ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ ನಡೆಯಬಹುದಾದ 11 ರಾಜ್ಯಗಳಿವು
ನವದೆಹಲಿ, ಆಗಸ್ಟ್ 14: "ಒಂದು ದೇಶ- ಒಂದು ಚುನಾವಣೆ" ಎಂಬ ಬಿಜೆಪಿ ಪ್ರಸ್ತಾವ ಸಾಕಾರ ಆಗುವುದು ಅಷ್ಟು ಸುಲಭ ಏನೂ ಇಲ್ಲ. ಏಕೆಂದರೆ, ಎಲ್ಲ ರಾಜಕೀಯ ಪಕ್ಷಗಳು ಇದಕ್ಕೆ ಒಮ್ಮತ ಸೂಚಿಸುವುದು ಸುಲಭ ಇಲ್ಲ. ಆದರೆ ಇನ್ನೇನು ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಬೇಕಿರುವ ರಾಜ್ಯಗಳಿಗಾದರೂ ಒಟ್ಟಿಗೆ ಲೋಕಸಭೆ- ವಿಧಾನಸಭೆ ಚುನಾವಣೆ ನಡೆಸಬಹುದು ಎಂದು ಬಿಜೆಪಿ ಮೂಲಗಳು ಹೇಳಿವೆ.
2019 ಹಾಗೂ 2024ನೇ ಇಸವಿಯಲ್ಲಿ ನಡೆಯಬೇಕಿರುವ ಲೋಕಸಭೆ ಚುನಾವಣೆಗೆ ಈ ರೀತಿ ಮಾಡಬೇಕು ಅಂದರೂ ಕೆಲವು ಕಾನೂನಾತ್ಮಕ ಬದಲಾವಣೆಗಳನ್ನು ಮಾಡಬೇಕು. ರಾಜಕೀಯ ಪಕ್ಷಗಳ ಒಪ್ಪಿಗೆ ಬೇಕು. ಇನ್ನು ಎಲ್ಲೆಲ್ಲಿ ಎನ್ ಡಿಎ ಮೈತ್ರಿ ಕೂಟಗಳು ಅಧಿಕಾರದಲ್ಲಿ ಇವೆಯೋ ಅಲ್ಲೆಲ್ಲ ಈ ನಿಯಮ ಜಾರಿಗೆ ತಂದರೆ ಭಾಗಶಃ ಬಿಜೆಪಿಯ ಗುರಿ ತಲುಪಿದಂತಾಗುತ್ತದೆ.
ಸದ್ಯಕ್ಕೆ ಆ ರೀತಿ ಒಟ್ಟಿಗೆ ಚುನಾವಣೆ ನಡೆಸಬಹುದು ಎಂದು ಕಾಗದದ ಮೇಲೆ 11 ರಾಜ್ಯಗಳು ಕಾಣಿಸುತ್ತಿವೆ. ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಲೋಕಸಭೆ ಚುನಾವಣೆ ಜತೆಗೆ ನಡೆಯಬೇಕಿದೆ. ಇನ್ನೇನು ಕೆಲ ತಿಂಗಳಲ್ಲಿ ಅವಧಿ ಪೂರೈಸುವ ಹರಿಯಾಣ ಹಾಗೂ ಜಾರ್ಖಂಡ್ ಗಳಲ್ಲಿ ಮುಂಚಿತವಾಗಿ ವಿಧಾನಸಭೆ ಚುನಾವಣೆ ನಡೆಸಬಹುದು.

ನಾಲ್ಕು ರಾಜ್ಯಗಳಲ್ಲಿ ಡಿಸೆಂಬರ್ ನಲ್ಲೇ ಚುನಾವಣೆ ನಡೆಯಬೇಕು
ಆದರೆ, ಪ್ರಶ್ನೆ ಇರುವುದು ಎಲ್ಲೆಲ್ಲಿ ಲೋಕಸಭಾ ಚುನಾವಣೆಗೆ ಮುನ್ನವೇ ವಿಧಾನಸಭಾ ಚುನಾವಣೆ ಇದೆಯೋ ಆ ರಾಜ್ಯಗಳಲ್ಲಿ. ಅಂದರೆ, ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ತಾನ್, ಮಿಜೋರಾಂನಲ್ಲಿ ಈ ವರ್ಷದ ಡಿಸೆಂಬರ್ ನ ಆರಂಭದಲ್ಲೇ ಚುನಾವಣೆ ನಡೆಯಬೇಕಿದೆ. ಹಾಗಾದಲ್ಲಿ ಆ ರಾಜ್ಯಗಳಲ್ಲಿ ಎರಡು-ಮೂರು ತಿಂಗಳ ಕಾಲ ಕೇಂದ್ರವು ಅಧಿಕಾರ ನಡೆಸಿ, ಆ ನಂತರ ಲೋಕಸಭೆ ಚುನಾವಣೆ ಜತೆಗೆ ಹೊಸ ಜನಾದೇಶ ಪಡೆಯಲು ಮುಂದಾಗಬಹುದು.

ಮಿಜೋರಾಂನಲ್ಲಿ ಒಪ್ಪಿಗೆ ಸಿಗುವುದು ಕಷ್ಟ
ರಾಜಕೀಯವಾಗಿ ನೋಡಿದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಮಿಜೋರಾಂ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಬಹುದು. ದೇಶದ ಹಿತವನ್ನು ಗಮನಿಸಿ, ಕೇಂದ್ರದ ಆಡಳಿತಕ್ಕೆ ನಾವು ಒಪ್ಪಿಗೆ ಕೊಟ್ಟಿದ್ದೇವೆ ಎಂದು ಈ ರಾಜ್ಯಗಳ ಮುಖ್ಯಮಂತ್ರಿಗಳು ಸಮಜಾಯಿಷಿ ನೀಡಬಹುದು. ಆ ಮೂಲಕ ಒಂದು ದೇಶ-ಒಂದು ಚುನಾವಣೆಗೆ ಇನ್ನಷ್ಟು ಬಲ ಬರಬಹುದು.

ಹನ್ನೊಂದು ರಾಜ್ಯಗಳ ಪಟ್ಟಿ ಹೀಗಿದೆ
ಆದ್ದರಿಂದ ಈಗಿನ ಸನ್ನಿವೇಶದಲ್ಲಿ ಬಿಜೆಪಿ ಗುರಿ ಈಡೇರಲು ಸಾಧ್ಯವಿದೆಯೆ? ಹೌದು, ಹಾಗೆ ಕಾಣುತ್ತಿರುವುದು ಹನ್ನೊಂದು ರಾಜ್ಯಗಳು- ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢ, ಮಿಜೋರಾಂ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ಹರಿಯಾಣ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭೆ ಚುನಾವಣೆಗಳು ಲೋಕಸಭೆ ಚುನಾವಣೆ ಜತೆಗೆ ನಡೆಯಬಹುದು.

ಕರ್ನಾಟಕದಲ್ಲಿ ಮೈತ್ರಿ ಸರಕಾರ ಬೀಳಲೆಂಬ ನಿರೀಕ್ಷೆ
ಇನ್ನು ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಬಿದ್ದು ಹೋಗುತ್ತದೆ ಎಂದು ಕಾಯುತ್ತಿರುವ ಗುಂಪು ಕೂಡ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಆಡಳಿತಾರೂಢ ಸರಕಾರದ ವಿರುದ್ಧ ಬಂದುಬಿಟ್ಟರೆ ಅಥವಾ ಸರಕಾರದಲ್ಲೇ ಭಿನ್ನಮತ ಮೂಡಿ, ಮತ್ತೆ ಚುನಾವಣೆಗೆ ಹೋಗುವುದಾದರೆ ಕರ್ನಾಟಕದಲ್ಲೂ ಲೋಕಸಭೆ ಜತೆಗೆ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂಬುದು ರಾಜ್ಯ ಬಿಜೆಪಿಯೊಳಗಿನ ನಿರೀಕ್ಷೆ.












Click it and Unblock the Notifications