Tirumala Laddu: ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್- ಇನ್ಮುಂದೆ ಎಷ್ಟು ಬೇಕಾದರೂ ಲಡ್ಡು ಖರೀದಿಸಿ ಎಂದ ಟಿಟಿಡಿ
ತಿರುಪತಿ ತಿರುಮಲ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿಯನ್ನು ನೀಡಿದೆ. ತಿರುಪತಿಗೆ ಬರುವ ಭಕ್ತರು ತಮಗೆ ಬೇಕಾದಷ್ಟು ಲಡ್ಡು ಪ್ರಸಾದವನ್ನು ಖರೀದಿ ಮಾಡಲು ಟಿಟಿಡಿ ಅವಕಾಶವನ್ನು ಕಲ್ಪಿಸಿದೆ. ಈ ನಿಯಮ ಜಾರಿಗೆ ತರುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಹೌದು... ಲಡ್ಡು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ನೈವೇದ್ಯವಾಗಿ ನೀಡಲಾಗುವ ಸಿಹಿಯಾಗಿದೆ. ತಿರುಪತಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಲಡ್ಡು ಪ್ರಸಾದ ತೆಗೆದುಕೊಳ್ಳುತ್ತಾರೆ. ತಿರುಪತಿ ಲಡ್ಡು ತಿಮ್ಮಪ್ಪನ ದರ್ಶನದಷ್ಟೇ ಪವಿತ್ರವೆಂದು ಪರಿಗಣಿಸಲಾಗುತ್ತದೆ.

ಈ ಹಿಂದೆ ತಿರುಪತಿಗೆ ಬರುವ ಭಕ್ತರಿಗೆ ತಲಾ ಎರಡು ಲಡ್ಡು ಖರೀದಿಸುವ ಅವಕಾಶವನ್ನು ನೀಡಲಾಗಿತ್ತು. ಈ ಸಮಯವನ್ನು ಬಳಸಿಕೊಂಡ ಮಧ್ಯವರ್ತಿಗಳು ಹೆಚ್ಚುವರಿ ಲಡ್ಡು ಪ್ರಸಾದವನ್ನು ಹೆಚ್ಚಿನ ಬೆಲೆಗೆ ನೀಡಿ ಲಾಭ ಪಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಾದ ಟಿಟಿಡಿ ಸೆ.1ರಿಂದ ಭಕ್ತಾದಿಗಳಿಗೆ ಅಗತ್ಯವಿರುವ ಲಡ್ಡುಗಳನ್ನು ಖರೀದಿಸಲು ಅವಕಾಶ ನೀಡಿದೆ.
ತಿರುಪತಿಯಲ್ಲಿ ಒಂದು ಲಡ್ಡುವಿನ ಬೆಲೆ 50 ರೂಪಾಯಿ. ಆದರೆ ಮಧ್ಯವರ್ತಿಗಳು ಹೆಚ್ಚಿನ ಬೆಲೆಯಲ್ಲಿ ಲಡ್ಡು ಮಾರಾಟ ಮಾಡುತ್ತಿರುವುದು ಟಿಟಿಡಿ ಗಮನಕ್ಕೆ ಬಂದಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ತಿರುಪತಿ ದೇವಸ್ಥಾನಕ್ಕೆ ದರ್ಶನ ಟಿಕೆಟ್‌ನೊಂದಿಗೆ ಬರುವ ಭಕ್ತರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಲಡ್ಡು ಪ್ರಸಾದವನ್ನು ನೀಡಲಾಗುತ್ತಿದೆ.

ಏಳು ಬೆಟ್ಟಗಳ ಒಡೆಯನ ದರ್ಶನ ಪಡೆಯದವರಿಗೆ ತಲಾ 2 ಲಡ್ಡುಗಳನ್ನು ಮಾತ್ರ ನೀಡಲಾಗುವುದು ಎಂದು ತಿರುಪತಿ ದೇವಸ್ಥಾನದ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ಆದರೆ ಈ ನಿಯಮವನ್ನು ಬದಿಗೊತ್ತಿ ತಿರುಪತಿ ದೇವಸ್ಥಾನದಲ್ಲಿ ಹೆಚ್ಚುವರಿ ಲಡ್ಡುಗಳು ಮಧ್ಯವರ್ತಿಗಳಿಗೆ ಮಾರಾಟ ಮಾಡಲಾಗಿದೆ. ನಿತ್ಯ 1 ಲಕ್ಷ ಲಾಡ್ಡುಗಳನ್ನು ಮಧ್ಯವರ್ತಿಗಳ ಮೂಲಕ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದದ್ದು ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಈಗ ಆಧಾರ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಇದಕ್ಕಾಗಿ ತಿರುಪತಿ ದೇವಸ್ಥಾನ ಹೊಸ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆದ ನಂತರ ಭಕ್ತರು ತಮ್ಮ ದರ್ಶನದ ಟಿಕೆಟ್ ತೋರಿಸಿದರೆ ಅನಿಯಮಿತ ಸಂಖ್ಯೆಯ ಲಡ್ಡು ಪ್ರಸಾದವನ್ನು 50 ರೂಪಾಯಿಯಲ್ಲಿ ಖರೀದಿಸಬಹುದು. ಅಲ್ಲದೆ ದರ್ಶನವಿಲ್ಲದೆ ಬರುವ ಭಕ್ತರಿಗೆ ಆಧಾರ್ ಆಧಾರದಲ್ಲಿ ತಲಾ 2 ಲಡ್ಡುಗಳನ್ನು ಮಾತ್ರ ನೀಡಲಾಗುವುದು. ಈ ಪ್ರಕ್ರಿಯೆಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಮಲಾ ರಾವ್ ತಿಳಿಸಿದರು. ಇದರಿಂದ ಲಡ್ಡು ಪ್ರಿಯರು ಸಂತಸಗೊಂಡಿದ್ದಾರೆ.
ಹೀಗಾಗಿ ತಿರುಪತಿಗೆ ಬರುವ ಭಕ್ತರಿಗೆ ಹೆಚ್ಚೆಚ್ಚು ಅನುಕೂಲವಾಗಿದೆ. ತಿರುಪತಿಗೆ ಬರುವ ಭಕ್ತರು ಲಡ್ಡು ಪ್ರಸಾದವನ್ನು ಹೆಚ್ಚು ಖರೀದಿಸಿ ಮನೆಗೆ, ಸಂಬಂಧಿಕರಿಗೆ, ಆಪ್ತರಿಗೆ ನೀಡುತ್ತಾರೆ. ಅಲ್ಲದೆ ಕೆಲವೊಮ್ಮೆ ಉಡುಗೊರೆಯಾಗಿಯೂ ಅದನ್ನು ನೀಡುತ್ತಾರೆ. ಇದೆಲ್ಲದಕ್ಕಾಗಿ ಹೆಚ್ಚಿನ ಲಡ್ಡು ಖರೀದಿ ಮಾಡುತ್ತಾರೆ. ಆದರೆ ತಿರುಪತಿಯಲ್ಲಿ ಎರಡು ಲಡ್ಡು ಮಾತ್ರ ಒಬ್ಬರು ಖರೀದಿ ಮಾಡಬೇಕು ಎನ್ನುವ ನಿಯಮದಿಂದಾಗಿ ಲಡ್ಡು ಖರೀದಿಗೆ ಕಷ್ಟವಾಗಿತ್ತು. ಆದರೀಗ ತಿರುಪತಿಗೆ ಬರುವ ಭಕ್ತರು ಎಷ್ಟು ಬೇಕಾದರೂ ಲಡ್ಡು ಖರೀದಿ ಮಾಡಬಹುದು ಎನ್ನುವ ನಿಯಮ ಭಕ್ತರಿಗೆ ಸಂತಸ ತಂದಿದೆ.












Click it and Unblock the Notifications