
'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಬಗ್ಗೆ ಇಸ್ರೇಲಿ ನಿರ್ದೇಶಕ ಹೇಳಿದ್ದು ಸತ್ಯವಾಗಿದೆ ಎಂದ ಶಿವಸೇನಾ
ಮುಂಬೈ, ನವೆಂಬರ್ 29: ಗೋವಾ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ 'ದಿ ಕಾಶ್ಮೀರ್ ಫೈಲ್' ಬಗ್ಗೆ ಇಸ್ರೇಲಿ ಚಲನಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ಹೇಳಿಕೆ ನೀಡಿದ್ದರು. ಈ ವಿಚಾರವೀಗ ರಾಷ್ಟ್ರ ರಾಜಕಾರಣದಲ್ಲಿ ಕಲ್ಲೋಲವನ್ನೇ ಸೃಷ್ಟಿಸಿದೆ.
ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದ ನಾದವ್, 'ದಿ ಕಾಶ್ಮೀರ ಫೈಲ್ಸ್' ಚಿತ್ರವನ್ನು ಪ್ರೊಪಗಂಡಾ ಹರಡುವ ಅಸಭ್ಯ ಸಿನಿಮಾ ಎಂದು ಕರೆದಿದ್ದಾರೆ.

ನಾದವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಜಯ್ ರಾವುತ್
ಕಾಶ್ಮೀರ್ ಫೈಲ್ಸ್ ಬಗ್ಗೆ ನಾದವ್ ಹೇಳಿದ್ದು ನಿಜ. ಈ ಸಿನೆಮಾ ಬಂದ ನಂತರ ಒಂದು ಪಕ್ಷದ ವಿರುದ್ಧ ಇನ್ನೊಂದು ಪಕ್ಷದವರು ಅಪಪ್ರಚಾರ ಮಾಡಿದರು. ಒಂದು ಪಕ್ಷ ಹಾಗೂ ಸರ್ಕಾರ ಈ ಚಿತ್ರದ ಪ್ರಚಾರದಲ್ಲಿ ನಿರತವಾಗಿತ್ತು ಎಂದು ತಿಳಿಸಿದ್ದಾರೆ.
ಈ ಚಿತ್ರದ ನಂತರ ಕಾಶ್ಮೀರದಲ್ಲಿ ಗರಿಷ್ಠ ಸಂಖ್ಯೆಯ ಹತ್ಯೆಗಳು ಸಂಭವಿಸಿವೆ. ಕಾಶ್ಮೀರ ಪಂಡಿತರು, ಭದ್ರತಾ ಸಿಬ್ಬಂದಿಯನ್ನು ಕೊಲ್ಲಲಾಗಿದೆ ಎಂದು ಸಂಜಯ್ ರಾವುತ್ ಆರೋಪಿಸಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯೆಗಳು ನಡೆಯುತ್ತಿದ್ದಾಗ 'ದಿ ಕಾಶ್ಮೀರ್ ಫೈಲ್ಸ್' ಜನರು ಎಲ್ಲಿದ್ದರು? ಇದನ್ನು ಕಾಶ್ಮೀರಿ ಪಂಡಿತರ ಮಕ್ಕಳೂ ಕೇಳುತ್ತಿದ್ದಾರೆ. ಪಂಡಿತರ ಹತ್ಯೆ ಸಂದರ್ಭದಲ್ಲಿ ಯಾರೂ ಮುಂದೆ ಬರಲಿಲ್ಲ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ನಾದವ್ ಹೇಳಿಕೆಗೆ ನಿರ್ದೇಶಕ ಅಗ್ನಿಹೋತ್ರಿ ಪ್ರತಿಕ್ರಿಯೆ
ದಿ ಕಾಶ್ಮೀರ್ ಪೈಲ್ಸ್ ಚಿತ್ರದಲ್ಲಿ ತೋರಿಸಿದ್ದೆಲ್ಲವೂ ನಿಜವಲ್ಲ ಎಂದು ಯಾರಾದರೂ ಸಾಬೀತುಪಡಿಸಿದರೆ ನಾನು ಸಿನಿಮಾ ಮಾಡುವುದನ್ನು ನಿಲ್ಲಿಸುವುದಾಗಿ ಅಗ್ನಿಹೋತ್ರಿ ಹೇಳಿದ್ದಾರೆ.
'ನಾನು ನಿರ್ದೇಶನ ಮಾಡಿರುವ ಕಾಶ್ಮೀರ್ ಫೈಲ್ಸ್ ಒಂದು ಪ್ರಪೊಗಂಡಾ ಚಲನಚಿತ್ರ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಹಾಗಾಗಿ, ಇಂದು ನಾನು ದೇಶದ ಎಲ್ಲಾ ಬುದ್ಧಿಜೀವಿಗಳಿಗೆ, ನಗರ ನಕ್ಸಲರಿಗೆ ಮತ್ತು ಇಸ್ರೇಲ್‌ನ ಈ ಮಹಾನ್ ಚಲನಚಿತ್ರ ನಿರ್ಮಾಪಕರಿಗೆ ಸವಾಲು ಹಾಕುತ್ತೇನೆ. ಅವರು ಕಾಶ್ಮೀರ ಫೈಲ್ಸ್‌ನ ಒಂದೇ ಒಂದು ಶಾಟ್, ಸಂಭಾಷಣೆ, ಘಟನೆಯನ್ನು ಸುಳ್ಳು ಎಂದು ಸಾಬೀತುಪಡಿಸಿದರೆ, ನಾನು ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸುತ್ತೇನೆ' ಎಂದು ಅಗ್ನಿಹೋತ್ರಿ ಸವಾಲು ಹಾಕಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದ ಹುಟ್ಟುಹಾಕಿದ ನಾದವ್ ಹೇಳಿಕೆ
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಇಸ್ರೇಲಿ ನಿರ್ದೇಶಕ ನಾದವ್, 'ಈ ಅಂತರಾಷ್ಟ್ರೀಯ ಚಿತ್ರೋತ್ಸವದ 15ನೇ ಚಿತ್ರ, ದಿ ಕಾಶ್ಮೀರ್ ಫೈಲ್ಸ್‌ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ ಹಾಗೂ ಆಘಾತಕ್ಕೊಳಗಾಗಿದ್ದೇವೆ. ಅದು ಅಪಾಯಕಾರಿ ಸಿದ್ಧಾಂತವನ್ನು ಪ್ರಚಾರ ಮಾಡುವ ಅಸಭ್ಯ ಸಿನಿಮಾ' ಎಂದು ಟೀಕಿಸಿದ್ದಾರೆ.
'ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ(ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ) ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಲು ಸೂಕ್ತ ಚಿತ್ರವಲ್ಲ ಇದು ಎಂದು ಅನ್ನಿಸಿತು. ವೇದಿಕೆಯಲ್ಲಿ ನಿಮ್ಮೊಂದಿಗೆ ಈ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ನನಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಈ ಚಿತ್ರೋತ್ಸವದ ಮನೋಭಾವವು ಕಲೆಗೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಸಹ ಸ್ವೀಕರಿಸುವುದು ಆಗಿದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಸ್ರೇಲಿ ನಿರ್ದೇಶಕರ ಕ್ಷಮೆಗೆ ಆಗ್ರಹ
ನಾದವ್ ಹೇಳಿಕೆಗೆ ಭಾರತ ಮತ್ತು ಇಸ್ರೇಲ್‌ನ ಅನೇಕ ಅಧಿಕಾರಿಗಳು, ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ಪ್ರತಿಕ್ರಿಯಿಸಿದ್ದಾರೆ. ನಾದವ್ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಅವರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ.
ಉಗ್ರರಿಂದ ಹತ್ಯೆಗೊಳಗಾದ ಕಾಶ್ಮೀರಿ ಪಂಡಿತರ ಕುಟುಂಬಗಳು 1990ರಲ್ಲಿ ಕಾಶ್ಮೀರವನ್ನು ತೊರೆದು ವಲಸೆ ಹೋಗಿದ್ದವು. ಇದನ್ನು 'ದಿ ಕಾಶ್ಮೀರ್ ಫೈಲ್ಸ್'ನಲ್ಲಿ ಚಿತ್ರಿಸಲಾಗಿದೆ. ಮಾರ್ಚ್ 11 ರಂದು ಬಿಡುಗಡೆಯಾದ ಚಿತ್ರವು ದೇಶದಲ್ಲಿ ಹಲವು ವಿವಾದಗಳಿಗೆ ಗ್ರಾಸವಾಗಿದೆ.