ಅಜೆಂಡಾ ಪ್ರೇರಿತ ಟಿವಿ ಮಾಧ್ಯಮಗಳಿಂದಾಗಿ ಸಮಾಜದಲ್ಲಿ ಒಡಕು ಸೃಷ್ಟಿ: ಸುಪ್ರೀಂ ಕೋರ್ಟ್ ಹೇಳಿದ್ದೇನು?
ನವದೆಹಲಿ, ಜನವರಿ 14: ಸುದ್ದಿ ವಾಹಿನಿಗಳು ಸಮಾಜದಲ್ಲಿ ಒಡಕುಗಳನ್ನು ಸೃಷ್ಟಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಚಾಟಿ ಬೀಸಿದೆ.
ದೇಶದಲ್ಲಿರುವ ಟಿವಿ ಮಾಧ್ಯಮಗಳು ಅಜೆಂಡಾ ಪ್ರೇರಿತ ಹಾಗೂ ಸಂವೇದನೆಗಳನ್ನು ಹೊಂದಿರದ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಹರಿಹಾಯ್ದಿದೆ.
ದೇಶದಲ್ಲಿ ಮುಕ್ತ ಹಾಗೂ ಸಮತೋಲಿತ ಪತ್ರಿಕಾ ಮಾಧ್ಯಮದ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಮಾಜದಲ್ಲಿ ಒಡಕು ಮೂಡಿಸುತ್ತಿರುವ ಕಾರ್ಯಕ್ರಮಗಳ ನಿರೂಪಕರನ್ನು ಪ್ರಸಾರದಿಂದ ತೆಗೆದುಹಾಕಬೇಕು ಎಂದು ತಿಳಿಸಿದೆ.
ಪತ್ರಕರ್ತ ಕುರ್ಬಾನ್ ಅಲಿ ಅವರ ಅರ್ಜಿ ಸೇರಿದಂತೆ ಹಲವಾರು ಅರ್ಜಿಗಳನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ಪೀಠವು, 'ವಾಹಿನಿಗಳು ಪರಸ್ಪರ ಪೈಪೋಟಿ ನಡೆಸುತ್ತಿವೆ. ವಿಷಯಗಳನ್ನು ಹೆಚ್ಚು ವರ್ಣರಂಜಿತವಾಗಿಸುತ್ತವೆ. ಅಜೆಂಡಾಗಳನ್ನು ಬಿತ್ತರಿಸುತ್ತವೆ ಹೇಳಿದೆ.
ಸುದ್ದಿ ವಾಹಿನಿಗಳು ಸಮಾಜದ ನಡುವೆ ಒಡಕುಗಳನ್ನು ಸೃಷ್ಟಿಸುತ್ತಿವೆ ಎಂದು ನ್ಯೂಸ್ ಬ್ರಾಡ್‌ಕಾಸ್ಟರ್‌ಗಳು ಮತ್ತು ಡಿಜಿಟಲ್ ಅಸೋಸಿಯೇಷನ್ ಪ್ರತಿನಿಧಿಸುವ ವಕೀಲರಿಗೆ ಪೀಠ ಹೇಳಿದೆ.

'ನೀವು ಎಷ್ಟು ಬಾರಿ ಆಂಕರ್‌ಗಳನ್ನು ತೆಗೆದುಹಾಕಿದ್ದೀರಿ? ನೀವು ಸಂದೇಶವನ್ನು ಕಳುಹಿಸುವ ರೀತಿಯಲ್ಲಿ ಆಂಕರ್‌ಗಳೊಂದಿಗೆ ವ್ಯವಹರಿಸಿದ್ದೀರಾ? ಅಂತಿಮವಾಗಿ ಕಾರ್ಯಕ್ರಮದ ವಿಷಯವನ್ನು ಯಾರು ನಿಯಂತ್ರಿಸುತ್ತಾರೆ ಎಂಬುದನ್ನು ನೋಡಿ...ಆಂಕರ್ ಅಥವಾ ಸಂಪಾದಕ? ಆಂಕರ್‌ಗಳೇ ಇಲ್ಲಿ ಸಮಸ್ಯೆಯಾಗಿದ್ದಾರೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ನಾವು ಭಾರತದಲ್ಲಿ ಮುಕ್ತ ಮತ್ತು ಸಮತೋಲಿತ ಪತ್ರಿಕಾ ಮಾಧ್ಯಮವನ್ನು ಬಯಸುತ್ತೇವೆ' ಎಂದು ಪೀಠ ತಿಳಿಸಿದೆ.
ಕೇಂದ್ರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರು, ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಗೆ ಪ್ರತ್ಯೇಕ ತಿದ್ದುಪಡಿಯನ್ನು ಸರ್ಕಾರ ಆಲೋಚಿಸುತ್ತಿದೆ ಎಂದು ಹೇಳಿದರು.
'ನಾವು ನಿಜವಾಗಿಯೂ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವೇ? ನೋಡುಗರರು ಈ ರೀತಿಯ ಮಾಹಿತಿಯನ್ನು ಸ್ವೀಕರಿಸಿ ವಿಶ್ಲೇಷಿಸುವಷ್ಟು ಪ್ರಬುದ್ಧರಾಗಿದ್ದಾರೆಯೇ? ಅಜೆಂಡಾಗಳನ್ನು ಮಾಧ್ಯಮಗಳಲ್ಲಿ ಚಲಾಯಿಸಬಾರದು. ನೀವು ನಿಜವಾಗಿಯೂ ಜನರ ಸೇವೆ ಮಾಡುತ್ತಿದ್ದಾರಾ ಎಂಬುದಾಗಿ ಯೋಚಿಸಿ' ಎಂದು ಮಾಧ್ಯಮಗಳ ಮುಖ್ಯಸ್ಥರಿಗೆ ಪೀಠ ಹೇಳಿದೆ.

'ನಾವು ಯಾರನ್ನೂ ಅವಹೇಳನ ಮಾಡಬಾರದು. ಪ್ರತಿಯೊಬ್ಬರಿಗೂ ಘನತೆಯ ಹಕ್ಕಿದೆ. ಈಗೀನ ಸಮಾಜದಲ್ಲಿ ಮಾಧ್ಯಮದವರು ಶಕ್ತಿಯುತ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅವರು ಹೇಳುತ್ತಿರುವುದು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು' ಎಂದು ನ್ಯಾಯಾಲಯ ಚಾಟಿ ಬೀಸಿದೆ.
ಅಪರಾಧಿಗಳ ಧರ್ಮವನ್ನು ನೋಡದೆ ದ್ವೇಷದ ಭಾಷಣದ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ಕಳೆದ ವರ್ಷ ಪೊಲೀಸರಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ದ್ವೇಷ ಭಾಷಣಗಳನ್ನು ಮಾಡಲಾಗಿತ್ತು.












Click it and Unblock the Notifications