ಅಯೋಧ್ಯೆಗೆ ಭೇಟಿ ನೀಡುವ ಭಕ್ತರೇ ಹುಷಾರ್! ರಾಮನನ್ನು ಕಣ್ತುಂಬಿಕೊಳ್ಳುವಾಗ ಮೈಮರೆಯದಿರಿ... ನಿಮ್ಮಿಂದಿರಬಹುದು ಕಿಲಾಡಿ ಕಳ್ಳರು...!
ಅಯೋಧ್ಯೆ ಜನವರಿ 24: ರಾಮನ ದರ್ಶನಕ್ಕಾಗಿ ಭಕ್ತರ ದಂಡು ಅಯೋಧ್ಯೆಗೆ ಹರಿದುಬರುತ್ತಿದ್ದಂತೆ ಫೋನ್, ಹಣ, ಎಟಿಎಂ ಕಾರ್ಡ್‌ಗಳ ಕಳವು ಹೆಚ್ಚಾಗಿದೆ. ರಾಮನನ್ನು ಕಣ್ತುಂಬಿಕೊಳ್ಳುವಾಗ ಮೈಮರೆಯುವ ಭಕ್ತರಿಗೆ ಯಾಮಾರಿಸಿ ಕಿಲಾಡಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ.
ಅಯೋಧ್ಯೆಯ ಹೊಸ ರಾಮ ಮಂದಿರವನ್ನು ಜನವರಿ 22ರಂದು ಮಹಾ ಪ್ರಾಣ ಪ್ರತಿಷ್ಠಾದ ನಂತರ ಮಂಗಳವಾರ ಮುಂಜಾನೆ ಸಾರ್ವಜನಿಕರ ದರ್ಶನಕ್ಕಾಗಿ ತೆರೆಯಲಾಯಿತು. ಈಗಾಗಲೇ 2.5 ಲಕ್ಷದಿಂದ 3 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನೂಕುನುಗ್ಗಲು ಉಂಟಾಗುತ್ತಿದ್ದು ಇದರ ಲಾಭವನ್ನು ಜೇಬುಗಳ್ಳರು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ ದೇವಾಲಯದ ದ್ವಾರಗಳಲ್ಲಿ ಜನಸಂದಣಿ ಕಾಣಿಸಿಕೊಂಡಿತು. ರಾಮ ಲಲ್ಲಾ ಅವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯುಪಿ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್, ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಅವರು ದೇವಾಲಯದ ಗರ್ಭ ಗೃಹದಲ್ಲಿ ಉಪಸ್ಥಿತರಿದ್ದರು.
ದೇವಾಲಯದ ದ್ವಾರಗಳನ್ನು ಬೆಳಿಗ್ಗೆ 7:00 ಗಂಟೆಗೆ ತೆರೆಯಲಾಗಿತ್ತು. ರಾತ್ರಿಯಿಂದಲೇ ದರ್ಶನಕ್ಕಾಗಿ ಉತ್ಸುಕರಾಗಿರುವ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದರು. ಪೂರ್ಣಿಮಾ ಎಂಬುವವರು ರಾಮ ಲಲ್ಲಾನ ದರ್ಶನಕ್ಕಾಗಿ ಕೆನಡಾದಿಂದ ಅಯೋಧ್ಯೆಗೆ ಬಂದಿದ್ದರು. ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವ ಅವಕಾಶವನ್ನು ಪಡೆಯುವ ಮೊದಲು ಹೆಚ್ಚು ಗಂಟೆಗಳ ಕಾಲ ಸರದಿಯಲ್ಲಿ ಕಾಯುತ್ತಿದ್ದರು. ಈ ವೇಳೆ ಅವರ ಬ್ಯಾಗ್‌ನಲ್ಲಿದ್ದ ಹಣ ಮತ್ತು ಇತರ ವಸ್ತುಗಳು ಕಾಣೆಯಾಗಿವೆ. ಬ್ಲೇಡ್‌ನಿಂದ ಅವರ ಬ್ಯಾಗ್ ಅನ್ನು ಹರಿಯಲಾಗಿದೆ.

ಸ್ನೇಹಿತೆ ಪ್ರಾಪ್ತಿ ಅವರು ಅಯೋಧ್ಯೆ ಪ್ರವಾಸದಲ್ಲಿ ಪೂರ್ಣಿಮಾ ಅವರ ಜೊತೆಗಿದ್ದ ಆಧಾರ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರ ದಾಖಲೆಗಳನ್ನು ಕದಿಯಲಾಗಿದೆ ಎಂದು ಹೇಳಿದ್ದಾರೆ.
ನಗರದ ಹೊರಗಿನ ಕ್ರಿಮಿನಲ್ ಗ್ಯಾಂಗ್ ಕಳ್ಳತನದ ಹಿಂದೆ ಇರಬಹುದೆಂದು ಸ್ಥಳೀಯ ನಿವಾಸಿಗಳು ಶಂಕಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಕಳ್ಳತನದ ದೂರುಗಳು ಹೆಚ್ಚಾಗಿವೆ. 20ಕ್ಕೂ ಹೆಚ್ಚು ಜನರು ಈ ಬಗ್ಗೆ ದೂರು ನೀಡಿದ್ದಾರೆ ಎಂದು ಸೈಬರ್‌ಕೆಫೆ ಮಾಲೀಕರನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದನ್ನು ತಪ್ಪಿಸುವ ಸಲುವಾಗಿ ಭಕ್ತರಿಗೆ ದರ್ಶನದ ಸಮಯ ಮತ್ತು ಸಲಹೆಯನ್ನು ನೀಡಿದೆ. ಬೆಳಗ್ಗೆ 7 ರಿಂದ 11.30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ರಾಮ್ ಲಲ್ಲಾ ವಿಗ್ರಹವನ್ನು ವೀಕ್ಷಿಸಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಪ್ರತಿದಿನ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ದೇವಸ್ಥಾನವನ್ನು ದರ್ಶನಕ್ಕಾಗಿ ಮುಚ್ಚಲಾಗುತ್ತದೆ ಎಂದು ಹೇಳಿದೆ. ಹೀಗಾಗಿ ಭಕ್ತರು ದರ್ಶನದ ಸಮಯಕ್ಕೆ ಮಾತ್ರ ದೇವಸ್ಥಾನದ ಆವರಣಕ್ಕೆ ಬರಬೇಕು ಸುರಕ್ಷತವಾಗಿಯೋ ದೇವರ ದರ್ಶನ ಪಡೆಯಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ. ಜೊತೆಗೆ ಜನ ಸಂಖ್ಯೆ ಹೆಚ್ಚಿರುವ ಈ ಸಮಯದಲ್ಲೇ ದೇವರ ದರ್ಶನ ಪಡೆಯುವುದನ್ನು ತಪ್ಪಿಸಿ ಎಂದು ಮನವಿ ಮಾಡಲಾಗಿದೆ.












Click it and Unblock the Notifications