ.












Click it and Unblock the Notifications