Train Accident: ರೈಲು ಪ್ರಯಾಣಿಕರಿಗೆ ಹೈಟೆಕ್ ಸುರಕ್ಷತೆ: ವಾರ್ಷಿಕ ಅಪಘಾತಗಳ ಸಂಖ್ಯೆ 11ಕ್ಕೆ ಇಳಿಕೆ
ಬೆಂಗಳೂರು: ಭಾರತೀಯ ರೈಲ್ವೆಯು (Indian Railways) ಸುರಕ್ಷತಾ ಪ್ರದರ್ಶನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ದೇಶಿಯವಾಗಿ ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾದ 'ಕವಚ' (Kavacha) ಅಳವಡಿಕೆಯಿಂದ ರೈಲು ಅಪಘಾತಗಳು ತಗ್ಗಿವೆ. ಪ್ರತಿ ವರ್ಷಕ್ಕೆ 171 ಅಪಾಘತಗಳು ಇನ್ನು ಎರಡಂಕಿಗೆ ಬಂದು ನಿಂತಿದೆ ಎಂದು ರೈಲ್ವೆ ಇಲಾಖೆಯು ಅಧಿಕೃತ ಮಾಹಿತಿ ನೀಡಿದೆ.
ಭಾರತೀಯ ರೈಲ್ವೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2004-14ರ ಅವಧಿಯಲ್ಲಿ ಒಟ್ಟು 1,711 ರೈಲು ಅಪಘಾತಗಳು ಸಂಭವಿಸಿದ್ದವು. ಅಂದರೆ ವರ್ಷಕ್ಕೆ ಸರಾಸರಿ 171 ಅಪಘಾತಗಳು. ಇವುಗಳ ಸಂಖ್ಯೆಯು 2024-25ರಲ್ಲಿ 31ಕ್ಕೆ ಇಳಿಕೆಯಾಗಿದೆ. 2025-26ರಲ್ಲಿ (ನವೆಂಬರ್ 2025ರವರೆಗೆ) ಇನ್ನಷ್ಟು ಇಳಿಕೆಯಾಗಿ 11ಕ್ಕೆ ತಲುಪಿರುವುದು ಸಂತಸ ಸಂಗತಿ. ಇದಕ್ಕೆಲ್ಲ ಸ್ವಯಂ ಚಾಲಿಕ ಕವಚ ರಕ್ಷಣಾ ವ್ಯವಸ್ಥೆಯ ಅಳವಡಿಕೆ, ರೈಲ್ವೆ ಮೂಲಸೌಕರ್ಯ ಹೆಚ್ಚಿಸಿರುವುದು, ಪ್ರಯಾಣಿಕರು ಮತ್ತು ರೈಲು ಸೇವೆ ಇಲಾಖೆ ನೀಡಿರುವ ಆದ್ಯತೆಯೇ ಕಾರಣವಾಗಿದೆ.

ಭಾರತೀಯ ರೈಲ್ವೆಯ ಸುರಕ್ಷತಾ ಬಜೆಟ್‌ನಲ್ಲಿ 2013-14ರಲ್ಲಿ 39,463 ಕೋಟಿ ರೂಪಾಯಿ ನೀಡಲಾಗುತ್ತಿತ್ತು. ಅದನ್ನು 1.16 ಲಕ್ಷ ಕೋಟಿಗೆ ಏರಿಕೆ ಮಾಡಲಾಯಿತು. ಈ ಮೂಲಕ ರೈಲ್ವೆ ಜಾಲ ಅಭಿವೃದ್ಧಿ, ಕವಚದಂತಹ ಆಧುನಿಕ ತಂತ್ರಜ್ಞಾನ ಅಭಿವೃದ್ಧಿಗೆ, ಅಳವಡಿಕೆಗೆ ಸಹಾಯವಾಗಿದೆ. ಬಜೆಟ್ ಹೆಚ್ಚಳವು ಅಪಘಾತ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕವಚದಿಂದ ಅಪಘಾತ ತಡೆ ಹೇಗೆ?
'ಕವಚ' ಎಂಬುದು ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ 'ಸ್ವಯಂಚಾಲಿತ ರೈಲು ರಕ್ಷಣೆ' ತಂತ್ರಜ್ಞಾನವಾಗಿದೆ. ಇದು ಲೋಕೋ ಪೈಲಟ್ (ರೈಲು ಚಾಲಕ) ನಿಗದಿಪಡಿಸಿದ ವೇಗದ ಮಿತಿಯೊಳಗೆ ರೈಲನ್ನು ಚಲಾಯಿಸಲು ಸಹಾಯ ಮಾಡುತ್ತದೆ. ಮಾನವ ತಪ್ಪುಗಳಿಂದ ಸಂಭವಿಸಿದ ಸಂದರ್ಭದಲ್ಲಿ, ಇದು ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಹಾಕುತ್ತದೆ. ಕಠಿಣ ಸಂದರ್ಭಗಳಲ್ಲಿ ರೈಲಿನ ವೇಗ ನಿಯಂತ್ರಿಸುತ್ತದೆ. ಇನ್ನೂ ಪ್ರತಿಕೂಲ ಮತ್ತು ಹವಾಮಾನ ವೈಪರಿತ್ಯದ ಪರಿಸ್ಥಿತಿಗಳಲ್ಲೂ ರೈಲುಗಳ ಸುರಕ್ಷಿತ ಸಂಚಾರಕ್ಕೆ ಇದು ನೆರವಾಗುತ್ತದೆ. ಈ ನಿಟ್ಟಿನಲ್ಲಿ, 'ಕವಚ ಆವೃತ್ತಿ 4.0' ಅನ್ನು ಈಗಾಗಲೇ 738 ಮಾರ್ಗ ಕಿಲೋಮೀಟರ್‌ಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಅಪಘಾತಗಳ ಪ್ರಮಾಣ ಪರಿಣಾಮಕಾರಿಯಾಗಿ ಇಳಿಕೆ ಆಗಿದೆ. ಇನ್ನಷ್ಟು ಮಾರ್ಗದ ರೈಲುಗಳಲ್ಲಿ ಅಳವಡಿಸುವ ಕಾರ್ಯ ಮುಂದುವರಿದಿದೆ.
ಅಪಘಾತ ಪ್ರಮಾಣ ಶೇ.90-94ರಷ್ಟು ಇಳಿಕೆ
ಕೇಂದ್ರ ರೈಲ್ವೆ ಸಚಿವಾಲಯವು ವರ್ಷದಿಂದ ವರ್ಷಕ್ಕೆ ರೈಲು ಕ್ಷೇತ್ರ, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. 2014 ರಲ್ಲಿ 90 ಇದ್ದ ಸುರಕ್ಷತಾ ಸಾಧನಗಳು 2025 ರ ಹೊತ್ತಿಗೆ 25,939 ಕ್ಕೆ ಹೆಚ್ಚಿಸಿದೆ. ಈ ಮೂಲಕ ರೈಲ್ವೆಯು ದೊಡ್ಡ ಪ್ರಗತಿ ಸಾಧಿಸಿದೆ. ಇದೆಲ್ಲ ಅಂಕಿ ಸಂಖ್ಯೆ ನೋಡಿದರೆ ಮೇಲೆ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಅಪಘಾತ ಪ್ರಮಾಣ ಸುಮಾರು ಶೇಕಡಾ 90 ರಿಂದ 94ರಷ್ಟು ಇಳಿಕೆ ಆಗಿದೆ.
'ಕವಚ' ಅಳವಡಿಕೆ ವಿಸ್ತರಣೆ
ಕವಚ 4.0 ವ್ಯವಸ್ಥೆಯನ್ನು ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) 2024 ಜುಲೈನಲ್ಲಿ ಅನುಮೋದಿಸಿತು. ಅದನ್ನು ರೈಲಿನಲ್ಲಿ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಮುಂಬೈ ಮಾರ್ಗದ ಪಾಲ್ವಾಲ್-ಮಥುರಾ-ಕೋಟಾ-ನಾಗ್ಡಾ ವಿಭಾಗ (633 ರೂಟ್ ಕಿ.ಮೀ.) ಮತ್ತು ದೆಹಲಿ-ಹೌರಾ ಮಾರ್ಗದ ಹೌರಾ-ಬರ್ಧಮಾನ ವಿಭಾಗ (105 ರೂಟ್ ಕಿ.ಮೀ.) ಸೇರಿದಂತೆ ಒಟ್ಟು 738 ರೂಟ್ ಕಿ.ಮೀ.ಗೆ ಅಳವಡಿಸಲಾಗಿದೆ. ಭವಿಷ್ಯದಲ್ಲಿ ಈ ರಕ್ಷಾ ಕವಚವು 15,512 ಮಾರ್ಗಗಳಿಗೆ ವಿಸ್ತರಣೆ ಆಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications