ಉತ್ತರಾಖಂಡ: ಗಂಗೋತ್ರಿಯಲ್ಲಿ ಲವ್ ಜಿಹಾದ್ ಗದ್ದಲ, ವ್ಯಾಪಾರ ಸ್ಥಳಗಳನ್ನು ಬಿಟ್ಟು ಹೊರಟ ಅಲ್ಪಸಂಖ್ಯಾತರು!
ಗಂಗೋತ್ರಿ, ಜೂನ್. 12: ಉತ್ತರಾಖಂಡದ ಉತ್ತರಕಾಶಿಯ ಪುರೋಲಾ ಪಟ್ಟಣದಲ್ಲಿ ಕೋಮು ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೆ ಮೇ 26 ರಂದು ಅನ್ಯಕೋಮಿನ ಅಪ್ರಾಪ್ತ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಿದ ಆರೋಪದ ಮೇಲೆ ಅಲ್ಪಸಂಖ್ಯಾತ ಸಮುದಾಯದ ಒಬ್ಬ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇದಾದ ನಂತರ ಇದೀಗ ಜಿಲ್ಲೆಯ ಗಂಗೋತ್ರಿ ಪಟ್ಟಣಕ್ಕೂ ಈ ಗಲಾಟೆ ವ್ಯಾಪಿಸಿದೆ.
ರಾಜ್ಯಾದ್ಯಂತ ಹೆಚ್ಚುತ್ತಿರುವ "ಲವ್ ಜಿಹಾದ್" ಘಟನೆಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಗಂಗೋತ್ರಿಯಲ್ಲಿ ಶನಿವಾರ ಅಂಗಡಿಗಳನ್ನು ಮುಚ್ಚಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಸ್ಥಳೀಯ ವ್ಯಾಪಾರಿಗಳು ರಸ್ತೆ ಬದಿಯ ಸಣ್ಣ ವ್ಯಾಪಾರಗಳಲ್ಲಿ ತೊಡಗಿರುವ ಹೊರಗಿನಿಂದ ಬಂದವರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇದು ಚಾರ್ ಧಾಮ್ ಯಾತ್ರಾ ಪಟ್ಟಣಗಳಲ್ಲಿ ಒಂದಾದ ಗಂಗೋತ್ರಿಯ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಆಡಳಿತ ಮಂಡಳಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು, ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಅಲ್ಪಸಂಖ್ಯಾತ ಸಮುದಾಯದ 32 ವರ್ಷದ ಅಂಗಡಿ ನಡೆಸುವ ವ್ಯಾಪಾರಿ ಯುವಕ ತನ್ನ ಜಮೀನುದಾರನು ಬಾಡಿಗೆ ಅಂಗಡಿಯನ್ನು ಖಾಲಿ ಮಾಡುವಂತೆ ಹೇಳಿದ ನಂತರ ಪುರೋಲಾವನ್ನು ಬಿಡಲು ಸಿದ್ಧರಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಪುರೋಲಾದಲ್ಲಿ ವಾಸವಿದ್ದು, ಗಾರ್ಮೆಂಟ್ ವ್ಯಾಪಾರ ನಡೆಸುತ್ತಿರುವ ಅಂಗಡಿಯವರು ತಮ್ಮ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.
"ನನ್ನ ತಂದೆ 30 ವರ್ಷಗಳ ಹಿಂದೆ ಪುರೋಲಾಕ್ಕೆ ಬಂದು ಗಾರ್ಮೆಂಟ್ ವ್ಯಾಪಾರವನ್ನು ಪ್ರಾರಂಭಿಸಿದರು. ಆದರೆ, ಕೋಮು ಉದ್ವಿಗ್ನತೆಯಿಂದಾಗಿ, ನಾವು ಈಗ ಅಂಗಡಿಯನ್ನು ಖಾಲಿ ಮಾಡುವ ಒತ್ತಡಕ್ಕೆ ಒಳಗಾಗಿದ್ದೇವೆ. ವರ್ಷಗಳ ಹಿಂದೆ ನನ್ನ ತಂದೆ ನಿರ್ಮಿಸಿದ ನಮ್ಮ ಸ್ವಂತ ಮನೆಯನ್ನು ಸಹ ಬಿಟ್ಟುಬಿಡುತ್ತೇವೆ. ಸಾರಿಗೆ ಬಸ್‌ಗಳು ಬರಲು ನಾವು ಕಾಯುತ್ತಿದ್ದೇವೆ. ಒಂದೆರಡು ದಿನಗಳಲ್ಲಿ ಪಟ್ಟಣವನ್ನು ಬಿಡುತ್ತೇವೆ" ಎಂದು ನೋವಿನಿಂದ ತಮ್ಮ ಅಸಹಾಯಕತೆ ಹೇಳಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಅಲ್ಪಸಂಖ್ಯಾತ ಸಮುದಾಯದ ಒಟ್ಟು 11 ಮಂದಿ ಅಂಗಡಿಕಾರರು ಪುರೋಲಾದಿಂದ ವಲಸೆ ಹೋಗಿದ್ದಾರೆ. ಆದರೆ ಕೆಲವು ಅಪರಿಚಿತರು ಕಳೆದ ವಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಾಪಾರಿಗಳ ಮುಚ್ಚಿದ ಅಂಗಡಿಗಳ ಮೇಲೆ ವ್ಯಾಪಾರವನ್ನು ಸ್ಥಗಿತಗೊಳಿಸಿ ಪಟ್ಟಣವನ್ನು ತೊರೆಯಿರಿ ಎಂದು ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ನಂತರ ಹಲವು ಮಂದಿ ವ್ಯಾಪಾರಸ್ಥರು ಬಾರ್ಕೋಟ್ ಮತ್ತು ನೌಗಾಂವ್ ಪಟ್ಟಣಗಳನ್ನು ತೊರೆದಿದ್ದಾರೆ.
ಇತ್ತ, ಉತ್ತರಕಾಶಿಗೆ ಎರಡು ದಿನಗಳ ಭೇಟಿ ನೀಡಿರುವ ಸಿಎಂ ಪುಷ್ಕರ್ ಸಿಂಗ್ ಧಾಮಿ, ರಾಜ್ಯದಲ್ಲಿ ಶಾಂತಿ ಕದಡಲು ಅಥವಾ ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications