Sabarimala: ಶಬರಿಮಲೆಯಲ್ಲಿ ತಿರುಪತಿ ಮಾದರಿಯ ಸರತಿ ಸಾಲು ವ್ಯವಸ್ಥೆ...
ಶಬರಿಮಲೆಯ ಸೀಸನ್ ಆರಂಭವಾಗುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಗಂಟೆಗಳ ಬಳಿಕವೂ ಅಯ್ಯಪ್ಪನ ದರ್ಶನ ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಬರಿಮಲೆಯಲ್ಲಿ ತಿರುಪತಿ ಮಾದರಿಯ ಸರತಿ ಸಾಲು ವ್ಯವಸ್ಥೆ ಮಾಡಲಾಗಿದೆ.
ತಿರುಪತಿ ಮಾದರಿಯಲ್ಲಿ ಶಬರಿಮಲೆಯದಲ್ಲೂ ಭಕ್ತರಿಗಾಗಿ ಭಾನುವಾರ ಮಧ್ಯಾಹ್ನದಿಂದ ನಾಲ್ಕು ಗಂಟೆಗಳ ಕಾಲ ಪ್ರಾಯೋಗಿಕವಾಗಿ ಸರತಿ ಸಾಲು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮಿಚುವಾಂಗ್ ಚಂಡಮಾರುತ ಪರಿಣಾಮ ಶಬರಿಮಲೆಯದಲ್ಲೂ ಎಡೆಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಶಬರಿಮಲೆಯಲ್ಲಿ ಭಕ್ತರ ನೂಕುನುಗ್ಗಲು ಉಂಟಾಗಿದ್ದು, ಭಕ್ತರ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸರತಿ ಸಾಲು ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ದೇವಸ್ಥಾನ ಆಡಳಿತ ಮಂಡಳಿ ತೀರ್ಮಾನಿಸಿದೆ. ಮರಕೂಟಂ ಮತ್ತು ಸಾರಂಕುತಿ ನಡುವೆ ಮೂರು ಸರತಿ ಸಾಲು ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. ಈ ಸಂಕೀರ್ಣಗಳಲ್ಲಿ ಯಾತ್ರಾರ್ಥಿಗಳನ್ನು ನಿಯಂತ್ರಿಸಲಾಗಿದೆ. ಇವುಗಳ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ. ಸರತಿ ಸಾಲು ವ್ಯವಸ್ಥೆ ಯಶಸ್ವಿಯಾಗಿದ್ದು, ಯಾತ್ರಾರ್ಥಿಗಳ ಒಳಹರಿವು ಹೆಚ್ಚಿರುವ ದಿನಗಳಲ್ಲಿ ಇದೇ ವ್ಯವಸ್ಥೆ ಜಾರಿಯಾಗಲಿದೆ ಎಂದು ದೇವಸ್ವಂ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ವರ್ಚುವಲ್ ಕ್ಯೂ ಸೌಲಭ್ಯದ ಮೂಲಕ ಒಟ್ಟು 85,000 ವ್ಯಕ್ತಿಗಳು ದರ್ಶನಕ್ಕಾಗಿ ತಮ್ಮ ಸ್ಥಳವನ್ನು ಕಾಯ್ದಿರಿಸಿದ್ದಾರೆ. ಮೂರು ದಿನಗಳಲ್ಲಿ ಪ್ರತಿದಿನ 80,000 ಕ್ಕೂ ಹೆಚ್ಚು ಜನರು ದರ್ಶನ ಪಡೆದಿದ್ದಾರೆ. ಹೀಗಾಗಿ ನಡಪಂಥಲ್ (ಯಾತ್ರಾರ್ಥಿಗಳಿಗೆ ದೇಗುಲವನ್ನು ತಲುಪಲು ಮುಚ್ಚಿದ ಕಾರಿಡಾರ್) ಭಕ್ತರಿಂದ ತುಂಬಿರುವುದು ಕಂಡು ಬಂದಿದೆ. ಹೀಗೆ ಸೋಮವಾರ ದರ್ಶನಕ್ಕೆ ಒಟ್ಟು 89,996 ಮಂದಿ ಹಾಗೂ ಮಂಗಳವಾರಕ್ಕೆ 60,000 ಮಂದಿ ಹೆಸರು ಕಾಯ್ದಿರಿಸಿದ್ದಾರೆ.

ಸ್ಪಾಟ್ ಬುಕ್ಕಿಂಗ್ ಮಾಡಿ 10,000 ಜನರು ಆಗಮಿಸುವ ನಿರೀಕ್ಷೆಯಿರುವುದರಿಂದ ಸನ್ನಿಧಾನ ರಶ್ ಆಗುವ ಸಾಧ್ಯತೆ ಇದೆ. ಭಾನುವಾರ ಬೆಳಗ್ಗೆ ದರ್ಶನಕ್ಕಾಗಿ ಸರತಿ ಸಾಲು ಮರಕೂಟಂ ವರೆಗೆ ವಿಸ್ತರಿಸಿದ್ದು, ಯಾತ್ರಾರ್ಥಿಗಳು ದರ್ಶನ ಪಡೆಯಲು ಎಂಟು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು.
ಶಬರಿಮಲೆಯಲ್ಲಿ ಪೂಜಾ ಕಾರ್ಯಕ್ರಮಗಳ ವೇಳಾಪಟ್ಟಿ:
ಗರ್ಭಗುಡಿ ತೆರೆಯುವ ಸಮಯ: ಬೆಳಗ್ಗೆ 3 ಗಂಟೆಗೆ
ಅಭಿಷೇಕ: 3:30 ರಿಂದ 11 ರವರೆಗೆ.
ಕಲಶಾಭಿಷೇಕ: ಬೆಳಗ್ಗೆ 11:30
ಕಲಶಾಭಿಷೇಕ: ಮಧ್ಯಾಹ್ನ 12.
ಮಧ್ಯಾಹ್ನ 1 ಗಂಟೆಗೆ ಗರ್ಭಗುಡಿ ಮುಚ್ಚುವುದು
ಸಂಜೆ ಗರ್ಭಗುಡಿ ತೆರೆಯುವ ಸಮಯ: 4 ಗಂಟೆ
ಪುಷ್ಪಾಭಿಷೇಕ: ಸಂಜೆ 7ಕ್ಕೆ
ಹರಿವರಾಸನ: ರಾತ್ರಿ 10.50
ಗರ್ಭಗುಡಿ ಮುಚ್ಚುವ ಸಮಯ: ರಾತ್ರಿ 11 ಗಂಟೆ












Click it and Unblock the Notifications