Tirupati: ತಿರುಪತಿಯಲ್ಲಿ ಕಳೆಗಟ್ಟಿದ ನವರಾತ್ರಿ ಬ್ರಹ್ಮೋತ್ಸವ: ಹೆಲಿಕಾಪ್ಟರ್ ಜಾಯ್‌ರೈಡ್ ಆರಂಭ
ತಿರುಪತಿಯಲ್ಲಿ ನವರಾತ್ರಿಯ ಬ್ರಹ್ಮೋತ್ಸವ ಆರಂಭವಾಗಿದೆ. ಹೀಗಾಗಿ ನಿತ್ಯ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಟಿಟಿಡಿ ಅಧ್ಯಕ್ಷರು ತಿರುಪತಿಯಲ್ಲಿ ಹೆಲಿಕಾಪ್ಟರ್ ಜಾಯ್‌ರೈಡ್‌ಗಳನ್ನು ಪ್ರಾರಂಭಿಸಿದರು.
ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಶುಕ್ರವಾರ ದೇವಸ್ಥಾನ ನಗರವಾದ ತಿರುಪತಿಯಲ್ಲಿ ಹೆಲಿಕಾಪ್ಟರ್ ಜಾಯ್‌ರೈಡ್‌ಗೆ ಚಾಲನೆ ನೀಡಿದರು. ಚೆನ್ನೈ ಮೂಲದ ಏರೋ ಡಾನ್ ಚಾಪರ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್ ಇನ್ನುಮುಂದೆ ತಿರುಪತಿಯ ನಿವಾಸಿಗಳಿಗೆ ಮತ್ತು ಭೇಟಿ ನೀಡುವ ಭಕ್ತರಿಗೆ ಜಾಯ್‌ರೈಡ್ ಸೇವೆಗಳನ್ನು ನೀಡುತ್ತದೆ.

ಜೊತೆಗೆ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಏರ್ ಆಂಬ್ಯುಲೆನ್ಸ್ ಸೇವೆಗಳನ್ನು ಪಡೆಯಲು ಹೆಲಿಕಾಪ್ಟರ್ ಅನ್ನು ಬಳಸಲಾಗುತ್ತದೆ ಎಂದು ಟಿಟಿಡಿ ಮಂಡಳಿಯ ಸದಸ್ಯ ಮತ್ತು ಏರೋ ಡಾನ್ ಚಾಪರ್‌ನ ಸಲಹಾ ಸಮಿತಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸೆಲ್ವ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಹೆಲಿಕಾಪ್ಟರ್ ಜಾಯ್‌ರೈಡ್ ಆರಂಭವಾಗಿದ್ದು ತಿರುಪತಿಯಲ್ಲಿ ನವರಾತ್ರಿಯ ಹಬ್ಬದ ವಾತಾವರಣ ಮತ್ತಷ್ಟು ಕಳೆ ಕಟ್ಟಿದೆ. ಇದರಿಂದಾಗಿ ತಿರುಪತಿಯಲ್ಲಿ ಹೆಲಿ ರೈಡ್‌ಗೆ ಸಂಬಂಧಿಸಿದ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೆಂಬಲ ನೀಡಿದ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಚಂದ್ರಗಿರಿ ಶಾಸಕ ಚೇವಿರೆಡ್ಡಿ ಭಾಸ್ಕರ್ ರೆಡ್ಡಿ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಇದರ ಜೊತೆಗೆ ಹೆಲಿ-ರೈಡ್‌ಗಳನ್ನು ವಿವಿಧ ಸ್ಥಳಗಳಿಗೆ ವಿಸ್ತರಿಸಲು ಹೆಚ್ಚಿನ ಹೆಲಿಕಾಪ್ಟರ್‌ಗಳನ್ನು ಹಾಗೂ ಅವುಗಳ ನಿಲುಗಡೆಯ ಸ್ಥಳಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆದಿವೆ.
ಶುಕ್ರವಾರ ತಿರುಪತಿಯಲ್ಲಿ ನಡೆದ ಮೊದಲ ಹೆಲಿಕಾಪ್ಟರ್ ಜಾಯ್‌ರೈಡ್ ಉದ್ಘಾಟನಾ ಸಮಾರಂಭದಲ್ಲಿ ಚಂದ್ರಗಿರಿ ಶಾಸಕ ಚೇವಿರೆಡ್ಡಿ ಭಾಸ್ಕರ್ ರೆಡ್ಡಿ, ಉಪಮೇಯರ್ ಭೂಮನ ಅಭಿನಯ್ ರೆಡ್ಡಿ, ತಿರುಪತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ ಮೋಹಿತ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ತಿರುಪತಿಯಲ್ಲಿ ಅಕ್ಟೋಬರ್ 15 ರಿಂದ ನವರಾತ್ರಿ ಬ್ರಹ್ಮೋತ್ಸವ ಆರಂಭವಾಗಿದ್ದು ಅಕ್ಟೋಬರ್ 23 ರವರೆಗೆ ನಡೆಯಲಿದೆ. 9 ದಿನಗಳ ಕಾಲ ನಡೆಯಲಿರುವ ಈ ಬ್ರಹ್ಮೋತ್ಸವ ಇದೇ 23ರಂದು ಮುಕ್ತಾಯವಾಗಲಿದೆ. ಬ್ರಹ್ಮೋತ್ಸವದ ನಿಮಿತ್ತ ತಿರುಮಲವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
ಕಡಿಮೆ ಜನಸಂದಣಿ
ಹೀಗಾಗಿ ಅನೇಕ ಭಕ್ತರು ತಿರುಪತಿಗೆ ಭೇಟಿ ನೀಡುವ ಮೂಲಕ ತಿಮ್ಮಪ್ಪನ ಆಶೀರ್ವಾದ ಪಡೆಯುತ್ತಿದ್ದಾರೆ. ಬ್ರಹ್ಮೋತ್ಸವದ ನಿಮಿತ್ತ ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿಯ ಕಲಾವಿದರಿಂದ ನೃತ್ಯ ಪ್ರದರ್ಶನವೂ ನಡೆಯುತ್ತಿದೆ. ಅನೇಕ ಭಕ್ತರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೀಗ ತಿರುಮಲದಲ್ಲಿ ಶ್ರೀವಾರಿ ದರ್ಶನಕ್ಕೆ ಸದ್ಯ ಭಕ್ತರ ಸಂಖ್ಯೆ ಕಡಿಮೆಯಾಗಿದೆ.
ಭಕ್ತರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚು
ನವರಾತ್ರಿಯ ಸಮಯದಲ್ಲಿ ತಿರುಮಲಕ್ಕೆ ನಿತ್ಯವೂ ಭಕ್ತರ ದಂಡೇ ಇರುತ್ತದೆ. ಈ ಬಾರಿ ದಸರಾ ರಜೆಯೂ ಸೇರಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಭವಿಷ್ಯ ನುಡಿದಿದೆ. ಆದರೆ ದೇವಸ್ಥಾನದ ಭವಿಷ್ಯ ಈಗ ಸುಳ್ಳಾಗಿದೆ. ತಿರುಮಲದಲ್ಲಿ ಭಕ್ತರ ಸಂಖ್ಯೆ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ.
ಸರಿಯಾದ ಸಮಯ
ಬ್ರಹ್ಮೋತ್ಸವದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿರುವುದು ಅಚ್ಚರಿ ಮೂಡಿಸಿದೆ. ಜನಸಂದಣಿ ಕಡಿಮೆ ಇರುವ ಕಾರಣ ಶೀಘ್ರದಲ್ಲೇ ಉಚಿತ ನೇರ ದರ್ಶನದಲ್ಲಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ಇದೀಗ ಏಳು ಪರ್ವತಗಳ ದರ್ಶನ ಬಯಸುವ ಭಕ್ತರು ತಮ್ಮ ಪ್ರಯಾಣದ ಯೋಜನೆ ರೂಪಿಸಿಕೊಳ್ಳಬಹುದು.












Click it and Unblock the Notifications