ಚಿರತೆ ತಿಂದ ಹುಲಿ: ಅಪರೂಪದ ದೃಶ್ಯ ಸೆರೆ ಹಿಡಿದ ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕ ಹರ್ಷ
ಜೈಪುರ ಏಪ್ರಿಲ್ 6: ಹುಲಿ ಹೆಸರು ಕೇಳಿದರೆ ಭಯ ಆಗುತ್ತೆ. ಯಾಕೆಂದರೆ ಹುಲಿ ಕೇವಲ ಒಂದು ಕಾಡು ಬೆಕ್ಕು ಮಾತ್ರವಲ್ಲ. ಅದು ರಾಜಗಾಂಭೀರ್ಯ ಹೊಂದಿರುವ ಪ್ರಾಣಿ. ಹುಲಿ ಸಹಜವಾಗಿ ಒಂಟಿ ಜೀವಿ. ಅದು ಹೆಚ್ಚಾಗಿ ತನ್ನ ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತದೆಯೇ ವಿನಃ ಬೇರೆ ಯಾವುದೇ ಕಾಡು ಪ್ರಾಣಿಗಳೊಂದಿಗೆ ಸೇರುವುದಿಲ್ಲ. ಹುಲಿಗಳು ಶಕ್ತಿಯುತ ಈಜುಗಾರರಂತೆ.
ಬೇಟೆಗಾಗಿ ಎಷ್ಟು ದೂರದವರೆಗೆ ಬೇಕಾದರೂ ಈಜಬಲ್ಲದು. ಕೆಲವೊಮ್ಮೆ ತಮ್ಮ ಬೇಟೆಯನ್ನು ಹುಡುಕುತ್ತಾ ನದಿಗಳನ್ನೇ ದಾಟಿ ಹೋಗುತ್ತವಂತೆ. ಇಂತಹ ಹುಲಿ ತನ್ನ ಎದುರಾಳಿಯನ್ನು ಭೇಟೆಯಾಡುವ ದೃಶ್ಯಗಳನ್ನು ನಾವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡಿದ್ದೇವೆ. ಆದರೆ ಇಲ್ಲೊಂದು ದೃಶ್ಯ ನಿಜಕ್ಕೂ ಬೆರಗಾಗಿಸಿದೆ. ವೈರಲ್ ಆದ ಫೋಟೋದಲ್ಲಿ ಹುಲಿ ತನ್ನದೇ ಜಾತಿಯ ಕ್ರೂರ ಪ್ರಾಣಿಯನ್ನು ಭೇಟೆಯಾಡಿದೆ.

ಚಿರತೆ ತಿಂದ ಹುಲಿ
ಬೆಂಗಳೂರು ಮೂಲದ ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕ ಹರ್ಷ ನರಸಿಂಹಮೂರ್ತಿ ಅವರು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಚಿರತೆಯನ್ನು ತಿನ್ನುತ್ತಿರುವ ಅಪರೂಪದ ಛಾಯಾಚಿತ್ರವನ್ನು ಸೆರೆಹಿಡಿದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.
ಟಿ-101 ಎಂದು ಗುರುತಿಸಲಾದ ಹುಲಿ ಇತ್ತೀಚೆಗೆ ರಾಷ್ಟ್ರೀಯ ಉದ್ಯಾನವನದ ವಲಯ-1 ರಲ್ಲಿ ಕಾಣಿಸಿಕೊಂಡಿದೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವೀಟ್‌ನಲ್ಲಿ ಹರ್ಷ ನರಸಿಂಹಮೂರ್ತಿ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಬೇಟೆಗಾರ ಹುಲಿ ಬೇಟೆಯಾಡಿ ಆರ್‌ಟಿಆರ್‌ನಲ್ಲಿ ಚಿರತೆ ತಿನ್ನುತ್ತಿದೆ. ಈ ಅಪರೂಪದ ದೃಶ್ಯ ಸೆರೆಯಾಗಿದೆ.. ಇಂತಹದನ್ನು ನೀವು ನೋಡಿದ್ದೀರಾ !!" ಎಂದು ನರಸಿಂಹಮೂರ್ತಿ ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಛಾಯಾಗ್ರಾಹಕನ ದೃಷ್ಟಿಯಲ್ಲಿ, ಕಾಡಿನಲ್ಲಿ ಹುಲಿಯನ್ನು ನೋಡುವುದೇ ಒಂದು ಆನಂದ, ಚಿರತೆಯನ್ನು ತಿನ್ನುವುದನ್ನು ಸೆರೆಹಿಡಿಯುವುದು ಅದೃಷ್ಟವೇ ಸರಿ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕ ಹರ್ಷ
ನರಸಿಂಹಮೂರ್ತಿ ಸೆರೆಹಿಡಿಯಲಾದ ಈ ಫೋಟೋಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವನ್ಯಜೀವಿ ಛಾಯಾಗ್ರಹಣದಲ್ಲಿ ಪಳಗಿರುವ ನರಸಿಂಹಮೂರ್ತಿ ತಮ್ಮ ಸಹೋದ್ಯೋಗಿಗಳೊಂದಿಗೆ ರಾಷ್ಟ್ರೀಯ ಉದ್ಯಾನವನದಲ್ಲಿದ್ದಾಗ ಮಾರ್ಚ್ 30 ರಂದು ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದಿದ್ದಾರೆ.

ಮಾರ್ಚ್ 30ರ ಮುಂಜಾನೆ ವಿಶಾಲವಾದ ಅರಣ್ಯವನ್ನು ಪ್ರವೇಶಿಸಿದಾಗ ಹರ್ಷ ಅವರು ಹುಲಿಯ ಹೆಜ್ಜೆ ಗುರುತುಗಳನ್ನು ಗುರುತಿಸಿದರು. ಗುರುತನ್ನು ಸಾಗಿದ ಕಡೆಗೆ ತಮ್ಮ ಪ್ರಯಾಣವನ್ನು ಬೆಳಸಿದರು. ಹುಲ್ಲುಗಾವಲು ಒಣಗಿದ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತು ಸ್ಪಷ್ಟವಾಗಿ ಕಂಡ ಹರ್ಷ ಅದನ್ನು ಹಿಂಬಾಲಿಸಿದ್ದಾರೆ.
ಅಪರೂಪದ ದೃಶ್ಯ ವೈರಲ್
"ಪಗ್ ಮಾರ್ಕ್‌ಗಳು ಸ್ಟ್ರೀಮ್ ಬಳಿ ಕೊನೆಗೊಂಡಿತು ಮತ್ತು ನಾವು ಅಲ್ಲಿಂದ ಬೇರೆ ದಿಕ್ಕಿನಲ್ಲಿ ಹೋದೆವು. ಆದರೆ ಆ ಗುರುತನ್ನು ಹಿಂಪಾಲಿಸಿ ಹೋದರೆ ಏನೋ ಸಿಗುವ ಅನುಮಾನ ಬಂತು. ಹೀಗಾಗಿ ಮತ್ತೆ 9.30 ರ ಹೊತ್ತಿಗೆ ಹಿಂತಿರುಗಿದೆವು. ಎರಡು ಚಿರತೆಗಳು ದೂರದಿಂದ ಹುಲಿಯನ್ನು ನೋಡುತ್ತಿದ್ದವು. ಬಳಿಕ ಅದರ ಹುಲಿ ಹತ್ತಿರ ಹೋಯಿತು. ಅವುಗಳ ಮೇಲೆ ದಾಳಿ ಮಾಡಿತು'' ಎಂದು ಹರ್ಷ ಹೇಳಿದ್ದಾರೆ.
ಕಳೆದ ವರ್ಷ ಅವರು ಇದೇ ರೀತಿಯ ನಿದರ್ಶನವನ್ನು ಸೆರೆಹಿಡಿದಿದ್ದರಿಂದ ಇದು ಅವರಿಗೆ ನಂಬಲಾಗದ ಕ್ಷಣವಾಗಿತ್ತು. "ಇದು ಜೀವನದಲ್ಲಿ ಒಮ್ಮೆ ಮಾತ್ರ ಎಂದು ನಾನು ಭಾವಿಸಿದೆವು. ಅದನ್ನು ಮತ್ತೊಮ್ಮೆ ನೋಡಲು ಸಾಧ್ಯವಾಗಿರುವುದು ಆಶ್ಚರ್ಯವನ್ನುಂಟುಮಾಡಿತು. ಈ ಬಾರಿ, ನಾನು ಅದನ್ನು ಸುಮಾರು 40-50 ಅಡಿ ದೂರದಲ್ಲಿ ಸೆರೆಹಿಡಿಯಲು ಸಾಧ್ಯವಾಯಿತು" ಎಂದು ಅವರು ಹೇಳಿದರು.

ಈ ಫೋಟೋಗಳನ್ನು ಟ್ವೀಟ್ ಮಾಡಿರುವ ಕಸ್ವಾನ್, "ಈ ಘಟನೆಗಳು ಕಾಡಿನಲ್ಲಿ ನಡೆಯುತ್ತವೆ. ಆದರೆ ಅದನ್ನು ಉತ್ತಮ ರೀತಿಯಲ್ಲಿ ಸೆರೆಹಿಡಿಯುವುದು ಅಪರೂಪ. ಇವು ಪ್ರಾದೇಶಿಕ ಮತ್ತು ಉಗ್ರವಾದ ಪ್ರಾಣಿಗಳು. ಈ ನಿದರ್ಶನಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲ'' ಎಂದು ಬರೆದಿದ್ದಾರೆ.
ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ.ಸಂಜಯ ಗುಬ್ಬಿ ಈ ವಿದ್ಯಮಾನವನ್ನು ವಿವರಿಸಿದರು. "ಚಿರತೆಯ ಮೇಲೆ ಹುಲಿಯ ದಾಳಿ ಕಾಡಿನಲ್ಲಿ ಆಗಾಗ್ಗೆ ಸಂಭವಿಸುತ್ತದೆ. ಹುಲಿ ಮತ್ತು ಚಿರತೆಗಳು ಪರಭಕ್ಷಕ ಪೈಪೋಟಿ ನಡೆಸುತ್ತವೆ. ಈ ವೇಳೆ ಅವುಗಳು ಒಂದೇ ರೀತಿಯ ಬೇಟೆಯ ಜಾತಿಗಳನ್ನು ತಿನ್ನುತ್ತವೆ. ಹುಲಿಯು ಗಾತ್ರದಲ್ಲಿ ಹೆಚ್ಚು ದೊಡ್ಡ ಪ್ರಾಣಿಯಾಗಿದೆ. ಇದು ತನ್ನ ಪ್ರತಿಸ್ಪರ್ಧಿಯನ್ನು ಕೊಲ್ಲುವುದು ಸುಲಭ. ಆದರೆ ತನ್ನದೇ ಜಾತಿಯ ಪ್ರಾಣಿಯೊಂದಿಗೆ ಹೋರಾಡುವುದು ನಿಜಕ್ಕೂ ಅಪರೂಪ'' ಎಂದಿದ್ದಾರೆ.












Click it and Unblock the Notifications