ರಾಷ್ಟ್ರೀಯ ಮಾತ್ರವಲ್ಲ ಇನ್ನು ಮುಂದೆ ರಾಜ್ಯ ಹೆದ್ದಾರಿಗಳಿಗೂ ಟೋಲ್
ತಿರುವನಂತಪುರ, ಫೆಬ್ರವರಿ 06: ಹೆದ್ದಾರಿಗಳಲ್ಲಿ ಸಂಚಾರ ನಡೆಸುವ ವಾಹನ ಸವಾರರು ಟೋಲ್ ಶುಲ್ಕದ ಕುರಿತು ಅಪಸ್ವರ ಎತ್ತುತ್ತಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾರ್ಗಸೂಚಿ ಅನ್ವಯ ಟೋಲ್ ಸಂಗ್ರಹ ಮಾಡಲಾಗುತ್ತದೆ. ಆದರೆ ಇನ್ನು ಮುಂದೆ ರಾಜ್ಯ ಹೆದ್ದಾರಿಗಳಲ್ಲಿಯೂ ಟೋಲ್ ಶುಲ್ಕವನ್ನು ಪಾವತಿಸಬೇಕಾಗಬಹುದು.
ಸದ್ಯ ಕರ್ನಾಟಕದ ಪಕ್ಕದ ಕೇರಳ ರಾಜ್ಯ ಈ ಮಾದರಿ ಟೋಲ್ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಮಾಹಿತಿಗಳ ಪ್ರಕಾರ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ ಅಭಿವೃದ್ಧಿಪಡಿಸಿರುವ ರಾಜ್ಯ ಹೆದ್ದಾರಿಗಳಲ್ಲಿಯೂ ಟೋಲ್ ಪಾವತಿಸಬೇಕಿದೆ. ಈ ಮಂಡಳಿ ರಸ್ತೆಯನ್ನು ನಿರ್ಮಾಣ ಮಾಡಿ, ನಿರ್ವಹಣೆ ಮಾಡುತ್ತಿದೆ.

ಆದರೆ ಈ ರಾಜ್ಯ ಹೆದ್ದಾರಿಗಳಲ್ಲಿ ಸಾಂಪ್ರದಾಯಿಕ ಮಾದರಿ ಟೋಲ್ ಬೂತ್‌ಗಳು ಇರುವುದಿಲ್ಲ. ಎಲ್ಲಾ ವ್ಯವಸ್ಥೆ ಆನ್‌ಲೈನ್ ಮಾಡಲಾಗುತ್ತದೆ. ಕೃತಕ ಬುದ್ಧಿಮತ್ತೆ ಕ್ಯಾಮರಾಗಳು ವಾಹನಗಳ ಮೇಲೆ ಕಣ್ಗಾವಲು ಇಡುತ್ತವೆ, ಫಾಸ್ಟ್‌ಟ್ಯಾಗ್ ಮಾದರಿಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರ ನಡೆಸಿದಾಗ ಟೋಲ್ ಶುಲ್ಕ ಕಡಿತವಾಗಲಿದೆ.
ಆದಾಯ ಸಂಗ್ರಹಕ್ಕೆ ಕ್ರಮ: ರಾಜ್ಯ ಸರ್ಕಾರಕ್ಕೆ ಆದಾಯ ಸಂಗ್ರಹ ಮಾಡಲು ರಾಜ್ಯ ಸರ್ಕಾರ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡಲು ಮುಂದಾಗಿದೆ. ಈ ಮಾದರಿಯಲ್ಲಿ ಟೋಲ್ ಸಂಗ್ರಹ ಮಾಡಬಹುದು ಎಂದು ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ಆದ್ದರಿಂದ ಸರ್ಕಾರ ಈ ಕುರಿತು ಚಿಂತನೆ ಆರಂಭಿಸಿದೆ.
ಸುಮಾರು 50 ಕೋಟಿ ರೂ. ವೆಚ್ಚವನ್ನು ಮಾಡಿ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣಾ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ, ಮಾರ್ಗಸೂಚಿಗ ಅನ್ವಯವೇ ಟೋಲ್ ಸಂಗ್ರಹ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇರಳ ರಾಜ್ಯದ ವಿವಿಧ ಮೂಲ ಸೌಕರ್ಯ ಯೋಜನೆಗಳಿಗೆ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ ಹಣಕಾಸು ನೆರವು ನೀಡುತ್ತದೆ. ಈ ನೆರವು ಸಾಲದ ರೂಪದಲ್ಲಿ ಇರುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ರಾಜ್ಯ ಸರ್ಕಾರ ಈ ಸಾಲವನ್ನು ತೀರಿಸಲು ತನ್ನ ವೆಚ್ಚದಲ್ಲಿ ಅನುದಾನ ಮೀಸಲಿಡಬೇಕಾಗುತ್ತದೆ.
ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡುವ ಮೂಲಕ ಹೇಗೆ ಆದಾಯ ಸಂಗ್ರಹ ಮಾಡಬಹುದು? ಎಂದು ಈಗಾಗಲೇ ಕಾನೂನು ನಿಯಮ ರೂಪಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಶೀಘ್ರದಲ್ಲೇ ರಾಜ್ಯ ಸರ್ಕಾರ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಅದರಲ್ಲಿ ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.
ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಸಂಗ್ರಹದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ಇದಕ್ಕಾಗಿ ವಾಹನ ಮಾಲೀಕರಿಗಾಗಿ ಅದರಲ್ಲೂ ಕಾರುಗಳ ಮಾಲೀಕರನ್ನು ಗಮನದಲ್ಲಿಟ್ಟುಕೊಂಡು ವಾರ್ಷಿಕ ಮತ್ತು ಜೀವಿತಾವಧಿ ಪಾಸುಗಳನ್ನು ಪರಿಚಯಿಸಲು ಸಚಿವಾಲಯ ಚಿಂತನೆ ನಡೆಸುತ್ತಿದೆ.
ಒಂದು ಬಾರಿ ಹಣ ಪಾವತಿಸುವ ಮೂಲಕ ವಾರ್ಷಿಕ ಟೋಲ್ ಪಾಸುಗಳನ್ನು ಪಡೆಯಬಹುದು. ವಾರ್ಷಿಕ ಪಾಸು, ಜೀವಿತಾವಧಿ ಪಾಸು (15 ವರ್ಷ) ಎಂದು ವಿಭಾಗ ಮಾಡಲಾಗಿದ್ದು, ವಾರ್ಷಿಕ ಪಾಸಿನ ದರ 3000 ರೂ.ಗಳು ಮತ್ತು ಜೀವಿತಾವಧಿ ಪಾಸುಗಳ ದರಗಳು 30,000 ಎಂದು ನಿಗದಿ ಮಾಡಲಾಗಿದೆ. ಆದರೆ ಈ ಪ್ರಸ್ತಾಪ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಅಂತಿಮ ಒಪ್ಪಿಗೆ ಸಿಕ್ಕಿಲ್ಲ.












Click it and Unblock the Notifications