ಪಂಜಾಬ್‌ನಲ್ಲಿ ರೈತರಿಂದ ಮೂರು ದಿನಗಳ 'ರೈಲ್ ರೋಕೋ' ಪ್ರತಿಭಟನೆ
ಚಂಡೀಗಢ, ಸೆಪ್ಟೆಂಬರ್ 28: ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆ, ಇತ್ತೀಚಿನ ಪ್ರವಾಹದಿಂದ ಉಂಟಾದ ನಷ್ಟಕ್ಕೆ ಹಣಕಾಸಿನ ಪರಿಹಾರ, ಸಾಲ ಮನ್ನಾ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೂರು ದಿನಗಳ 'ರೈಲ್ ರೋಕೋ' ಚಳವಳಿಯನ್ನು ಪಂಜಾಬ್‌ನ ವಿವಿಧ ರೈತ ಸಂಘಟನೆಗಳ ಸದಸ್ಯರು ಗುರುವಾರ ಹಲವು ಸ್ಥಳಗಳಲ್ಲಿ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹಮ್ಮಿಕೊಂಡಿರುವ ಈ ಆಂದೋಲನವು ಸೆಪ್ಟೆಂಬರ್ 30 ರವರೆಗೆ ಮುಂದುವರಿಯುತ್ತದೆ. ಮೋಗಾ, ಹೋಶಿಯಾರ್‌ಪುರ, ಗುರುದಾಸ್‌ಪುರ, ಜಲಂಧರ್, ತರ್ನ್ ತರನ್, ಸಂಗ್ರೂರ್, ಪಟಿಯಾಲ, ಫಿರೋಜ್‌ಪುರ, ಬಟಿಂಡಾ ಮತ್ತು ಅಮೃತಸರದಲ್ಲಿ ರೈತರು ಆಂದೋಲನ ನಡೆಸಲು ಮುಂದಾಗಿದ್ದಾರೆ.

ಗುರುವಾರ ರೈತರು ಅಮೃತಸರದ ದೇವಿದಾಸ್ ಪುರದಲ್ಲಿ ಅಮೃತಸರ ಹಾಗೂ ದೆಹಲಿ ನಡುವಿನ ರೈಲು ಹಳಿ ಮೇಲೆ ಧರಣಿ ನಡೆಸಿದರು. ಈ ವೇಳೆ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ, ಭಾರತಿ ಕಿಸಾನ್ ಯೂನಿಯನ್ (ಕ್ರಾಂತಿಕಾರಿ), ಬಿಕೆಯು (ಏಕ್ತಾ ಆಜಾದ್), ಆಜಾದ್ ಕಿಸಾನ್ ಸಮಿತಿ ದೋಬಾ, ಬಿಕೆಯು (ಬೆಹ್ರಾಮ್ಕೆ), ಬಿಕೆಯು (ಶಹೀದ್ ಭಗತ್ ಸಿಂಗ್), ಮತ್ತು ಬಿಕೆಯು (ಚೋಟ್ಟು ರಾಮ್) ಸೇರಿದಂತೆ ಹಲವಾರು ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ಉತ್ತರ ಭಾರತದ ಪ್ರವಾಹ ಪೀಡಿತ ಜನರಿಗೆ ಹಣಕಾಸಿನ ಪ್ಯಾಕೇಜ್, ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಮತ್ತು ರೈತರ ಸಾಲ ಮನ್ನಾ ಇವೇ ಮೊದಲಾದವು ಅವರ ಬೇಡಿಕೆಗಳಾಗಿವೆ. ಈ ಬಗ್ಗೆ ಮಾತನಾಡಿರುವ ಅಮೃತಸರದ ಗುರ್‌ಬಚನ್ ಸಿಂಗ್ ಅವರು, ರೈತರು 50,000 ಕೋಟಿ ಉತ್ತರ ಭಾರತದ ರೈತರಿಗೆ ಪ್ರವಾಹ ಪರಿಹಾರ ಪ್ಯಾಕೇಜ್ ನೀಡಬೇಕು. ಸ್ವಾಮೀನಾಥನ್ ಸಮಿತಿ ಶಿಫಾರಸ್ಸಿನಂತೆ ಸಮರ್ಪಕ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ರೈತರ ಮತ್ತು ಕಾರ್ಮಿಕರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಅಲ್ಲದೆ ಈಗ ರದ್ದಾದ ಮೂರು ರೈತ ಕಾನೂನುಗಳ ವಿರುದ್ಧದ ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬ ರೈತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications