Tirupati-Tirumala: ತಿಮ್ಮಪ್ಪನ ಹುಂಡಿಗೆ ಬಿದ್ದ ಬೆಲೆಬಾಳುವ ಮೊಬೈಲ್, ವಾಚ್‌ಗಳು ನಿಮ್ಮದಾಗಬೇಕೆ? ಇಲ್ಲಿದೆ ಸುಲಭ ಮಾರ್ಗ!
ತಿರುಮಲ, ಜೂನ್. 22: ಅತ್ಯಂತ ಶ್ರೀಮಂತ ದೇಗುಲಗಳು ಯಾವುವು ಎಂಬ ಪ್ರಶ್ನೆ ಬಂದರೆ ತಟ್ಟನೆ ನೆನಪಿಗೆ ಬರುವುದು ತಿರುಪತಿ ತಿಮ್ಮಪ್ಪನ ಸನ್ನಿಧಾನ. ಕೋಟಿ ಕೋಟಿ ಒಡೆಯ.. ಬೆಟ್ಟಗಳಲ್ಲಿ ವಾಸಿಸುತ್ತಿರುವ ತಿರುಪತಿ ತಿಮ್ಮಪ್ಪನಿಗೆ ಕೋಟ್ಯಾಂತರ ಸಂಖ್ಯೆಯ ಭಕ್ತರಿದ್ದಾರೆ. ದೇಶ- ವಿದೇಶಗಳಿಂದ ಜನ ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ.
ತಿರುಮಲ ತಿರುಪತಿ ದೇವಸ್ಥಾನದ ಹುಂಡಿಗಳಲ್ಲಿ ಬರೀ ಹಣವೊಂದೆ ಬೀಳುವುದಿಲ್ಲ. ಚಿನ್ನ, ಬೆಳ್ಳಿ, ಅಭರಣಗಳು, ಮೊಬೈಲ್, ವಾಚ್‌ಗಳು ಸೇರಿ ಹಲವು ಬಗೆಯ ವಸ್ತುಗಳು ತಿಮ್ಮಪ್ಪನಿಗೆ ಕಾಣಿಕೆಯಾಗಿ ಹುಂಡಿಯನ್ನು ಸೇರುತ್ತವೆ. ಈ ಹುಂಡಿಯಲ್ಲಿನ ಬೆಲೆಬಾಳುವ ಮೊಬೈಲ್, ವಾಚ್‌ಗಳನ್ನು ಕೊಳ್ಳುವ ಭಕ್ತರಿಗೆ ಈ ಸುವರ್ಣಾವಕಾಶವಿದೆ.

ತಿಮ್ಮಪ್ಪನ ಹುಂಡಿಯ ವಾಚ್, ಮೊಬೈಲ್ ಹರಾಜು
ಹೌದು.. ದೇವರ ಹುಂಡಿ ಸೇರಿದ ಹಣ, ವಸ್ತು ದೇವರಿಗೆ ಸೇರಿದ್ದು ಎನ್ನುತ್ತಾರೆ. ಆದರೆ, ತಿಮ್ಮಪ್ಪನ ಹುಂಡಿಗೆ ಕಾಣಿಕೆಯಾಗಿ ಬಿದ್ದ ಕೈಗಡಿಯಾರಗಳು ಮತ್ತು ಮೊಬೈಲ್ ಫೋನ್‌ಗಳನ್ನು ನಿಮ್ಮ ಸ್ವಂತ ಮಾಡಿಕೊಳ್ಳಬಹುದು. ಏಕೆಂದರೆ ಈ ಬೆಲೆಬಾಳುವ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡುವುದಾಗಿ ತಿರುಮಲ ತಿರುಪತಿ ದೇವಸ್ಥಾನವು ಪ್ರಕಟಿಸಿದೆ.
ತಿರುಮಲ ಶ್ರೀವಾರಿ ದೇವಸ್ಥಾನ ಮತ್ತು ಇತರ ಸಂಯೋಜಿತ ದೇವಸ್ಥಾನಗಳಲ್ಲಿ ಶ್ರೀವಾರಿ ಹುಂಡಿ ಮೂಲಕ ಭಕ್ತರು ನೀಡಿದ ವಾಚ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ಜೂನ್ 24 ರಂದು ರಾಜ್ಯ ಸರ್ಕಾರದ ಖರೀದಿ ಪೋರ್ಟಲ್ ಮೂಲಕ ಇ-ಹರಾಜು ಮಾಡಲಾಗುತ್ತದೆ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿದೆ.
ಈ ಹರಾಜಿನಲ್ಲಿ ಟೈಟಾನ್, ಕ್ಯಾಸಿಯೊ, ಟೈಮೆಕ್ಸ್, ಆಲ್ವಿನ್, ಸೊನಾಟಾ, ಟೈಮ್‌ವೆಲ್, ಫಾಸ್ಟ್‌ಟ್ರಾಕ್ ಮತ್ತು ಇತರ ಕಂಪನಿಗಳ ಕೈಗಡಿಯಾರಗಳು ಇವೆ. ಅದೇ ರೀತಿ Vivo, Nokia, Karbonn, Samsung, Motorola, Oppo ಮತ್ತು ಇತರ ಕಂಪನಿಗಳ ಮೊಬೈಲ್ ಫೋನ್‌ಗಳು ಹಾರಾಜಿಗಿವೆ. ಒಟ್ಟು 14 ಹೊಸ / ಬಳಸಿದ / ಭಾಗಶಃ ಹಾನಿಗೊಳಗಾದ ವಾಚ್‌ಗಳು ಮತ್ತು 24 ಮೊಬೈಲ್ ಫೋನ್‌ಗಳನ್ನು ಇ-ಹರಾಜು ಮಾಡಲಾಗುತ್ತದೆ.

ಇತರ ವಿವರಗಳಿಗಾಗಿ ಟಿಟಿಡಿ ಮಾರ್ಕೆಟಿಂಗ್ ಕಚೇರಿ, ತಿರುಪತಿಯನ್ನು 0877-2264429 ರಲ್ಲಿ ಕೆಲಸದ ದಿನಗಳಲ್ಲಿ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗಾಗಿ ಟಿಟಿಡಿ ವೆಬ್‌ಸೈಟ್ www.tirumala.org ಅಥವಾ ರಾಜ್ಯ ಸರ್ಕಾರದ ಪೋರ್ಟಲ್ www.konugolu.ap.gov.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.












Click it and Unblock the Notifications