Jammu & Kashmir: ಭಾರತದ ಜೊತೆ ಮತ್ತೊಮ್ಮೆ ಟರ್ಕಿ ಅಧ್ಯಕ್ಷರ ಕಿರಿಕ್!
ಅದೆಷ್ಟು ಬುದ್ಧಿ ಹೇಳಿದರೂ ಟರ್ಕಿ ಮಾತ್ರ ಭಾರತದ ವಿಚಾರದಲ್ಲಿ ಕಿರಿಕ್ ನಿಲ್ಲಿಸುತ್ತಿಲ್ಲ. ಈ ಮೊದಲು ಹಲವು ಬಾರಿ ಟರ್ಕಿ ಭಾರತದ ವಿಚಾರದಲ್ಲಿ ಮೂಗು ತೂರಿಸಿ ಸರಿಯಾಗೇ ಉತ್ತರ ಪಡೆದಿದೆ. ಇಷ್ಟೆಲ್ಲಾ ನಡೆದ ಮೇಲೂ ಸುಮ್ಮನೆ ಕೂರದ ಟರ್ಕಿ ಅಧ್ಯಕ್ಷರು ಇಂದು ಮತ್ತೆ ವಿಶ್ವಸಂಸ್ಥೆಯಲ್ಲಿ ಭಾರತದ ಕಿರೀಟ ಕಾಶ್ಮೀರದ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ.
ಹೌದು, ವಿಶ್ವಸಂಸ್ಥೆ ಸಾಮಾನ್ಯ ಸಭೆಯ 78ನೇ ಅಧಿವೇಶನದ ಚರ್ಚೆ ವೇಳೆ ಟರ್ಕಿ ಅಧ್ಯಕ್ಷರು ಇಂತಹ ಕಿರಿಕ್ ತೆಗೆದಿದ್ದಾರೆ. ಇದಕ್ಕೂ ಮೊದಲು ಕೂಡ ಹಲವು ಬಾರಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಟರ್ಕಿ ಇಂಥದ್ದೇ ಕೆಲಸ ಮಾಡಿತ್ತು. ಆಗ ಭಾರತ ಕೂಡ ಟರ್ಕಿಗೆ ಸರಿಯಾದ ಉತ್ತರ ನೀಡಿತ್ತು. ಇಷ್ಟೆಲ್ಲಾ ನಡೆದ್ರು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಸೈಲೆಂಟ್ ಆಗುತ್ತಿಲ್ಲ. ಇಂದು ಕೂಡ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಮತ್ತೆ ಭಾರತ & ಟರ್ಕಿ ಸಂಬಂಧಕ್ಕೆ ಕಿಚ್ಚು ಹಚ್ಚಿದ್ದಾರೆ.

ಟರ್ಕಿ ಅಧ್ಯಕ್ಷರ ಕಾಶ್ಮೀರ ಕಿರಿಕ್
ಇನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯ 78ನೇ ಅಧಿವೇಶನದ ಚರ್ಚೆ ವೇಳೆ ಮಾತನಾಡಿರುವ ಟರ್ಕಿ ಅಧ್ಯಕ್ಷರು, ಭಾರತ & ಪಾಕಿಸ್ತಾನ ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಂಡ್ರೆ ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಆಗುತ್ತೆ. ಹಾಗೇ ಇದು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದಿದ್ದಾರೆ. ಅಲ್ಲದೆ ಈ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಕ್ಕೆ ನಾವು ಅಂದ್ರೆ, ಟರ್ಕಿಯು ಬೆಂಬಲ ನೀಡುತ್ತದೆ ಎನ್ನುವ ಮೂಲಕ ಮತ್ತೊಮ್ಮೆ ಭಾರತದ ಆಂತರಿಕ ವಿಚಾರದಲ್ಲಿ ಟರ್ಕಿ ಅಧ್ಯಕ್ಷರ ಎಂಟ್ರಿಯಾಗಿದೆ.
ಭದ್ರತಾ ಮಂಡಳಿಯಲ್ಲಿ ಭಾರತದ ಪಾತ್ರ
ಹಾಗೇ ತಮ್ಮ ಮಾತು ಮುಂದುವರಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಮಹತ್ವದ ಪಾತ್ರ ವಹಿಸಿದೆ ಎಂಬುದು ಹೆಮ್ಮೆಯ ವಿಚಾರ. ಈಗಿರುವ 5 ಕಾಯಂ ಸದಸ್ಯ ರಾಷ್ಟ್ರಗಳು ಅಲ್ಲದೆ 15 ತಾತ್ಕಾಲಿಕ ಸದಸ್ಯ ರಾಷ್ಟ್ರಗಳನ್ನ ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳನ್ನಾಗಿ ಮಾಡುವುದಕ್ಕೆ ನಮ್ಮ ಬೆಂಬಲವಿದೆ ಎಂದಿದ್ದಾರೆ. ಈ ಮೂಲಕ ಭದ್ರತಾ ಮಂಡಳಿ ವಿಸ್ತರಣೆಗೂ ಟರ್ಕಿ ಒತ್ತಾಯ ಮಾಡಿದೆ.

ಜಗತ್ತು ದೊಡ್ಡದಾಗಿದೆ ಎಂದ ಟರ್ಕಿ
ಹಾಗೇ ಭದ್ರತಾ ಮಂಡಳಿ ವಿಸ್ತರಣೆ ಏಕೆ ಅಗತ್ಯ? ಎಂಬುದನ್ನೂ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ. 15 ತಾತ್ಕಾಲಿಕ ಸದಸ್ಯ ದೇಶಗಳನ್ನ ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳನ್ನಾಗಿ ಮಾಡಬೇಕು. ಅವೆಲ್ಲವು ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾಗಬೇಕು. ಜಗತ್ತು ದೊಡ್ಡದಾಗಿದ್ದು, ಕೇವಲ 5 ರಾಷ್ಟ್ರಗಳು ಮಾತ್ರ ಕಾಯಂ ಸದಸ್ಯತ್ವ ಪಡೆಯುವುದು ಸರಿಯಲ್ಲ ಎಂದು ಟರ್ಕಿ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ.
ಭಾರತಕ್ಕೂ ಸಿಗುತ್ತಾ ಮಂಡಳಿ ಸ್ಥಾನ?
ಸದ್ಯ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕೇವಲ 5 ದೇಶಕ್ಕೆ ಅವಕಾಶ ಇದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ರಷ್ಯಾ ಈ ಮಂಡಳಿಯಲ್ಲಿ ಸ್ಥಾನ ಪಡೆದಿವೆ. ಭಾರತಕ್ಕೂ ಭದ್ರತಾ ಮಂಡಳಿಯಲ್ಲಿ ಸ್ಥಾನ ಸಿಗಬೇಕು ಎಂಬ ಒತ್ತಾಯ ಮೊದಲಿನಿಂದ ಕೇಳಿಬರುತ್ತಿದೆ. ಅಲ್ಲದೆ ಭಾರತದ ಪರ ಅನೇಕ ದೇಶಗಳು ವಾದ ಮಂಡಿಸುತ್ತಿವೆ. ಇಷ್ಟಾದರೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನ ಇನ್ನೂ ಭಾರತಕ್ಕೆ ಸಿಕ್ಕಿಲ್ಲ. ಹೀಗಾಗಿ ಭದ್ರತಾ ಮಂಡಳಿಯು ಕೆಲವೇ ರಾಷ್ಟ್ರಗಳ ಕೈಯಲ್ಲಿ ಸಿಲುಕಿದೆ ಎಂಬ ಆರೋಪವೂ ಇದೆ.
ಒಟ್ನಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಶ್ಮೀರ ವಿಚಾರ ಮತ್ತೊಮ್ಮೆ ಪ್ರಸ್ತಾಪವಾಗಿದ್ದು, ಈ ಬಾರಿ ಟರ್ಕಿ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಲು ಯತ್ನಿಸಿದೆ. ಈ ಕುರಿತು ಭಾರತದ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಏಕೆಂದರೆ ಈ ಹಿಂದೆ ಕೂಡ ಭಾರತದ ಆಂತರಿಕ ವಿಚಾರದಲ್ಲಿ ಟರ್ಕಿ ಹೀಗೆ ಮೂಗು ತೂರಿಸಿದ್ದಾಗ ಭಾರತ ಸೂಕ್ತವಾದ ಉತ್ತರ ನೀಡಿತ್ತು. ಈಗಲೂ ಅದೇ ಖಡಕ್ ರಿಯಾಕ್ಷನ್ ಬರುವ ನಿರೀಕ್ಷೆ ಇದೆ.












Click it and Unblock the Notifications